ಆಶ್ರಯಧಾಮಗಳಲ್ಲಿ ಲೈಂಗಿಕ ದೌರ್ಜನ್ಯ ಸಮಸ್ಯೆ : ಸೂಕ್ತ ಕಾರ್ಯನೀತಿ ರೂಪಿಸಲು ಸುಪ್ರೀಂ ಸೂಚನೆ
ಹೊಸದಿಲ್ಲಿ, ಅ.4: ಮಕ್ಕಳು ಮತ್ತು ಹುಡುಗಿಯರಿಗೆ ಆಶ್ರಯಧಾಮಗಳಲ್ಲಿ ಲೈಂಗಿಕ ದೌರ್ಜನ್ಯ ಎಸಗುವ ಪ್ರಕರಣಗಳು ಹೆಚ್ಚುತ್ತಿದ್ದು ಈಗಿರುವ ವ್ಯವಸ್ಥೆ ಈ ಸಮಸ್ಯೆಯನ್ನು ನಿಗ್ರಹಿಸಲು ತಕ್ಕದಾಗಿಲ್ಲ ಎಂದು ತಿಳಿಸಿರುವ ಸುಪ್ರೀಂಕೋರ್ಟ್, ಮಕ್ಕಳ ರಕ್ಷಣಾ ಕಾರ್ಯನೀತಿಯ ಬಗ್ಗೆ ತನಗೆ ಮಾಹಿತಿ ನೀಡುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸೂಚಿಸಿದೆ.
ಈಗಿರುವ ವ್ಯವಸ್ಥೆ ಈ ಸಮಸ್ಯೆಯ ನಿಗ್ರಹಕ್ಕೆ ಸೂಕ್ತವಾಗಿದ್ದಲ್ಲಿ ಮುಝಫ್ಫರ್‌ಪುರದಲ್ಲಿ ನಡೆದಂತಹ ಘಟನೆಗಳು ನಡೆಯುತ್ತಿರಲಿಲ್ಲ ಎಂದು ನ್ಯಾಯಮೂರ್ತಿಗಳಾದ ಮದನ್ ಬಿ.ಲೋಕೂರ್, ಅಬ್ದುಲ್ ನಝೀರ್ ಮತ್ತು ದೀಪಕ್ ಗುಪ್ತಾ ಅವರಿದ್ದ ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಬಿಹಾರದ ಮುಝಫ್ಫರ್‌ಪುರದಲ್ಲಿ ಆಶ್ರಯಧಾಮವೊಂದರಲ್ಲಿ 34 ಬಾಲಕಿಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದ ವಿಚಾರಣೆಯನ್ನು ಈ ನ್ಯಾಯಪೀಠ ನಡೆಸುತ್ತಿದೆ. ಈ 34 ಬಾಲಕಿಯರಿಗೆ ಕೌನ್ಸೆಲಿಂಗ್ ನಡೆಸುವ ಅಗತ್ಯವಿದೆ. ಇಂತಹ ಇನ್ನೂ ಹಲವಾರು ಹುಡುಗಿಯರು ಇರಬಹುದು. ಇಂತಹ ಪ್ರಕರಣ ಮರುಕಳಿಸದಂತೆ ಯಾರಾದರೊಬ್ಬರು ಕ್ರಮ ಕೈಗೊಳ್ಳಬೇಕಿದೆ ಎಂದು ನ್ಯಾಯಪೀಠ ತಿಳಿಸಿದೆ.
ಮಕ್ಕಳ ರಕ್ಷಣಾ ಕಾರ್ಯನೀತಿಯೊಂದನ್ನು ರೂಪಿಸುವಂತೆ ಈ ಹಿಂದೆಯೇ ತಿಳಿಸಲಾಗಿದೆ. ಆದರೆ ಈ ನಿಟ್ಟಿನಲ್ಲಿ ಯಾವುದೇ ಕೆಲಸವಾಗಿಲ್ಲ ಎಂದು ನ್ಯಾಯಪೀಠ ಅಸಮಾಧಾನ ಸೂಚಿಸಿತು. ಇದಕ್ಕೆ ಉತ್ತರಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪರ ವಕೀಲರು, ಕಾರ್ಯನೀತಿ ರೂಪಿಸುವ ನಿಟ್ಟಿನಲ್ಲಿ ಎಲ್ಲಾ ರಾಜ್ಯಗಳ ಉಪಸ್ಥಿತಿಯಲ್ಲಿ ರಾಷ್ಟ್ರಮಟ್ಟದ ಸಮಾಲೋಚನಾ ಸಭೆ ನಡೆಯಲಿದೆ .ಆಶ್ರಯಧಾಮಗಳಲ್ಲಿ ನಡೆಯುವ ಲೈಂಗಿಕ ದೌರ್ಜನ್ಯ ನಿಗ್ರಹಿಸುವ ನಿಟ್ಟಿನಲ್ಲಿ ಸೂಚನೆಗಳನ್ನು ಎಲ್ಲಾ ರಾಜ್ಯಗಳಿಗೂ ರವಾನಿಸಲಾಗುತ್ತಿದೆ ಎಂದು ತಿಳಿಸಿದರು.
ಸಭೆ ನಡೆದರಷ್ಟೇ ಸಾಲದು. ಕಾರ್ಯನೀತಿ ರೂಪಿಸುವುದು ಮತ್ತು ಇಂತಹ ಮಕ್ಕಳು ಹಾಗೂ ಹುಡುಗಿಯರನ್ನು ರಕ್ಷಿಸಿ ಪುನರ್ವಸತಿ ಕಲ್ಪಿಸುವ ಕಾರ್ಯ ಈಗ ಆಗಬೇಕಿದೆ. ಇಲ್ಲಿ ಎರಡು ವಿಷಯಗಳನ್ನು ಗಮನಿಸಬೇಕಿದೆ. ಈ ರೀತಿಯ ಘಟನೆಗಳು ನಡೆದಿರುವುದಾಗಿ ಕೆಲವು ರಾಜ್ಯಗಳು ಒಪ್ಪಿಕೊಂಡಿವೆ. ಹೀಗಿರುವಾಗ ಸರಿಪಡಿಸುವ ಕ್ರಮಗಳನ್ನು ಕೈಗೊಳ್ಳಬೇಕು. ಇನ್ನು ಕೆಲವು ರಾಜ್ಯಗಳು ಒಪ್ಪಿಕೊಳ್ಳದಿರುವ ಸಾಧ್ಯತೆಯಿದೆ. ನಮ್ಮ ಪ್ರತಿಷ್ಟೆಗೆ ಘಾಸಿಯಾಗುವ ಕಾರಣದಿಂದ ದಯವಿಟ್ಟು ಅತ್ಯಾಚಾರ ಪ್ರಕರಣದ ಆರೋಪಪಟ್ಟಿ ದಾಖಲಿಸಬೇಡಿ ಎಂದು ಈ ರಾಜ್ಯಗಳು ಹೇಳಬಹುದು ಎಂದು ನ್ಯಾಯಪೀಠ ಹೇಳಿದೆ.
ಈ ಪ್ರಕರಣದಲ್ಲಿ ಅಮಿಕಸ್ ಕ್ಯುರಿ ಆಗಿರುವ ವಕೀಲೆ ಅಪರ್ಣಾ ಭಟ್ ಮಾಹಿತಿ ನೀಡಿ, ಆಶ್ರಯಧಾಮಗಳಲ್ಲಿ ಮಕ್ಕಳು ಮತ್ತು ಹುಡುಗಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಹೆಚ್ಚುತ್ತಿದ್ದು ಮಕ್ಕಳ ಸುರಕ್ಷೆ ಹಾಗೂ ಅವರ ಪುನರ್ವಸತಿ ಮಹತ್ವದ ವಿಷಯವಾಗಿದೆ ಎಂದರು. ಇಂತಹ ಪ್ರಕರಣಗಳಲ್ಲಿ ಯಾವ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ವರದಿ ಸಲ್ಲಿಸುವಂತೆ ರಾಜ್ಯ ಸರಕಾರಗಳಿಗೆ ಸೂಚಿಸಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದ ಅವರು, ಇಂತಹ ಪ್ರಕರಣಗಳನ್ನು ನಿರ್ವಹಿಸುವ ಕುರಿತು ರಾಜ್ಯ ಸರಕಾರಗಳು ಕಾರ್ಯನೀತಿಯನ್ನು ಹೊಂದಿರಬೇಕು ಎಂದು ಹೇಳಿದರು. ಇದಕ್ಕೆ ಸಮ್ಮತಿಸಿದ ನ್ಯಾಯಪೀಠ, ಮಕ್ಕಳ ಮತ್ತು ಹುಡುಗಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳ ಯಥಾಸ್ಥಿತಿ ವರದಿಯೊಂದಿಗೆ ಹಾಜರಾಗುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ(ಎಂಡಬ್ಲೂಸಿಡಿ)ಯ ಜಂಟಿ ಕಾರ್ಯದರ್ಶಿಗೆ ಸೂಚಿಸಿತು.
2015ರಿಂದ 2017ರ ಮಾರ್ಚ್‌ವರೆಗಿನ ಅವಧಿಯಲ್ಲಿ ಆಶ್ರಯಧಾಮಗಳಲ್ಲಿ ವಾಸಿಸುವ 1,575 ಮಕ್ಕಳ ಮೇಲೆ ದೌರ್ಜನ್ಯ ನಡೆದಿದೆ ಎಂದು ಎಂಡಬ್ಲೂಸಿಡಿ ಬಿಡುಗಡೆಗೊಳಿಸಿದ ಆಡಿಟ್ ವರದಿಯಲ್ಲಿ ತಿಳಿಸಲಾಗಿದೆ.