×
Ad

ದೃಷ್ಟಿಹೀನರಿಗೆ ಕರೆನ್ಸಿ ನೋಟುಗಳನ್ನು ಗುರುತಿಸಲು ನೆರವಾಗುವ ಆ್ಯಪ್ ಅಭಿವೃದ್ಧಿಗೆ ಚಿಂತನೆ

Update: 2018-10-03 20:14 IST

ಹೊಸದಿಲ್ಲಿ, ಅ.3: ದೃಷ್ಟಿಹೀನರು ಬ್ಯಾಂಕ್ ನೋಟುಗಳನ್ನು ಗುರುತಿಸಲು ಅನುಕೂಲ ಮಾಡಿಕೊಡುವ ಆ್ಯಪ್ ಅನ್ನು ಅಭಿವೃದ್ಧಿಗೊಳಿಸುವ ಬಗ್ಗೆ ವಿಶ್ಲೇಷಣೆ ನಡೆಸಲಾಗುತ್ತಿದೆ ಎಂದು ಆರ್‌ಬಿಐ ದಿಲ್ಲಿ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ದೃಷ್ಟಿಹೀನರಿಗೂ ಗುರುತಿಸಲು ಅನುಕೂಲವಾಗುವಂತೆ ಬ್ಯಾಂಕ್ ನೋಟ್‌ಗಳ ವಿನ್ಯಾಸವನ್ನು ಬದಲಿಸಬೇಕೆಂದು ಕೋರಿ ಅಖಿಲ ಭಾರತ ಅಂಧರ ಮಹಾಒಕ್ಕೂಟ ಹಾಗೂ ಸಂಸ್ಥೆಯ ಕಾರ್ಯದರ್ಶಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಸಂದರ್ಭ ಆರ್‌ಬಿಐ ಈ ಮಾಹಿತಿ ನೀಡಿದೆ. ಕರೆನ್ಸಿ ನೋಟಿನ ವಿನ್ಯಾಸ ಬದಲಿಸುವುದು ಗಂಭೀರ ವಿಷಯವಾಗಿದ್ದು ಕಾರ್ಯಸಾಧ್ಯತೆ, ವೆಚ್ಚ ಹಾಗೂ ಇತರ ಅಂಶಗಳನ್ನು ಪರಿಗಣಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ದೃಷ್ಟಿಹೀನರಿಗೂ ಗುರುತಿಸಲು ಸಾಧ್ಯವಾಗುವಂತಹ ವ್ಯವಸ್ಥೆ ಅಭಿವೃದ್ಧಿಪಡಿಸುವುದು ಮುಂತಾದ ಪರ್ಯಾಯ ಕ್ರಮಗಳ ಬಗ್ಗೆ ಆರ್‌ಬಿಐ ಚಿಂತನೆ ನಡೆಸುತ್ತಿದೆ ಎಂದು ದಿಲ್ಲಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರಾಜೇಂದ್ರ ಮೆನನ್ ಹಾಗೂ ನ್ಯಾಯಾಧೀಶ ವಿ.ಕಾಮೇಶ್ವರ ರಾವ್ ಅವರಿದ್ದ ನ್ಯಾಯಪೀಠಕ್ಕೆ ಸಲ್ಲಿಸಿದ ಅಫಿದಾವಿತ್‌ನಲ್ಲಿ ಆರ್‌ಬಿಐ ತಿಳಿಸಿದೆ.

2,000, 500, 200 ಮತ್ತು 50 ರೂ. ಮುಖಬೆಲೆಯ ಕರೆನ್ಸಿ ನೋಟುಗಳನ್ನು ಗುರುತಿಸಲು ದೃಷ್ಟಿಹೀನರಿಗೆ ಸಮಸ್ಯೆಯಾಗುತ್ತಿದೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News