ಹಫೀಝ್ ಜೊತೆ ಸಚಿವ ವೇದಿಕೆ ಹಂಚಿಕೊಂಡಿದ್ದು ತಪ್ಪೆಂದ ಪಾಕ್ ವಿದೇಶ ಸಚಿವ

Update: 2018-10-04 16:50 GMT

ವಾಶಿಂಗ್ಟನ್, ಅ. 4: ಮುಂಬೈ ಭಯೋತ್ಪಾದಕ ದಾಳಿಯ ಸೂತ್ರಧಾರ ಹಫೀಝ್ ಸಯೀದ್ ಜೊತೆ ವೇದಿಕೆ ಹಂಚಿಕೊಳ್ಳುವಾಗ ಧಾರ್ಮಿಕ ವ್ಯವಹಾರಗಳ ಸಚಿವ ನೂರುಲ್ ಹಕ್ ಕಾದ್ರಿ ಹೆಚ್ಚು ಸಂವೇದನಾಶೀಲತೆ ಪ್ರದರ್ಶಿಸಬೇಕಾಗಿತ್ತು ಎಂದು ಆ ದೇಶದ ವಿದೇಶ ಸಚಿವ ಶಾ ಮೆಹ್ಮೂದ್ ಕುರೇಶಿ ಹೇಳಿದ್ದಾರೆ.

ನನ್ನ ಸಹೋದ್ಯೋಗಿ ಮಾಡಿರುವುದು ತಪ್ಪು ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ.

‘‘ನಾನು ದೇಶಕ್ಕೆ ಹಿಂದಿರುಗಿದ ಮೇಲೆ, ನೀವು ಯಾಕೆ ಹೀಗೆ ಮಾಡಿದಿರಿ ಎಂದು ನಾನು ಅವರನ್ನು ಖಂಡಿತವಾಗಿಯೂ ಕೇಳುತ್ತೇನೆ. ಆದರೆ, ಕಾಶ್ಮೀರದ ಪರಿಸ್ಥಿತಿಯನ್ನು ಬಿಂಬಿಸಲು ಏರ್ಪಡಿಸಿದ ಸಮಾರಂಭ ಅದಾಗಿತ್ತು ಎಂಬುದಾಗಿ ನನಗೆ ಮಾಹಿತಿ ನೀಡಲಾಗಿದೆ’’ ಬುಧವಾರ ವಾಶಿಂಗ್ಟನ್‌ನಲ್ಲಿ ನಡೆದ ಸಮಾರಂಭವೊಂದರಲ್ಲಿ ಭಾಗವಹಿಸಿದ ವೇಳೆ ಹೇಳಿದರು.

ಇಸ್ಲಾಮಾಬಾದ್‌ನಲ್ಲಿ ನಡೆದ ಸಭೆಯೊಂದರಲ್ಲಿ ಲಷ್ಕರೆ ತಯ್ಯಬ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಹಫೀಝ್ ಸಯೀದ್ ಜೊತೆ ಪಾಕ್‌ನ ಧಾರ್ಮಿಕ ವ್ಯವಹಾರಗಳ ಸಚಿವರು ವೇದಿಕೆ ಹಂಚಿಕೊಂಡಿರುವ ಬಗ್ಗೆ ಕೇಳಲಾದ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸುತ್ತಿದ್ದರು.

‘‘ಆ ಕಾರ್ಯಕ್ರಮಕ್ಕೂ ಲಷ್ಕರೆ ತಯ್ಯಬಕ್ಕೂ ಸಂಬಂಧವಿಲ್ಲ. ಅಲ್ಲಿ ಬೇರೆ ರಾಜಕೀಯ ನಾಯಕರೂ ಇದ್ದರು. ಹಫೀಝ್ ಅವರ ಪೈಕಿ ಓರ್ವನಾಗಿದ್ದನು’’ ಎಂದು ಕುರೇಶಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News