ಸಾಮಾನ್ಯ ಕಾಯಿಲೆಗಳಿಗೆ ಸ್ವಚಿಕಿತ್ಸೆಯ ಅಪಾಯಗಳು ನಿಮಗೆ ಗೊತ್ತೇ?

Update: 2018-10-04 10:47 GMT

ತಲೆನೋವು,ಜ್ವರ,ಕೆಮ್ಮು,ಶೀತ ಮತ್ತು ಆಮ್ಲೀಯತೆ ಇವೆಲ್ಲ ಕೆಲವು ಸಾಮಾನ್ಯ ಅನಾರೋಗ್ಯಗಳಾಗಿದ್ದು,ಹೆಚ್ಚಿನ ಜನರು ವೈದ್ಯರ ಬಳಿಗೆ ಹೋಗುವ ಕಷ್ಟ ತೆಗೆದುಕೊಳ್ಳುವುದಿಲ್ಲ. ಬದಲಿಗೆ ಔಷಧಿ ಅಂಗಡಿಗಳಲ್ಲಿ ಸುಲಭವಾಗಿ ದೊರೆಯುವ ನೋವು ನಿವಾರಕ ಮಾತ್ರೆಗಳು,ಆ್ಯಂಟಿ ಬಯಾಟಿಕ್‌ಗಳು,ಕೆಮ್ಮಿನ ಸಿರಪ್ ಇತ್ಯಾದಿಗಳನ್ನು ಸೇವಿಸಿ ತಮ್ಮ ಸಮಸ್ಯೆಗೆ ಸ್ವಯಂ ಪರಿಹಾರ ಕಂಡುಕೊಳ್ಳಲು ಮುಂದಾಗುತ್ತಾರೆ. ಆದರೆ ಈ ಸ್ವಯಂ ಚಿಕಿತ್ಸೆ,ವಿಶೇಷವಾಗಿ ವೈದ್ಯರ ಸಲಹೆ ಪಡೆದುಕೊಳ್ಳದೆ ಪ್ರಿಸ್ಕ್ರಿಪ್ಶನ್ ಔಷಧಿಗಳ ಸೇವನೆಯು ಅಪಾಯವನ್ನುಂಟು ಮಾಡಬಹುದು.

ಹೀಗಾಗಿ ಕೆಲವು ಕಾಯಿಲೆಗಳಿಗೆ ಸ್ವಯಂ ಚಿಕಿತ್ಸೆ ಕುರಿತಂತೆ ನೀವೇನು ಮಾಡಬೇಕು ಮತ್ತು ಏನನ್ನು ಮಾಡಬಾರದು ಎನ್ನುವ ಬಗ್ಗೆ ಮಾಹಿತಿಯಿಲ್ಲಿದೆ.......

ಜ್ವರಕ್ಕೆ ಪ್ಯಾರಾಸಿಟಮಲ್

ಪ್ಯಾರಾಸಿಟಮಲ್ ಜ್ವರದ ಚಿಕಿತ್ಸೆಯಲ್ಲಿ ಬಳಕೆಯಾಗುವ,ಔಷಧಿ ಅಂಗಡಿಗಳಲ್ಲಿ ಸುಲಭವಾಗಿ ಲಭ್ಯವಾಗುವ ಔಷಧಿಯಾಗಿದೆ. ಆದರೆ,ಕೆಲವು ಪ್ರಕರಣಗಳಲ್ಲಿ ಇದು ರೋಗಿಗಳಲ್ಲಿ ಅಲರ್ಜಿಗಳನ್ನುಂಟು ಮಾಡಬಹುದು. ಈ ಔಷಧಿಯ ಸೇವನೆ ಪ್ರಮಾಣವು ದೇಹತೂಕವನ್ನು ಅವಲಂಬಿಸಿ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ವಯಸ್ಕ ವ್ಯಕ್ತಿಗೆ ಶಿಫಾರಸು ಮಾಡಿರುವ ಪ್ಯಾರಾಸಿಟಮಲ್ ಡೋಸ್ ಮಕ್ಕಳಿಗೆ ಸೂಕ್ತವಲ್ಲ ಮತ್ತು ಮಕ್ಕಳಿಗೆ ಶಿಫಾರಸು ಮಾಡಿರುವ ಡೋಸ್ ವಯಸ್ಕರಿಗೆ ಸೂಕ್ತವಲ್ಲ. ಈ ಔಷಧಿಯ ಅತಿಯಾದ ಡೋಸ್ ಯಕೃತ್ತಿಗೆ ಹಾನಿಯನ್ನುಂಟು ಮಾಡುತ್ತದೆ. ಹೀಗಾಗಿ ನೀವು ಅಂಗಡಿಯಿಂದ ಪ್ಯಾರಾಸಿಟಮಲ್ ಮಾತ್ರೆಯನ್ನು ಖರೀದಿಸಿ ಸೇವಿಸಿದ್ದರೆ ಮತ್ತು ನಂತರ ವೈದ್ಯರನ್ನು ಭೇಟಿಯಾಗುತ್ತಿದ್ದರೆ ನೀವು ಈಗಾಗಲೇ ಮಾತ್ರೆಯನ್ನು ಸೇವಿಸಿರುವ ವಿಷಯವನ್ನು ಅವರಿಗೆ ತಿಳಿಸುವುದು ಅಗತ್ಯ. ಏಕೆಂದರೆ ನಿಮ್ಮ ವ್ಯೆದ್ಯರು ಪ್ಯಾರಾಸಿಟಮಲ್ ಒಳಗೊಂಡಿರುವ ಸಂಯುಕ್ತ ಔಷಧಿಯನ್ನು ಬರೆದುಕೊಟ್ಟರೆ ಅದು ಓವರ್‌ಡೋಸ್‌ಗೆ ಕಾರಣವಾಗುತ್ತದೆ.

ಮಕ್ಕಳಿಗೆ ಪ್ಯಾರಾಸಿಟಮಲ್ ನೀಡುವಾಗ,ವಿಶೇಷವಾಗಿ ಡೋಸ್ ಲೆಕ್ಕ ಹಾಕುವಾಗ ಹೆಚ್ಚಿನ ಕಾಳಜಿ ಅಗತ್ಯ. ಹೀಗಾಗಿ ಈ ಬಗ್ಗೆ ಮೊದಲು ವೈದ್ಯರ ಸಲಹೆ ಪಡೆದುಕೊಳ್ಳಿ. ಹೆಚ್ಚಿನ ಪ್ರಕರಣಗಳಲ್ಲಿ ಮಕ್ಕಳಿಗೆ ನೀಡುವ ಪ್ಯಾರಾಸಿಟಮಲ್ ಪ್ರಮಾಣ ಅವರ ದೇಹತೂಕವನ್ನು ಅವಲಂಬಿಸಿರುತ್ತದೆ.

ಕೆಮ್ಮು ಮತ್ತು ಶೀತಕ್ಕೆ ಆ್ಯಂಟಿಬಯಾಟಿಕ್ಸ್

ಬ್ಯಾಕ್ಟೀರಿಯಾಗಳಿಂದ ಉಂಟಾಗುವ ಸೋಂಕುಗಳಿಗೆ ಚಿಕಿತ್ಸೆ ನೀಡಲು ಬಳಕೆಯಾಗುವ ಆ್ಯಂಟಿಬಯಾಟಿಕ್‌ಗಳನ್ನು ವೈದ್ಯರ ಸಲಹೆಯ ಮೇರೆಗೆ ಮಾತ್ರ ಸೇವಿಸಬೇಕು. ಅಲ್ಲದೆ ನಿಮ್ಮನ್ನು ಕಾಡುತ್ತಿರುವ ಕೆಮ್ಮು ಅವಾ ಶೀತಕ್ಕೆ ವೈರಸ್ ಸೋಂಕು ಕಾರಣವಾಗಿದ್ದರೆ ಆ್ಯಂಟಿಬಯಾಟಿಕ್ಸ್ ಸೇವನೆಯಿಂದ ಯಾವುದೇ ಉಪಯೋಗವಾಗದಿರಬಹುದು. ಹೀಗಾಗಿ ನಿಮಗೆ ಬ್ಯಾಕ್ಟೀರಿಯಾ ಅಥವಾ ವೈರಲ್ ಸೋಂಕು ಆಗಿರಲಿ,ವೈದ್ಯರನ್ನು ಸಂಪರ್ಕಿಸುವುದು ಅಗತ್ಯವಾಗುತ್ತದೆ.

ನೀವು ಸೇವಿಸುವ ಆ್ಯಂಟಿಬಯಾಟಿಕ್‌ಗಳನ್ನು ನಿಮ್ಮ ಕುಟುಂಬ ಸದಸ್ಯರು ಅಥವಾ ಸ್ನೇಹಿತರೊಂದಿಗೆ ಹಂಚಿಕೊಳ್ಳಬೇಡಿ, ನೀವು ಸೇವಿಸದೇ ಉಳಿದುಕೊಂಡಿರುವ ಆ್ಯಂಟಿಬಯಾಟಿಕ್‌ಗಳನ್ನು ಭವಿಷ್ಯಕ್ಕಾಗಿ ಕಾದಿರಿಸದೆ ತಕ್ಷಣ ವಿಲೇವಾರಿ ಮಾಡಿ.

ಮಲಬದ್ಧತೆಗೆ ವಿರೇಚಕಗಳು

ವಿರೇಚಕಗಳು ಮಲವನ್ನು ಮೃದುಗೊಳಿಸಿ,ಕರುಳಿನ ಚಲನವಲನವನ್ನು ಹೆಚ್ಚಿಸುವ ಮೂಲಕ ಮಲಬದ್ಧತೆಯಿಂದ ಮುಕ್ತಿ ನೀಡುವ ಔಷಧಿಗಳಾಗಿವೆ. ಕೆಲವು ವಿರೇಚಕಗಳು ಕೆಲವು ಆ್ಯಂಟಿ ಬಯಾಟಿಕ್‌ಗಳು ಮತ್ತು ಹೃದ್ರೋಗ ಔಷಧಿಗಳ ಹೀರುವಿಕೆಗೆ ವ್ಯತ್ಯಯವನ್ನುಂಟು ಮಾಡಬಲ್ಲವು. ಹೀಗಾಗಿ ನೀವು ಈ ಔಷಧಿಗಳನ್ನು ಸೇವಿಸುತ್ತಿದ್ದರೆ ವಿರೇಚಕಗಳ ಸೇವನೆಯ ಬಗ್ಗೆ ಹೆಚ್ಚಿನ ಎಚ್ಚರಿಕೆ ಅಗತ್ಯವಾಗುತ್ತದೆ. ನೀವು ಮೂತ್ರಪಿಂಡ ಅಥವಾ ಹೃದ್ರೋಗದಿಂದ ಬಳಲುತ್ತಿದ್ದರೆ ವಿರೇಚಕಗಳನ್ನು ಸೇವಿಸಲೇಬಾರದು. ವಿರೇಚಕಗಳು ಔಷಧಿ ಅಂಗಡಿಗಳಲ್ಲಿ ಸುಲಭವಾಗಿ ದೊರೆಯುತ್ತವೆ ನಿಜ,ಹಾಗೆಂದು ಮಲಬದ್ಧತೆ ಕಾಡಿದಾಗೆಲ್ಲ ಅದನ್ನು ಖರೀದಿಸಿ ಸೇವಿಸುತ್ತಿದ್ದರೆ ಕೊನೆಗೆ ಅದು ಅನಿವಾರ್ಯವಾಗಿಬಿಡುತ್ತದೆ. ಹೀಗಾಗಿ ವಿರೇಚಕಗಳನ್ನು ವೈದ್ಯರ ಸಲಹೆಯಿಲ್ಲದೆ ಸೇವಿಸುವ ಗೋಜಿಗೆ ಹೋಗಬಾರದು.

ಆ್ಯಸಿಡಿಟಿಗೆ ಅಂಟಾಸಿಡ್

ಅಂಟಾಸಿಡ್‌ಗಳು ಜಠರಾಮ್ಲವನ್ನು ತಟಸ್ಥಗೊಳಿಸುವ ಮೂಲಕ ಎದೆಯುರಿ, ಆಮ್ಲೀಯತೆ ಮತ್ತು ಅಜೀರ್ಣತೆಯಿಂದ ಪಾರಾಗಲು ನೆರವಾಗುತ್ತವೆ. ಡೋಸ್‌ಗಳು ವಯಸ್ಕರಿಗೆ ಮತ್ತು ಮಕ್ಕಳಿಗೆ ಭಿನ್ನವಾಗಿರುತ್ತವೆ. ಹೀಗಾಗಿ ಸರಿಯಾದ ಡೋಸೇಜ್‌ನ್ನು ವೈದ್ಯರಿಂದ ತಿಳಿದುಕೊಳ್ಳಬೇಕು. ಅಲ್ಲದೆ ಕೆಲವು ಅಂಟಾಸಿಡ್‌ಗಳನ್ನು ಮಕ್ಕಳಿಗೆ ಶಿಫಾರಸು ಮಾಡಲಾಗಿರುವುದಿಲ್ಲ. ಕೆಲವು ಅಂಟಾಸಿಡ್‌ಗಳು ಸೋಡಿಯಂ ಅನ್ನು ಒಳಗೊಂಡಿರುತ್ತವೆ,ಹೀಗಾಗಿ ನೀವು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರೆ ಈ ಅಂಟಾಸಿಡ್‌ಗಳು ಸೂಕ್ತ ಆಯ್ಕೆಯಾಗುವುದಿಲ್ಲ. ಗರ್ಭಿಣಿಯರು ಮತ್ತು ಹಾಲೂಡಿಸುತ್ತಿರುವ ತಾಯಂದಿರು ವೈದ್ಯರು ಸೂಚಿಸಿದರೆ ಮಾತ್ರ ಅಂಟಾಸಿಡ್‌ಗಳನ್ನು ಸೇವಿಸಬೇಕು. ಯಕೃತ್ತು,ಮೂತ್ರಪಿಂಡ ಮತ್ತು ಹೃದಯ ರೋಗಗಳಿಂದ ನರಳುತ್ತಿರುವವರಿಗೆ ಕೆಲವು ಅಂಟಾಸಿಡ್‌ಗಳು ಸುರಕ್ಷಿತವಲ್ಲದಿರಬಹುದು. ಅಂತಹವರು ಅಂಟಾಸಿಡ್ ಸೇವನೆಗೆ ಮುನ್ನ ವೈದ್ಯರ ಸಲಹೆ ಪಡೆದುಕೊಳ್ಳಬೇಕಾಗುತ್ತದೆ. ಅಂಟಾಸಿಡ್‌ಗಳು ಹೊಟ್ಟೆನೋವು, ಅತಿಸಾರ, ಹೊಟ್ಟೆಯುಬ್ಬರ,ಮಲಬದ್ಧತೆ ಅಥವಾ ವಾಂತಿಯಂತಹ ಅಡ್ಡಪರಿಣಾಮಗಳನ್ನೂ ಉಂಟು ಮಾಡುತ್ತವೆ. ಹೀಗಾಗಿ ಬೇಕಾಬಿಟ್ಟಿಯಾಗಿ ಅಂಟಾಸಿಡ್‌ಗಳನ್ನು ಸೇವಿಸುವುದು ಒಳ್ಳೆಯದಲ್ಲ. ಅವುಗಳನ್ನು ದೀರ್ಘಾವಧಿಗೆ ನಿಯಮಿತವಾಗಿ ಬಳಸುವುದೂ ಒಳ್ಳೆಯದಲ್ಲ.

ತಲೆನೋವಿಗೆ ಮಾತ್ರೆಗಳು

ಔಷಧಿ ಅಂಗಡಿಗಳಲ್ಲಿ ಹಲವಾರು ನೋವು ನಿವಾರಕ ಮಾತ್ರೆಗಳು ವೈದ್ಯರ ಚೀಟಿಯಿಲ್ಲದೆ ಸುಲಭದಲ್ಲಿ ಲಭ್ಯವಾಗುತ್ತವೆ. ಹಾಗೆಂದು ಪ್ರತಿಬಾರಿ ತಲೆನೋವು ಕಾಣಿಸಿಕೊಂಡಾಗಲೂ ಅಂಗಡಿಗಳಿಂದ ಮಾತ್ರೆ ಖರೀದಿಸಿ ನುಂಗಬೇಕಿಲ್ಲ. ತೀರ ಅಗತ್ಯವಾದಾಗ ಮಾತ್ರ ನೋವು ನಿವಾರಕಗಳನ್ನು ಸೇವಿಸಬೇಕು ಮತ್ತು ಶಿಫಾರಿತ ಡೋಸ್‌ಗಿಂತ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬಾರದು. ತಲೆನೋವಿಗೆ ಬಳಸುವ ನೋವು ನಿವಾರಕ ಮಾತ್ರೆಯ ವಿಧವು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರಬಹುದು.

ಹೀಗಾಗಿ ಯಾರೋ ಹೇಳಿದರೆಂದು ಅಂಗಡಿಯಿಂದ ಮಾತ್ರೆ ಖರೀದಿಸಿ ನುಂಗುವ ಕೆಲಸ ಮಾಡಬೇಡಿ.

ಮೂಳೆ ಅಥವಾ ಸ್ನಾಯು ನೋವಿಗೆ ಅಥವಾ ಶರೀರದಲ್ಲಿಯ ಇತರ ನೋವುಗಳಿಗೆ ನೋವು ನಿವಾರಕಗಳನ್ನು ಬಳಸಬೇಕಿದ್ದರೆ ಮೊದಲು ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News