ಕ್ರೈಸ್ತ ಸನ್ಯಾಸಿನಿಯ ಅತ್ಯಾಚಾರ ಪ್ರಕರಣ: ಬಿಷಪ್ ಫ್ರಾಂಕೊ ಮುಲಕ್ಕಲ್‌ಗೆ ಜಾಮೀನು ನಿರಾಕರಣೆ

Update: 2018-10-03 15:56 GMT

ಕೊಚ್ಚಿ, ಅ. 3: ಕ್ರೈಸ್ತ ಸನ್ಯಾಸಿನಿಯ ಅತ್ಯಾಚಾರ ಪ್ರಕರಣದಲ್ಲಿ ಬಂಧಿತರಾಗಿರುವ ರೋಮನ್ ಕೆಥೋಲಿಕ್‌ನ ಬಿಷಪ್ ಫ್ರಾಂಕೊ ಮುಲಕ್ಕಲ್ ಅವರು ಜಾಮೀನು ಕೋರಿ ಸಲ್ಲಿಸಿದ ಅರ್ಜಿಯನ್ನು ಕೇರಳ ಉಚ್ಚ ನ್ಯಾಯಾಲಯ ಬುಧವಾರ ತಿರಸ್ಕರಿಸಿದೆ.

ಜಾಮೀನು ನೀಡಿದರೆ ಸಮಾಜದಲ್ಲಿ ಅತ್ಯುಚ್ಛ ಸ್ಥಾನದಲ್ಲಿರುವ ಆರೋಪಿಯು ಪ್ರಕರಣದ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಎಂದು ಪ್ರಾಸಿಕ್ಯೂಷನ್ ಪರ ವಕೀಲರು ವಾದಿಸಿರುವುದನ್ನು ಪರಿಗಣಿಸಿರುವ ನ್ಯಾಯಮೂರ್ತಿ ರಾಜಾ ವಿಜಯರಾಘವನ್ ಅವರು ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದಾರೆ. ಆರೋಪಿಯ ಬಂಧನದ ಬಳಿಕವೂ ಪ್ರಕರಣದ ತನಿಖೆ ಮುಂದುವರಿಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಕ್ರೈಸ್ತ ಸನ್ಯಾಸಿನಿಯ ಸಹವರ್ತಿಗಳ ಇನ್ನಷ್ಟು ಹೇಳಿಕೆಗಳನ್ನು ಮ್ಯಾಜಿಸ್ಟ್ರೇಟ್ ಮುಂದೆ ದಾಖಲು ಮಾಡಿಕೊಳ್ಳಲು ಹಾಗೂ ಪ್ರಕರಣದ ತನಿಖೆ ನಿರ್ಣಾಯಕ ಹಂತದಲ್ಲಿ ಇದೆ ಎಂಬ ಪ್ರಾಸಿಕ್ಯೂಷನ್ ಹೇಳಿಕೆಯನ್ನು ಕೂಡ ನ್ಯಾಯಾಲಯ ಪರಿಗಣಿಸಿದೆ.

ಜಾಮೀನು ಅರ್ಜಿಯನ್ನು ಪಾಲಾದಲ್ಲಿರುವ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ತಿರಸ್ಕರಿಸಿದ ಬಳಿಕ ಬಿಷಪ್ ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದರು. ಬಿಷಪ್ ಅವರು ಪ್ರಸ್ತುತ ಕೊಟ್ಟಾಯಂ ಜಿಲ್ಲೆಯಲ್ಲಿರುವ ಪಾಲದ ಸಬ್‌ಜೈಲ್‌ನಲ್ಲಿ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News