ಮತದಾರರ ಪಟ್ಟಿ ತಿರುಚಿದ್ದಕ್ಕಾಗಿ ಕಾಂಗ್ರೆಸನ್ನು ದಂಡಿಸಿ

Update: 2018-10-04 14:34 GMT

ಹೊಸದಿಲ್ಲಿ,ಅ.4: ಮುಂಬರುವ ಮಧ್ಯಪ್ರದೇಶ ಮತ್ತು ರಾಜಸ್ಥಾನ ವಿಧಾನಸಭಾ ಚುನಾವಣೆಗಳಿಗಾಗಿ ಮತದಾರರ ಪಟ್ಟಿಯನ್ನು ಕಾಂಗ್ರೆಸ್ ಪಕ್ಷವು ತಿರುಚುತ್ತಿದೆ ಎಂದು ಗುರುವಾರ ಆರೋಪಿಸಿರುವ ಚುನಾವಣಾ ಆಯೋಗವು, ನ್ಯಾಯಾಲಯವನ್ನು ದಾರಿ ತಪ್ಪಿಸುತ್ತಿರುವುದಕ್ಕಾಗಿ ಆ ಪಕ್ಷವನ್ನು ದಂಡಿಸುವಂತೆ ಸರ್ವೋಚ್ಚ ನ್ಯಾಯಾಲಯವನ್ನು ಕೇಳಿಕೊಂಡಿದೆ.

ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಮತದಾರರ ಪಟ್ಟಿಗಳಲ್ಲಿ ಹೆಸರುಗಳು ಪುನರಾವರ್ತನೆಯಾಗಿವೆ ಎಂದು ಈ ಹಿಂದೆ ಆರೋಪಿಸಿದ್ದ ಕಾಂಗ್ರೆಸ್ ನಾಯಕರಾದ ಕಮಲನಾಥ್ ಮತ್ತು ಸಚಿನ್ ಪೈಲಟ್ ಅವರು,ಮುಕ್ತ ಮತ್ತು ನ್ಯಾಯಯುತ ಚುನಾವಣೆಯನ್ನು ಕೋರಿ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಆರೋಪಗಳಿಗೆ ಉತ್ತರಿಸುವಂತೆ ಅದು ಚುನಾವಣಾ ಆಯೋಗಕ್ಕೆ ನಿರ್ದೇಶ ನೀಡಿತ್ತು.

ಆಯೋಗದ ಆರೋಪವನ್ನು ತಿರಸ್ಕರಿಸಿರುವ ಕಾಂಗ್ರೆಸ್,ಸಾರ್ವಜನಿಕವಾಗಿ ಲಭ್ಯವಿದ್ದುದನ್ನೇ ತಾನು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ್ದೇನೆ ಮತ್ತು ವಿದ್ಯುನ್ಮಾನ ಮಾಧ್ಯಮಗಳೂ ಇದೇ ಮತದಾರರ ಪಟ್ಟಿಯನ್ನು ವರದಿ ಮಾಡಿದ್ದವು. ಹಸ್ತಕ್ಷೇಪ ನಡೆದಿದೆ ಎಂದು ಆಯೋಗವು ಹೇಳುತ್ತಿರುವ ಪಟ್ಟಿಯನ್ನೇ ಸಿಡಿಗಳ ರೂಪದಲ್ಲಿ ಮುಖ್ಯ ಚುನಾವಣಾ ಆಯುಕ್ತ(ಸಿಇಸಿ)ರಿಗೆ ಸಲ್ಲಿಸಲಾಗಿತ್ತು ಎಂದು ತಿಳಿಸಿತು. ಆದರೆ ಇದನ್ನು ಆಯೋಗವು ನಿರಾಕರಿಸಿದ್ದು,ಕಾಂಗ್ರೆಸ ಪಕ್ಷವು ಸಿಇಸಿಗೆ ಈ ಸಿಡಿಗಳನ್ನು ಸಲ್ಲಿಸಿತ್ತೇ ಎನ್ನುವುದನ್ನು ಪರಿಶೀಲಿಸುವಂತೆ ಅದಕ್ಕೆ ನ್ಯಾಯಾಲಯವು ಸೂಚಿಸಿತು.

ಸರ್ವೋಚ್ಚ ನ್ಯಾಯಾಲಯವು ಸೋಮವಾರ ವಿಚಾರಣೆಯನ್ನು ಮತ್ತೆ ಕೈಗೆತ್ತಿಕೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News