ಇನ್ನು ಮುಂದೆ ದೇಶದ ಒಳಗೆ ವಿಮಾನದಲ್ಲಿ ಪ್ರಯಾಣಿಸಲು ಮುಖವೇ ಗುರುತು ಪತ್ರ
ಹೊಸದಿಲ್ಲಿ, ಅ. 3: ದೇಶದ ವಿಮಾನ ನಿಲ್ದಾಣಗಳಿಗೆ ಪ್ರವೇಶ ಪಡೆಯಲು ಹಾಗೂ ವಿಮಾನದಲ್ಲಿ ಪ್ರಯಾಣಿಸಲು ಪ್ರಯಾಣಿಕರ ಮುಖ ಗುರುತಿಸಬಲ್ಲ ಬಯೋಮೆಟ್ರಿಕ್ ವ್ಯವಸ್ಥೆಯನ್ನು ‘ಡಿಜಿ ಯಾತ್ರೆ’ ಅಡಿಯಲ್ಲಿ ಕೇಂದ್ರ ಸರಕಾರ ಅತಿ ಶೀಘ್ರದಲ್ಲಿ ಆರಂಭಿಸಲಿದೆ. ಇದರಿಂದ ಇನ್ನು ಮುಂದೆ ದೇಶದ ಒಳಗೆ ವಿಮಾನದಲ್ಲಿ ಪ್ರಯಾಣಿಸಲು ಪ್ರಯಾಣಿಕರಿಗೆ ಯಾವುದೇ ಐಡಿ, ಪಾಸ್‌ಪೋರ್ಟ್ ಅಥವಾ ಬೋರ್ಡಿಂಗ್ ಕಾರ್ಡ್‌ಗಳ ಅಗತ್ಯತೆ ಇರುವುದಿಲ್ಲ.
ಈ ಸೌಲಭ್ಯ ಸದ್ಯ 6 ವಿಮಾನ ನಿಲ್ದಾಣಗಳಲ್ಲಿ ಅಸ್ತಿತ್ವಕ್ಕೆ ಬರಲಿದೆ. ಮುಂದಿನ ಫೆಬ್ರವರಿ ಅಂತ್ಯದ ಒಳಗೆ ಹೈದರಾಬಾದ್ ಹಾಗೂ ಬೆಂಗಳೂರು ವಿಮಾನ ನಿಲ್ದಾಣಗಳಲ್ಲಿ ಹಾಗೂ ಎಪ್ರಿಲ್ ಅಂತ್ಯದ ಒಳಗೆ ವಾರಣಾಸಿ, ಕೋಲ್ಕತ್ತಾ, ಪುಣೆ ಹಾಗೂ ವಿಜಯವಾಡ ವಿಮಾನ ನಿಲ್ದಾಣಗಳಲ್ಲಿ ಈ ಸೌಲಭ್ಯ ಆರಂಭವಾಗಲಿದೆ. ಈ 6 ವಿಮಾನ ನಿಲ್ದಾಣಗಳ ಬಳಿಕ ಭಾರತದ ಅತಿ ದೊಡ್ಡ ವಿಮಾನ ನಿಲ್ದಾಣಗಳಾದ ಮುಂಬೈ, ದಿಲ್ಲಿ ಹಾಗೂ ಇತರ ಎಎಐ ವಿಮಾನ ನಿಲ್ದಾಣಗಳಲ್ಲಿ ಈ ಸೌಲಭ್ಯ ಅನುಷ್ಠಾನಗೊಳ್ಳಲಿದೆ. ಪ್ರಸ್ತುತ ಇರುವ ವ್ಯವಸ್ಥೆಯೊಂದಿಗೆ ಈ ವ್ಯವಸ್ಥೆಯೂ ಇರುತ್ತದೆ. ಇದು ಕಡ್ಡಾಯ ಅಲ್ಲ. ಅಲ್ಲದೆ ಇದು ದೇಶದ ಒಳಗೆ ವಿಮಾನದಲ್ಲಿ ಪ್ರಯಾಣಿಸುವವರಿಗೆ ಮಾತ್ರ ಅನ್ವಯವಾಗುತ್ತದೆ. ಡಿಜಿಟಲ್ ಯಾತ್ರೆ ಆಯ್ಕೆ ಮಾಡಲು ಬಯಸುವ ಆಕೆ ಅಥವಾ ಆತ ವೈಮಾನಿಕ ಸಚಿವಾಲಯದ ಪೋರ್ಟಲ್‌ಗೆ ವಿವರ ನೀಡಿ ವಿಶಿಷ್ಟ ‘ಡಿಜಿ ಯಾತ್ರಾ’ ಐಡಿ ಪಡೆದುಕೊಳ್ಳುವ ಅಗತ್ಯತೆ ಇದೆ.
ಅನಂತರ ಈ ವಿಶಿಷ್ಟ ಗುರುತಿನ ಸಂಖ್ಯೆಯನ್ನು ವಿಮಾನ ಟಿಕೆಟ್ ಮಂಗಡ ಕಾಯ್ದಿರಿಸುವಾಗ ನೀಡಬೇಕು. ಡಿಜಿಟಲ್ ನಂಬರ್ ಜೋಡಿಸಿದ ವಿಮಾನ ಟಿಕೆಟ್ ಪಡೆಯಲು ಮೊದಲ ಬಾರಿಗೆ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿದಾಗ ಪ್ರಯಾಣಿಕರು ಐಡಿ ಕಾರ್ಡ್ ಅನ್ನು ಪರಿಶೀಲನೆಗೆ ನೀಡಬೇಕಾಗುತ್ತದೆ. ಆಧಾರ್ ನಂಬರ್ ನೀಡಲು ಬಯಸುವವರು ತಮ್ಮ ಪರಿಶೀಲನೆಯನ್ನು ಆನ್‌ಲೈನ್ ಮೂಲಕ ನಡೆಸಬಹುದು. ಪರಿಶೀಲನೆ ನಡೆದ ಬಳಿಕ ಸುರಕ್ಷಿತ ಕೇಂದ್ರ ಡಾಟಾ ಬೇಸ್‌ನಲ್ಲಿರುವ ‘ಡಿಜಿ ಯಾತ್ರೆ’ಯ ಪ್ರೊಫೈಲ್‌ಗೆ ಪ್ರಯಾಣಿಕರ ಭಾವಚಿತ್ರ ಅಳವಡಿಸಲಾಗುತ್ತದೆ. ಈ ಪ್ರಕ್ರಿಯೆ ಬಳಿಕ ದೇಶದ ಒಳಗೆ ವಿಮಾನ ಪ್ರಯಾಣಕ್ಕೆ ಮಖವೇ ಗುರುತಾಗಿ ಬದಲಾಗುತ್ತದೆ.
ಮುಖದ ಗುರುತಿನ ದಾಖಲೆಗಳನ್ನು ಗೌಪ್ಯವಾಗಿ ಇರಿಸಿಸಲಾಗುತ್ತದೆ. ಇದಕ್ಕಾಗಿ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆಯ ತಾಂತ್ರಿಕ ಸೇವಾ ಪೂರೈಕೆದಾರರ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.
ವಿಮಾನ ನಿಲ್ದಾಣಗಳಲ್ಲಿ, ವಿಮಾನಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರನ್ನು ಮುಖದ ಮೂಲಕ ಗುರುತಿಸಲು ಈ ಬಯೋಮೆಟ್ರಿಕ್ ತಂತ್ರಜ್ಞಾನವು ನೆರವಾಗಲಿದೆ. ಇದರಿಂದ ಬೋರ್ಡಿಂಗ್ ಪಾಸ್, ಪಾಸ್‌ಪೋರ್ಟ್ ಅಥವಾ ಇನ್ನಿತರ ಗುರುತು ಪತ್ರಗಳನ್ನು ಅಧಿಕಾರಿಗಳಿಗೆ ತೋರಿಸುವ ಅಗತ್ಯತೆ ಇರುವುದಿಲ್ಲ ಎಂದು ಬೆಂಗಳೂರು ಅಂತಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆ ಹೇಳಿದೆ.