ಕೇವಲ ಕಾನೂನು ತಯಾರಿಸಿದರಷ್ಟೇ ಸಾಕೇ?

Update: 2018-10-04 18:41 GMT

ಭಾಗ-3

ಈ ಸ್ಥಿತಿಯನ್ನು ಕುರಿತು ಯೋಚಿಸಿದಾಗಲೆಲ್ಲ ನನಗೆ ಬಿಸ್ಮಾರ್ಕ್ ಹಾಗೂ ಬರ್ನಾರ್ಡ್ ಶಾ ಅವರ ಮಾತುಗಳು ನೆನಪಾಗುತ್ತವೆ. ಬಿಸ್ಮಾರ್ಕ್, ‘‘ರಾಜಕೀಯವೆಂದರೆ ಅಸಂಭವನೀಯವಾದ ಒಂದು ಸಂಗತಿಯನ್ನು ಸಾಧಿಸುವ ಆಟವಲ್ಲ. ರಾಜಕೀಯವೆಂದರೆ ಸಂಭವನೀಯವಾದ ಸಂಗತಿಯನ್ನು ಸಾಧ್ಯಗೊಳಿಸುವ ಆಟ’’, ಎಂದಿರುವನು. ಕೆಲವೇ ದಿನಗಳ ಕೆಳಗೆ ಬರ್ನಾರ್ಡ್ ಶಾ, ‘‘ಒಳ್ಳೆಯ ಗುರಿಗಳನ್ನು ಕಣ್ಣೆದುರು ಇರಿಸಿಕೊಳ್ಳುವುದು ಒಳ್ಳೆಯದು. ಆದರೆ ಯಾವಾಗಲೂ ಒಳ್ಳೆಯತನದ ಬೆನ್ನು ಹತ್ತುವುದು ತುಂಬ ಅಪಾಯಕರವೆಂಬುದನ್ನು ಗಮನದಲ್ಲಿ ಇರಿಸಿಕೊಳ್ಳಬೇಕು’’ ಎಂದು ಹೇಳಿರುವನು. ನಮ್ಮ ವಿದೇಶ ನೀತಿಯು ಪ್ರಪಂಚದ ಸರ್ವಶ್ರೇಷ್ಠರಾದ ವ್ಯಕ್ತಿಗಳು ಹೇಳಿದುದರ ಪೂರ್ತಿ ವಿರುದ್ಧ ದಿಕ್ಕಿನಲ್ಲಿದೆ.

ಸೇನೆಗಾಗಿ ಆಗುವ ಅಂಕೆಯಿಲ್ಲದ ದುಂದುವೆಚ್ಚಗಳು, ಹಸಿವು ಪೀಡಿತರಾದ ಲಕ್ಷಗಟ್ಟಳೆ ಜೀವಗಳಿಗೆ ಅನ್ನವನ್ನು ನೀಡಲು ಪಡಬೇಕಾದ ಪಾಡು ಹಾಗೂ ನಮ್ಮ ದೇಶದ ಉದ್ಯಮೀಕರಣಕ್ಕಾಗಿ ಬೇಕಿರುವ ಆರ್ಥಿಕ ನೆರವನ್ನು ದೊರಕಿಸಲು ಆಗುತ್ತಿರುವ ತೊಂದರೆಗಳು, ಅಸಂಭಾವ್ಯವಾದ ಸಂಗತಿಗಳನ್ನು ಮಾಡಲು ಬೆನ್ನು ಹತ್ತುವ ಹಾಗೂ ಯಾವಾಗಲೂ ಸಂತತನದ ಅವತಾರವನ್ನು ಧರಿಸುವ ನೀತಿಯಿಂದಾಗಿ ನಮಗೆ ಅದೆಷ್ಟು ನಷ್ಟವಾಗಿದೆ ಎನ್ನುವುದಕ್ಕೆ ಸಾಕ್ಷಗಳನ್ನು ಒದಗಿಸುತ್ತವೆ.

ನಾವು ಮನ್ನೂರೈವತ್ತು ಕೋಟಿ ವಾರ್ಷಿಕ ಆದಾಯದಲ್ಲಿ ಒಂದು ನೂರಾಎಂಬತ್ತು ಕೋಟಿ ರೂಪಾಯಿಗಳನ್ನು ಸೇನೆಗಾಗಿ ವ್ಯಯಿಸುತ್ತಿದ್ದೇವೆ. ಇಂಥ ಪ್ರಚಂಡವಾದ ವೆಚ್ಚಕ್ಕೆ ಸರಿಸಟಿಯಾದ ಉದಾಹರಣೆ ಬೇರೊಂದಿಲ್ಲ. ಇದು ನಮ್ಮ ವಿದೇಶ ನೀತಿಯ ಪರಿಣಾಮ. ನಮ್ಮ ರಕ್ಷಣೆಯ ವೆಚ್ಚದ ಹೊರೆಯನ್ನು ಇಳಿಸಬಲ್ಲ ಒಬ್ಬ ಸ್ನೇಹಿತನೂ ನಮಗಿಲ್ಲ. ನಾವೇ ಅದನ್ನು ಭರಿಸಬೇಕು. ಹೀಗಾಗಿ ಈ ವಿದೇಶ ನೀತಿಯು ಅದೆಷ್ಟು ಜಾಣತನದ್ದು ಎಂಬುದನ್ನು ನೋಡಿ.

ಪಾಕಿಸ್ಥಾನದೊಡನೆಯ ವೈಮನಸ್ಸು ನಮ್ಮ ವಿದೇಶ ನೀತಿಯ ಒಂದು ಅಂಗವಾಗಿದೆ. ಈ ವೈಮನಸ್ಸು ನನಗೆ ವರ್ಜಿತವಾದುದು.
ಪಾಕಿಸ್ಥಾನದೊಡನೆ ವೈಮನಸ್ಸು ಬರಲು ಮುಖ್ಯವಾಗಿ ಎರಡು ಕಾರಣಗಳು. ಒಂದು ಕಾಶ್ಮೀರ ಪ್ರಕರಣ. ಇನ್ನೊಂದು, ಪೂರ್ವ ಬಂಗಾಲದ ಭಾರತೀಯ ಜನರ ಪರಿಸ್ಥಿತಿ. ಇದು ಕಾಶ್ಮೀರದ ಜನಕ್ಕಿಂತಲೂ ದಯನೀಯವಾಗಿರುವುದೆಂದು ವೃತ್ತಪತ್ರಗಳಿಂದ ತಿಳಿದು ಬರುತ್ತದೆ. ಹೀಗಿರುವಲ್ಲಿ, ನಾವು ಬರೀ ಕಾಶ್ಮೀರದ ಡೋಲನ್ನು ಬಾರಿಸುತ್ತೇವೆ. ಇಷ್ಟಾಗಿಯೂ ನಾವು ನಿಜವಾದ ತತ್ವವನ್ನು ಆಧರಿಸಿ ಜಗಳಾಡುತ್ತಿಲ್ಲವೆಂದೇ ನಾನು ಸಾಧಿಸುತ್ತೇನೆ. ಯಾರು ನಿಜ ಎನ್ನುವುದು ಮೂಲ ಪ್ರಶ್ನೆಯಾಗಿರದೆ ಏನು ಸೂಕ್ತವಾದುದು, ಎನ್ನುವುದೇ ನಿಜವಾದ ಅಂಶವಾಗಿದೆ. ಹೀಗಾಗಿ ಕಾಶ್ಮೀರದ ವಿಭಜನೆಯೇ ಸೂಕ್ತವಾದುದೆಂಬುದು ನನ್ನ ಪ್ರಾಮಾಣಿಕ ಅಭಿಪ್ರಾಯ. ಭಾರತದ ವಿಭಜನೆಯಂತೆಯೇ ಕಾಶ್ಮೀರದ ಬುದ್ಧ ಧರ್ಮೀಯರು ಹಾಗೂ ಹಿಂದಿ ಭಾಗಗಳು ಭಾರತದತ್ತ ಇರಬೇಕು ಹಾಗೂ ಬಹುಸಂಖ್ಯ ಮುಸಲ್ಮಾನರ ವಿಭಾಗವನ್ನು ಪಾಕಿಸ್ಥಾನಕ್ಕೆ ಜೋಡಿಸಬೇಕು. ನಿಜವಾಗಿಯೂ ಕಾಸ್ಮೀರದ ಮುಸಲ್ಮಾನರ ಪ್ರಶ್ನೆಯು ನಮಗೆ ಸಂಬಂಧ ಪಟ್ಟುದಲ್ಲ. ಅದು ಪಾಕಿಸ್ಥಾನ ಹಾಗೂ ಅಲ್ಲಿಯ ಸ್ಥಳೀಯ ಮುಸಲ್ಮಾನರಿಗೆ ಸಂಬಂಧ ಪಟ್ಟುದು. ಅವರು ತಮಗೆ ತೋಚಿದಂತೆ ಅದನ್ನು ಬಿಡಿಸಬೇಕು. ಇಲ್ಲವಾದರೆ ಕಾಶ್ಮೀರದಲ್ಲಿ ಕಾಶ್ಮೀರ ಕಣಿವೆ, ಜಮ್ಮು -ಲಡಾಖ್ ವಿಭಾಗ ಮತ್ತು ಯುದ್ಧವಿರಾಮ ವಿಭಾಗವೆಂದು ಮೂರು ವಿಭಾಗಗಳನ್ನು ಮಾಡಿ, ಕೇವಲ ಕಾಶ್ಮೀರ ಕಣಿವೆಯ ವಿಭಾಗದಲ್ಲಿ ಜನಾಭಿಪ್ರಾಯವನ್ನು ಪಡೆಯಬೇಕು. ಸದ್ಯಕ್ಕೆ ಜನಾಭಿಪ್ರಾಯವನ್ನು ಕುರಿತು ಯೋಚಿಸಲಾಗುತ್ತಿದ್ದು ಆದರಿಂದಾಗಿ ಕಾಶ್ಮೀರದ ಹಿಂದಿ ಹಾಗೂ ಬುದ್ಧ ಸಂಸ್ಕೃತಿಯ ಭಾಗವು ಪಾಕಿಸ್ಥಾನಕ್ಕೆ ಹೋಗಬಹುದೆಂದು ಹುಟ್ಟಿಕೊಳ್ಳುವ ಭಯವು ಸಾಧಾರವಾದುದು. ಅದರಿಂದಾಗಿ ಇಂದು ಪೂರ್ವ ಬಂಗಾಲದಲ್ಲಿ ಎದುರಿಸಬೇಕಾಗಿ ಬಂದಿರುವ ಘಟನೆಗಳಂಥವೇ ಪ್ರಶ್ನೆಗಳು ಪಾಕಿಸ್ತಾನದ ಬದಿಯಲ್ಲಿ ಇರುವ ಹಿಂದಿ ಹಾಗೂ ಬುದ್ಧ ಜನರೆದುರಿಗೆ ಆ ಎಂದು ಬಾಯಿ ತೆರೆದು ನಿಲ್ಲುವವು.

ಇನ್ನು, ರಾಜೀನಾಮೆಗೆ ಕಾರಣವಾದ ಬೇರೆ ಪ್ರಶ್ನೆಗಳತ್ತ ತಿರುಗುವೆನು. ಸರಕಾರದ ಸಚಿವ ಸಂಪುಟವೆಂದರೆ ಬೇರೆ ಬೇರೆ ಸಮಿತಿಗಳು ಮೊದಲೇ ನಿರ್ಧರಿಸಿದ ಕಾರ್ಯದ ರೂಪುರೇಷೆಗಳನ್ನು ನೋಂದಾಯಿಸುವ ಹಾಗೂ ಮುದ್ರಬದ್ಧಗೊಳಿಸುವ ಕೇಂದ್ರವಾಗಿದೆ. ಸಚಿವ ಸಂಪುಟವು ಈ ಸಮಿತಿಗಳ ತಂತ್ರದಿಂದಲೇ ನಡೆಯುತ್ತದೆ. ಒಂದು ಸುರಕ್ಷಾ ಸಮಿತಿಯಿದೆ. ಒಂದು ವಿದೇಶಿ ಚಟುವಟಿಕೆಗಳ ಸಮಿತಿ. ಈ ಸಮಿತಿಯು ವಿದೇಶಗಳ ಎಲ್ಲ ಮಹತ್ವದ ಘಟನೆಗಳ ಬಗೆಗೆ ಅಪಾಯಗಳನ್ನು ಯೋಜಿಸುತ್ತದೆ. ಹಾಗೆಯೇ ಸುರಕ್ಷಾ ಸಮಿತಿಯು ರಕ್ಷಣೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ನೊಡಿಕೊಳ್ಳುತ್ತದೆ. ಕೆಲವು ಸಚಿವರನ್ನು ಇವುಗಳ ಸದಸ್ಯರನ್ನಾಗಿ ನೇಮಿಸಲಾಗುತ್ತದೆ. ನಾನು ಇವುಗಳಲ್ಲಿ ಯಾವುದೇ ಸಮಿತಿಯ ಸದಸ್ಯನಾಗಿರಲಿಲ್ಲ.

ಈ ಸಮಿತಿಗಳು ಗುಟ್ಟಾಗಿ ತಮ್ಮ ಕೆಲಸಗಳನ್ನು ಮಾಡುತ್ತವೆ. ದೇಶದ ನೀತಿಯನ್ನು ನಿರ್ಧರಿಸುವಲ್ಲಿ ಸದಸ್ಯರಲ್ಲದ ಸಚಿವರು ಪಾಲ್ಗೊಳ್ಳಲಾರರು. ಆದರೆ ಅವರೆಲ್ಲ ಸಂಯುಕ್ತ ಹೊಣೆಗಾರಿಕೆಯನ್ನು ಮಾತ್ರ ಹೊರಬೇಕಾಗುತ್ತದೆ. ನನಗೆ ಇಂತಹ ವಿಚಿತ್ರ ಹಾಗೂ ಅಸಾಧ್ಯವಾದ ಸಂಗತಿಯನ್ನು ಮಾಡಬೇಕಾಗುತ್ತಿತ್ತು.

ಇನ್ನು, ಕೊನೆಯದಾಗಿ ರಾಜೀನಾಮೆಯನ್ನು ಕೊಡಲು ಕಾರಣವಾದ ಸಂಗತಿಯ ಬಗೆಗೆ ಹೇಳುವೆನು. ಅದೆಂದರೆ, ಹಿಂದೂ ಕೋಡ್ ಬಿಲ್ ಬಗೆಗಿನ ಸರಕಾರದ ಮುಂದೂಡುವಿಕೆ ಹಾಗೂ ಅದರ ಪರಿವೆಗೇಡಿತನಗಳು. 11 ಎಪ್ರಿಲ್ 1947ರಂದು ಮೊದಲ ಬಾರಿಗೆ ಮಂಡಿಸಲಾಯಿತು. ಅದು ನಾಲ್ಕು ವರ್ಷಗಳ ಕಾಲ ಜೀವ ಹಿಡಿದುಕೊಂಡಿರಲು ಸಾಧ್ಯವಾಯಿತು, ಅದರ ನಾಲ್ಕು ಕಲಮುಗಳು ಅಂಗೀಕೃತವಾದ ಬಳಿಕ ಬಿಲ್ಲನ್ನು ಅಕ್ಷರಶಃ ಕೊಲೆ ಮಾಡುವಾಗ ಯಾರಿಗೂ ಕಾಲ ಆ ಬಿಲ್ಲನ್ನು ಸೆಲೆಕ್ಟ್ ಕಮಿಟಿಗೆ ಕಳಿಸಿಕೊಡಬೇಕೆನ್ನುವ ಅವಶ್ಯಕತೆಯೇ ಕಾಣಲಿಲ್ಲ.

ಬಿಲ್ಲನ್ನು 9 ಎಪ್ರಿಲ್ 1948ರಂದು ಸೆಲೆಕ್ಟ್ ಕಮಿಟಿಗೆ ಕಳಿಸಲಾಯಿತು. 12 ಆಗಸ್ಟ್ 1948ರಂದು ಅದು ತನ್ನ ಅಭಿಪ್ರಾಯವನ್ನು ಪಾರ್ಲಿಮೆಂಟಿಗೆ ಸಲ್ಲಿಸಿತು. ಅದರ ಮಸೂದೆಯನ್ನು ದಿನದ ಕಲಾಪಕ್ಕೆ ಸೇರ್ಪಡಿಸುವಲ್ಲಿ ಇಷ್ಟೊಂದು ಕಾಲ ಕಳೆಯಿತು. 1949ರ ಫೆಬ್ರವರಿಯ ಅಧಿವೇಶನದವರೆಗೆ ಈ ಮಸೂದೆಯನ್ನು ಕೈಬಿಡಲಾಗಿ ಅದನ್ನು ಕುರಿತು ಚರ್ಚಿಸಲು ನಿರಾಕರಿಸಲಾಯಿತು. ಹೀಗಾಗಿ ಆ ಚರ್ಚೆ ಹತ್ತು ತಿಂಗಳು ಮುಂದಕ್ಕೆ ಹೋಯಿತು. ಚರ್ಚೆಯು ನಾಲ್ಕು ದಿನ ಫೆಬ್ರವರಿಯಲ್ಲಿ, ಒಂದು ದಿನ ಮಾರ್ಚ್‌ನಲ್ಲಿ, ಎರಡು ದಿನ ಎಪ್ರಿಲ್‌ನಲ್ಲಿ, ಎಂಬುದಾಗಿ ವಿಭಾಗಿಸಲ್ಪಟ್ಟಿತು! ಆ ಮೇಲೆ 14 ಡಿಸೆಂಬರ್ 1949ರ ಒಂದೇ ದಿನವನ್ನು ನೀಡಲಾಯಿತು. ಸೆಲೆಕ್ಟ್ ಕಮಿಟಿಯು ಒಪ್ಪಿಕೊಂಡ ನನ್ನ ಹಿಂದೂ ಬಿಲ್‌ನ ಮಸೂದೆಯು ಪಾರ್ಲಿಮೆಂಟ್‌ನ ಎದುರು ಬರಬೇಕೆಂಬ ನನ್ನ ಗೊತ್ತುವಳಿಯನ್ನು ಆ ದಿನ ಗಮನಕ್ಕೆ ತಂದುಕೊಳ್ಳಲಾಯಿತು. ಹಿಂದೂ ಕೋಡ್ ಬಿಲ್‌ಗೆ 1950ರಲ್ಲಿ ಆಸ್ಪದವನ್ನೇ ನೀಡಲಾಗಲಿಲ್ಲ! ಮುಂದೆ ಆ ಬಿಲ್ ಫೆಬ್ರವರಿ, 5, 1951ರಂದು ಚರ್ಚೆಗೆ ಬಂದು ಒಂದೊಂದು ಕಲಮಿನ ಕುರಿತು ಚರ್ಚೆ ಶುರುವಾಯಿತು. ಅದಕ್ಕಾಗಿ ಕೇವಲ ಐದು, ಆರು ಮತ್ತು ಏಳು ಈ ಮೂರೇ ದಿನಗಳನ್ನು ಕೊಡಲಾಯಿತು. ಮತ್ತೆ ಬಿಲ್ಲನ್ನು ಕೈಬಿಡಲಾಯಿತು!

ಇದು ಈ ಪಾರ್ಲಿಮೆಂಟಿನ ಕೊನೆಯ ಅಧಿವೇಶನವಾಗಿದೆ. ಹೀಗಾಗಿ ಸಚಿವ ಸಂಪುಟವು ಹಿಂದೂ ಕೋಡ್ ಬಿಲ್ಲನ್ನು ಕುರಿತು ತೀರ್ಮಾನಿಸಬೇಕಿತ್ತು. ಅದನ್ನು ಈಗಿನ ಪಾರ್ಲಿಮೆಂಟು ಪೂರ್ತಿಗೊಳಿಸಬೇಕಿತ್ತು. ಅದರ ಕುರಿತು ಇದೇ ಪಾರ್ಲಿಮೆಂಟಿನಲ್ಲಿ ಇತ್ಯರ್ಥಪಡಿಸಬೇಕೆಂದು ತೀರ್ಮಾನವಾಯಿತು. ಹೀಗಾಗಿ 17 ಸೆಪ್ಟಂಬರ್ 1951ರಂದು ಬಿಲ್ಲನ್ನು ಚರ್ಚೆಗಾಗಿ ಎತ್ತಿಕೊಳ್ಳಲಾಯಿತು. ಈ ಚರ್ಚೆ ನಡೆದಿರುವಾಗಲೇ ಪ್ರಧಾನ ಮಂತ್ರಿಯವರು ಹೊಸದೊಂದು ಯೋಜನೆಯನ್ನು ನಡುವೆಯೇ ಮಂಡಿಸಿದ್ದರಿಂದ ವೇಳೆಯ ಅಭಾವ ಉಂಟಾಗಿ, ಬಿಲ್ಲಿನ ಎಲ್ಲ ಕಲಮುಗಳು ಪಾಸ್‌ಆಗಳು ಸಾಧ್ಯವಿಲ್ಲದ ಕಾರಣ ಅದರ ಒಂದು ಭಾಗವನ್ನಾದರೂ ಪಾಸ್‌ಮಾಡಿಸಿ ಕೊಂಡು ಕಾನೂನಾಗಿ ಮಾರ್ಪಡಿಸಿದರೆ ಇಡಿಯ ಬಿಲ್ಲು ಕೊಳೆಯುತ್ತ ಬಿದ್ದಿರಲಾರದು. ಇದಂತೂ ಒಂದು ದೊಡ್ಡ ಬಿಕ್ಕಟ್ಟು ಆಗಿತ್ತು. ಆದರೆ ನಾನು ಅದನ್ನು ಒಪ್ಪಿಕೊಂಡೆ. ಏಕೆಂದರೆ, ‘ಎಲ್ಲವೂ ನಾಶಹೊಂದುವಾಗ ಸ್ವಲ್ಪವನ್ನಾದರು ಉಳಿಸಿಕೊಳ್ಳ ಬೇಕು!’ ಈ ಬಿಲ್ಲಿನಲ್ಲಿ ಇರುವ ಮದುವೆ ಮತ್ತು ವಿಚ್ಛೇದನೆಯ ವಿಭಾಗಗಳನ್ನು ಆಯ್ದುಕೊಳ್ಳ ಬೇಕೆಂದು ಪ್ರಧಾನಿಗಳು ಸೂಚಿಸಿದರು.

ಹೀಗೆ ಕತ್ತರಿಸಲಾದ ಬಿಲ್ಲನ್ನು ಮಂಡಿಸಲಾಯಿತು. ಎರಡು ಮೂರು ದಿನಗಳ ತರುವಾಯ ಪ್ರಧಾನಿಯವರು ಇನ್ನೊಂದು ಯೋಜನೆಯನ್ನು ಹೊರತೆಗೆದರು. ಅದೆಂದರೆ, ಇಡಿಯ ಬಿಲ್ಲನ್ನೇ ಕೈಬಿಡಬೇಕು, ಎಂಬುದು! ಇದಂತೂ ನನಗೆ ಅಚ್ಚರಿಯ ಬಲು ದೊಡ್ಡ ಪೆಟ್ಟಾಗಿತ್ತು. ನಾನು ತೆಪ್ಪಗಾಗಿಬಿಟ್ಟೆ. ವೇಳೆಯ ಅಭಾವದಿಂದಾಗಿ ಕತ್ತರಿಸಲಾದ ಈ ಬಿಲ್ಲನ್ನು ಮುಂದೂಡಲಾಗುತ್ತಿದೆ, ಎಂಬ ಸಂಗತಿಯು ನನಗೆ ಮನದಟ್ಟಾಗುವಂತೆಯೂ, ಒಪ್ಪಿಗೆಯಾಗುವಂತೆಯೂ ಇರಲಿಲ್ಲ. ಏಕೆಂದರೆ, ಪ್ರಭಾವಿಗಳಾದ ಬೇರೆ ಸಚಿವರು ತಮ್ಮ ತಮ್ಮ ಬಿಲ್ಲುಗಳನ್ನು ಮುಂದಕ್ಕೆ ಸರಿಸಲು ಹೆಣಗುವುದನ್ನು ಕಂಡಿದ್ದೆ.

ಪೂರ್ಣಾವಸ್ಥೆಯಲ್ಲಿರುವ ಹಿಂದೂ ಕೋಡ್ ಬಿಲ್ಲನ್ನು ತಳ್ಳಿ, ಬನಾರಸ, ಅಲೀಗಡ ವಿಶ್ವವಿದ್ಯಾನಿಲಯಗಳ ಅಪೂರ್ಣಾವಸ್ಥೆಯ ಬಿಲ್ಲುಗಳನ್ನು ಪಾರ್ಲಿಮೆಂಟಿನೆದುರು ಮಂಡಿಸಲು ವೇಳೆಯನ್ನು ಹೇಗೆ ಕೊಡಲಾಯಿತೆನ್ನುವುದು ನನಗೆ ತಿಳಿಯದು. ಈ ವಿಶ್ವವಿದ್ಯಾನಿಲಯಗಳನ್ನು ನಡೆಸಲು ಬೇಕಿದ್ದ ಯಾವುದೇ ಕಾನೂನು ಅಸ್ತಿತ್ವದಲ್ಲಿ ಇರಲಿಲ್ಲವೆಂದೇನೂ ಅಲ್ಲ. ಈ ಬಿಲ್‌ಗಳು ಇಷ್ಟರಲ್ಲಿಯೇ ಪಾಸ್ ಆಗಿರದಿದ್ದರೂ ಇವೆರಡೂ ವಿಶ್ವವಿದ್ಯಾನಿಲಯಗಳೇನೂ ರಸಾತಳವನ್ನು ತಲುಪುತ್ತಿರಲಿಲ್ಲ. ಪ್ರೆಸ್ ಬಿಲ್ಲನ್ನು ಕೂಡ ಇಷ್ಟೊಂದು ಅವಸರದಿಂದ ಮುಂದಕ್ಕೆ ತರಲು ಕಾರಣವಿರಲಿಲ್ಲ. ಈ ಬಿಲ್ಲುಗಳನ್ನು ತಡೆಹಿಡಿಯಬಹುದಿತ್ತು. ಪ್ರಧಾನಿಗಳು ಹಿಂದೂ ಕೋಡ್ ಬಿಲ್ಲಿನ ಬಗೆಗೆ ಪ್ರಾಮಾಣಿಕರಾಗಿರಲಿಲ್ಲವೆಂದಲ್ಲ. ಆದರೆ ಅದನ್ನು ಪಾಸ್ ಮಾಡಲು ಬೇಕಿದ್ದ ವಿಶೇಷವಾದ ತಾಳ್ಮೆ ಹಾಗೂ ಅಸ್ಥೆ ಅವರಲ್ಲಿ ಇರಲಿಲ್ಲ.

ಹಿಂದೂ ಕೋಡ್ ಸಂದರ್ಭದಲ್ಲಿ ನನ್ನನ್ನು ಹಿಂಸಿಸಲಾಯಿತು, ಎಂದರೆ ಅದೊಂದು ಅತಿಶಯೋಕ್ತಿ ಎನ್ನಿಸಲಾರದು. ಸಚಿವಸಂಪುಟದಲ್ಲಿ ನನಗೆ ರಾಜ್ಯಕರ್ತರ ಪಕ್ಷದ ಬೆಂಬಲ ಇರಲಿಲ್ಲ. ಪ್ರಧಾನಿಯವರು ಈ ಬಿಲ್ ಸಂದರ್ಭದಲ್ಲಿ ಬಿಚ್ಚುಮನದಿಂದ ಮತದಾನವನ್ನು ಮಾಡಲು ಕಾಂಗ್ರೆಸ್ ಪಕ್ಷಕ್ಕೆ ಸ್ವಾತಂತ್ರವನ್ನು ಕೊಟ್ಟಿದ್ದರು. ಇದೊಂದು ಅನಿರೀಕ್ಷಿತವಾದ ಸಂಗತಿಯಾಗಿತ್ತು. ಪಕ್ಷದ ಇತಿಹಾಸದಲ್ಲಿ ಇದೊಂದು ಹೊಸ ಪದ್ಧತಿಯಾಗಿತ್ತು. ಏನಿಲ್ಲೆಂದರೂ ಪಾರ್ಲಿಮೆಂಟ್ ಪಕ್ಷದ ನಾಯಕನಾದರೂ ಭಾಷಣಗಳ ವೇಳೆಗಳಿಗೆ ನಿರ್ಬಂಧನೆಯನ್ನು (ಡಿಜಿ) ಹಾಕುವನೆಂದು ನಿರೀಕ್ಷಿಸಲಾಗಿತ್ತು. ಆವಶ್ಯಕವಿದ್ದ ಚರ್ಚೆ ಮುಗಿದ ತರುವಾಯವಾದರೂ ವಾದವಿವಾದಗಳನ್ನು ನಿಲ್ಲಿಸುವಂತೆ ಪ್ರಮುಖ ಪಕ್ಷದ ನಾಯಕನಿಗೆ ಸೂಚನೆಯನ್ನು ನೀಡಲಾಗುವುದೆಂದು ಭಾವಿಸಿದ್ದೆ. ಇಂಥ ನಿರ್ಬಂಧದಿಂದಾಗಿ ಹೊತ್ತಿಗೆ ಸರಿಯಾಗಿ ಬಿಲ್ ಪಾಸ್ ಆಗಬಹುದಿತ್ತು. ಆದರೆ ಎಂದಿಗೂ ಇಂಥ ಸೂಚನೆಯನ್ನು ನೀಡಲಾಗಲಿಲ್ಲ. ಪಾರ್ಲಿಮೆಂಟಿನ ಕಾರ್ಯ ಸಚಿವ ಹಾಗೂ ಸರಕಾರಿ ಪಕ್ಷದ ಪ್ರತಿನಿಧಿಗಳನ್ನು ಕುರಿತು ಕಡಿಮೆ ಹೇಳಿದಷ್ಟು ಒಳ್ಳೆಯದು. ಅವರು ಹಿಂದೂ ಕೋಡ್ ಬಿಲ್ಲನ್ನು ದ್ವೇಷಿಸುವವರಾಗಿದ್ದರು! ಅವರು ಅದಕ್ಕೆ ಅಪ್ಪಟ ವಿರೋಧಕರಾಗಿದ್ದರು.


(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News