ಕಳಪೆ ಕೈಬರಹ: ವೈದ್ಯರಿಗೆ ದಂಡ ವಿಧಿಸಿದ ನ್ಯಾಯಾಲಯ
ಲಕ್ನೊ, ಅ.4: ವೈದ್ಯರ ಕೈಬರಹ ಸಾಮಾನ್ಯವಾಗಿ ಯಾರಿಗೂ ಅರ್ಥವಾಗೋದಿಲ್ಲ. ಆದರೆ ಉತ್ತರಪ್ರದೇಶದ ನ್ಯಾಯಾಲಯವೊಂದು ವೈದ್ಯರ ಕಳಪೆ ಕೈಬರಹಕ್ಕೆ ದಂಡ 5 ಸಾವಿರ ರೂ. ದಂಡ ವಿಧಿಸಿ ಗಮನ ಸೆಳೆದಿದೆ.
ಕಳಪೆ ಕೈಬರಹದ ಕಾರಣಕ್ಕೆ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ವೈದ್ಯರಿಗೆ ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠ ತಲಾ ಐದು ಸಾವಿರ ರೂ. ದಂಡ ವಿಧಿಸಿದೆ. ಕಳೆದ ವಾರ ಲಕ್ನೋ ಪೀಠದೆದುರು ಮೂರು ಕ್ರಿಮಿನಲ್ ಪ್ರಕರಣಗಳ ವಿಚಾರಣೆ ನಡೆಯುತ್ತಿತ್ತು. ಪ್ರಕರಣದಲ್ಲಿ ಗಾಯಾಳುಗಳ ಬಗ್ಗೆ ಸೀತಾಪುರ, ಉನ್ನಾವೊ ಮತ್ತು ಗೊಂಡಾ ಜಿಲ್ಲಾಸ್ಪತ್ರೆಗಳು ನೀಡಿದ ವರದಿ ಓದಲು ಯೋಗ್ಯವಾಗಿಲ್ಲ. ಈ ವರದಿ ಬರೆದಿರುವ ವೈದ್ಯರ ಕೈಬರಹ ಅತ್ಯಂತ ಕಳಪೆಯಾಗಿದೆ ಎಂದು ನ್ಯಾಯಪೀಠ ತಿಳಿಸಿದೆ. ಇದು ನ್ಯಾಯಾಲದ ಕಾರ್ಯಕ್ಕೆ ಅಡಚಣೆಯಾಗಿದೆ ಎಂದು ವಿಶ್ಲೇಷಿಸಿದ ನ್ಯಾಯಾಲಯ ಈ ವರದಿ ಬರೆದ ವೈದ್ಯರಾದ ಉನ್ನಾವೊದ ಡಾ ಟಿಪಿ ಜೈಸ್ವಾಲ್, ಸೀತಾಪುರದ ಡಾ ಪಿಕೆ ಗೋಯಲ್ ಹಾಗೂ ಗೊಂಡಾದ ಡಾ ಆಶಿಷ್ ಸಕ್ಸೇನರನ್ನು ನ್ಯಾಯಾಲಯಕ್ಕೆ ಕರೆಸಿಕೊಂಡು, ತಲಾ 5,000 ರೂ. ದಂಡ ಪಾವತಿಸುವಂತೆ ಸೂಚಿಸಿದೆ.
ಕೆಲಸದ ಒತ್ತಡದ ಕಾರಣ ಹೀಗಾಗಿದೆ ಎಂದು ವೈದ್ಯರು ಮನವಿ ಮಾಡಿಕೊಂಡರೂ ನ್ಯಾಯಾಧೀಶರಾದ ಅಜಯ್ ಲಾಂಬ ಮತ್ತು ಸಂಜಯ್ ಹರ್‌ಕೌಲಿ ಅವರಿದ್ದ ನ್ಯಾಯಪೀಠಒಪ್ಪಲಿಲ್ಲ. ಮುಂದಿನ ದಿನದಲ್ಲಿ ವೈದ್ಯಕೀಯ ವರದಿಗಳು ಸ್ಪಷ್ಟವಾಗಿರಬೇಕು ಎಂದು ಸೂಚಿಸಿದ ನ್ಯಾಯಪೀಠ, ವರದಿಯನ್ನು ಕಂಪ್ಯೂಟರ್ ಟೈಪಿಂಗ್ ರೀತಿಯಲ್ಲಿ ಸಲ್ಲಿಸುವಂತೆ ಸಲಹೆ ನೀಡಿದೆ. ವೈದ್ಯಕೀಯ ವರದಿ ಅಥವಾ ಮರಣೋತ್ತರ ವರದಿ ವೈದ್ಯರಿಗೆ ಮಾತ್ರ ಅರ್ಥವಾದರೆ ಏನು ಪ್ರಯೋಜನ ಎಂದು ಪೀಠ ಪ್ರಶ್ನಿಸಿದೆ.