ಸಾರ್ವಕಾಲಿಕ ಕುಸಿತ ಕಂಡ ರೂಪಾಯಿ: ರೆಪೊ ದರ ತೀವ್ರ ಹೆಚ್ಚಳದ ನಿರೀಕ್ಷೆ
ಮುಂಬೈ, ಅ.4: ಜಾಗತಿಕ ಕಚ್ಛಾ ತೈಲದ ದರದಲ್ಲಿ ಹೆಚ್ಚಳ ಹಾಗೂ ಸ್ಟಾಕ್ಸ್ ಮತ್ತು ಬಾಂಡ್ ದುರ್ಬಲಗೊಂಡ ಹಿನ್ನೆಲೆಯಲ್ಲಿ ಗುರುವಾರ ಭಾರತೀಯ ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ ಕಂಡಿದೆ. ಈ ಹಿನ್ನೆಲೆಯಲ್ಲಿ ಇದೀಗ ರಿಸರ್ವ್ ಬ್ಯಾಂಕ್ ತನ್ನ ರೆಪೊ ದರವನ್ನು 50 ಮೂಲ ಅಂಕಗಳಷ್ಟು ಹೆಚ್ಚಿಸುವ ಸಾಧ್ಯತೆಯಿದೆ.
ಆರ್‌ಬಿಐ ರೆಪೊ ದರವನ್ನು 25 ಮೂಲ ಅಂಕಗಳಷ್ಟು ಹೆಚ್ಚಿಸುವುದೆಂದು ಈ ಹಿಂದೆ ನಿರೀಕ್ಷಿಸಲಾಗಿತ್ತು. ಬುಧವಾರ ವಹಿವಾಟಿನ ಅಂತ್ಯಕ್ಕೆ ಡಾಲರ್ ಎದುರು 73.33ರೂ.ಗೆ ತಲುಪಿದ್ದ ರೂಪಾಯಿ ಬೆಲೆ ಗುರುವಾರ ಒಂದು ಹಂತದಲ್ಲಿ 73.82ಕ್ಕೆ ಕುಸಿಯಿತು. ಬಳಿಕ ಸ್ವಲ್ಪ ಮಟ್ಟಿನ ಚೇತರಿಕೆ ಕಂಡು 73.62ಕ್ಕೆ ತಲುಪಿದೆ. ರಿಸರ್ವ್ ಬ್ಯಾಂಕ್‌ನ ಸಕಾಲಿಕ ಮಧ್ಯಪ್ರವೇಶದಿಂದ ರೂಪಾಯಿ ಮೌಲ್ಯ ಡಾಲರ್ ಎದುರು 74 ರೂ.ಗೆ ಕುಸಿಯುವುದಕ್ಕೆ ತಡೆಯಾಗಿದೆ. ಆದರೆ ಈ ವರ್ಷದ ಆರಂಭದಿಂದ ಶೇ.13.3ರಷ್ಟು ಕುಸಿತ ಕಂಡಿರುವ ರೂಪಾಯಿ ಏಶ್ಯಾದ ಉದಯೋನ್ಮುಖ ಮಾರುಕಟ್ಟೆ ಕರೆನ್ಸಿಗಳ ಪೈಕಿ ಅತ್ಯಂತ ಕಳಪೆ ಸಾಧನೆ ದಾಖಲಿಸಿದೆ ಎಂದು ಫಾರೆಕ್ಸ್ ಡೀಲರ್ ತಿಳಿಸಿದ್ದಾರೆ.
ಬಡ್ಡಿ ದರದಲ್ಲಿ ಭಾರೀ ಹೆಚ್ಚಳವಾಗಬಹುದು ಎಂಬ ಊಹಾಪೋಹದ ಹಿನ್ನೆಲೆಯಲ್ಲಿ ಬೆಂಚ್ ಮಾರ್ಕ್ 10 ವರ್ಷ ವಾಯಿದೆಯ ಬಾಂಡ್ ಮೇಲಿನ ಬಡ್ಡಿದರ 10 ಮೂಲ ಅಂಕಗಳಷ್ಟು ಹೆಚ್ಚಿ ಶೇ.8.21ಕ್ಕೆ ತಲುಪಿದೆ. ಶೇರು ಮಾರುಕಟ್ಟೆಯಲ್ಲಿ ಎನ್‌ಎಸ್‌ಇ ಇಂಡೆಕ್ಸ್ ಶೇ.1.95ರಷ್ಟು ಕುಸಿತ ಕಂಡು 10,647ಕ್ಕೆ ತಲುಪಿದ್ದರೆ ಬೆಂಚ್‌ಮಾರ್ಕ್ ಬಿಎಸ್‌ಇ ಇಂಡೆಕ್ಸ್ ಶೇ.1.88ರಷ್ಟು ಕುಸಿತ ಕಂಡಿದೆ. ರಿಲಯನ್ಸ್ ಇಂಡಸ್ಟ್ರೀಸ್‌ನ ಶೇರು ಬೆಲೆಯಲ್ಲಿ ಶೇ.5.7ರಷ್ಟು ಮತ್ತು ಎಚ್‌ಡಿಎಫ್‌ಸಿ ಶೇರುಬೆಲೆ ಶೇ.1.8ರಷ್ಟು ಕುಸಿತ ಕಂಡವು.
ಅಮೆರಿಕ ಬಡ್ಡಿದರ ಹೆಚ್ಚಿಸಿ ಹೂಡಿಕೆದಾರರನ್ನು ಆಕರ್ಷಿಸಿರುವ ಹಿನ್ನೆಲೆಯಲ್ಲಿ ಭಾರತದ ಹೂಡಿಕೆ ಕ್ಷೇತ್ರಕ್ಕೂ ಹಿನ್ನಡೆಯಾಗಿದೆ. ಜಾಗತಿಕ ಕಚ್ಛಾತೈಲದ ಬೆಲೆ ಬುಧವಾರ ಶೇ.2ರಷ್ಟು ಏರಿಕೆಯಾಗಿದ್ದು ಇದು ಕಳೆದ ನಾಲ್ಕು ವರ್ಷಗಳಲ್ಲೇ ಅತ್ಯಧಿಕವಾಗಿದೆ. ತೈಲ ಬೆಲೆಏರಿಕೆಯನ್ನು ನಿಯಂತ್ರಿಸುವ ಪ್ರಯತ್ನವಾಗಿ ಸರಣಿ ಕ್ರಮಗಳನ್ನು ಕೈಗೊಂಡಿರುವ ಭಾರತ ಸರಕಾರ, ಆಮದು ತೈಲ ಬೆಲೆಯಲ್ಲಿ ಆಗಿರುವ ತೀವ್ರ ಹೆಚ್ಚಳವನ್ನು ಭರಿಸಲು ಸರಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆಗಳು 10 ಬಿಲಿಯನ್ ಡಾಲರ್ ವಿದೇಶಿ ಸಾಲವನ್ನು ಪಡೆಯಲು ಅನುಮತಿ ನೀಡಿದೆ. ನಾಲ್ಕನೇ ತ್ರೈಮಾಸಿಕದ ಅವಧಿಯಲ್ಲಿ ಭಾರತದ ಚಿನ್ನ ಆಮದು ಇನ್ನಷ್ಟು ಹೆಚ್ಚುವ ನಿರೀಕ್ಷೆಯಿದ್ದು ಇದು ವ್ಯಾಪಾರದ ಸಮತೋಲನದ ಮೇಲೆ ಹೆಚ್ಚಿನ ಒತ್ತಡಕ್ಕೆ ಕಾರಣವಾಗಲಿದೆ ಎಂದು ಮೂಲಗಳು ತಿಳಿಸಿವೆ.