ಆರ್ಥಿಕ ಮುಗ್ಗಟ್ಟು: ಜೆಟ್ ಏರ್‌ವೇಸ್ ಸಿಬ್ಬಂದಿಗಳಿಗೆ ವೇತನ ಪಾವತಿ ವಿಳಂಬ
Update: 2018-10-03 20:11 IST
ಮುಂಬೈ, ಅ.3: ಮುಂಬೈ ಮೂಲದ ವಿಮಾನಯಾನ ಸಂಸ್ಥೆ ಜೆಟ್ ಏರ್‌ವೇಸ್ ಇದೀಗ ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದು ಹಲವು ಸಿಬ್ಬಂದಿಗಳಿಗೆ ಸೆಪ್ಟೆಂಬರ್ ತಿಂಗಳ ವೇತನ ಪಾವತಿಯಾಗಿಲ್ಲ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.
ಸುಮಾರು 16,000 ಸಿಬ್ಬಂದಿಗಳನ್ನು ಹೊಂದಿರುವ ನರೇಶ್ ಗೋಯಲ್ ನಿಯಂತ್ರಣದ ಜೆಟ್‌ಏರ್‌ವೇಸ್ ಸಂಸ್ಥೆಯ ಎ1ರಿಂದ ಎ5 ಹಂತದ ಹಾಗೂ ಕ್ಯೂ1 ಮತ್ತು ಕ್ಯೂ2 ಹಂತದ ಸಿಬ್ಬಂದಿಗಳು ತಿಂಗಳಿಗೆ ಸುಮಾರು 75,000 ರೂ. ವೇತನ ಪಡೆಯುತ್ತಿದ್ದು ಇವರ ಸೆಪ್ಟೆಂಬರ್ ತಿಂಗಳ ಸಂಬಳವನ್ನು ಅಕ್ಟೋಬರ್ 1ರಂದು ನೀಡಲಾಗಿದೆ. ಎಂ1, ಎಂ2, ಇ1 ಮತ್ತಿತರ ಹಂತದ ಸಿಬ್ಬಂದಿಗಳ ಸೆಪ್ಟೆಂಬರ್ ತಿಂಗಳ ವೇತನ ಪಾವತಿಯಾಗಿಲ್ಲ ಎಂದು ತಿಳಿಸಲಾಗಿದೆ.