ವಿದ್ಯಾರ್ಥಿನಿಯ ಹತ್ಯೆಗೈದು ಮರಕ್ಕೆ ನೇತುಹಾಕಿದ ಪ್ರಕರಣ: ಮೂವರ ಬಂಧನ
Update: 2018-10-03 20:04 IST
ಲಕ್ನೊ, ಅ.3: 15ರ ಹರೆಯದ ವಿದ್ಯಾರ್ಥಿನಿಯನ್ನು ಥಳಿಸಿ ಹತ್ಯೆಗೈದು ಮರಕ್ಕೆ ನೇತು ಹಾಕಿದ ಪ್ರಕರಣ ಉತ್ತರಪ್ರದೇಶದಲ್ಲಿ ಮಂಗಳವಾರ ನಡೆದಿದ್ದು, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೇನ್ಪುರಿ ಗ್ರಾಮದ ಹವಿಲಿಯಾ ಎಂಬಲ್ಲಿ ಈ ಘಟನೆ ನಡೆದಿದೆ. ಪ್ರಥಮ ಪಿಯುಸಿ ವಿದ್ಯಾರ್ಥಿನಿ ಶಾಲೆಯಲ್ಲಿ ನಡೆದಿದ್ದ ಗಾಂಧೀಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮನೆಗೆ ವಾಪಸಾಗುತ್ತಿದ್ದಾಗ ಆಕೆಯನ್ನು ನಾಲ್ಕು ಮಂದಿ ಆರೋಪಿಗಳು ಅಡ್ಡಗಟ್ಟಿದ್ದು, ಬಳಿಕ ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಆಕೆ ಮೃತಪಟ್ಟ ಬಳಿಕ ಆಕೆಯ ಚೂಡಿದಾರದ ಶಾಲಿನಿಂದ ಕುತ್ತಿಗೆಗೆ ಬಿಗಿದು ಮರಕ್ಕೆ ನೇಣು ಹಾಕಿದ್ದಾರೆ ಎಂದು ವಿದ್ಯಾರ್ಥಿನಿಯ ಸಹೋದರ ದೂರು ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆದಿಲ್ಲ ಎಂಬುದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದುಬಂದಿದೆ. ತಲೆಮರೆಸಿಕೊಂಡಿರುವ ನಾಲ್ಕನೇ ಆರೋಪಿಯ ಪತ್ತೆಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.