ರಫೇಲ್ ಒಪ್ಪಂದ ಸಂದರ್ಭ ರಿಲಯನ್ಸ್ ಡಿಫೆನ್ಸ್ ಗೆ ಭೂಮಿಯಾಗಲಿ, ಉದ್ಯಮ ಲೈಸೆನ್ಸ್ ಆಗಲೀ ಇರಲಿಲ್ಲ

Update: 2018-10-05 10:57 GMT

ದೇಶದಲ್ಲಿ ರಾಜಕೀಯ ಆರೋಪ- ಪ್ರತ್ಯಾರೋಪಗಳಿಗೆ ಕಾರಣವಾಗಿರುವ ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಮಾಜಿ ಸಚಿವ ಯಶವಂತ್ ಸಿನ್ಹಾ, ಅರುಣ್ ಶೌರಿ ಹಾಗು ವಕೀಲ ಪ್ರಶಾಂತ್ ಭೂಷಣ್ ಬೆಚ್ಚಿಬೀಳಿಸುವ ರಹಸ್ಯವೊಂದನ್ನು ಬಿಚ್ಚಿಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ)ಗೆ ದೂರು ನೀಡಿದ್ದಾರೆ.

ಹದಿನಾರು ರಫೇಲ್ ಯುದ್ಧವಿಮಾನಗಳ ಖರೀದಿಗೆ ಫ್ರಾನ್ಸ್‍ನ ಡಸಾಲ್ಟ್ ಏವಿಯೇಶನ್ ಜತೆ ಜಂಟಿ ಸಹಭಾಗಿತ್ವ ಒಪ್ಪಂದ ಮಾಡಿಕೊಳ್ಳುವ ಸಂದರ್ಭದಲ್ಲಿ ಅಂದರೆ 2016ರಲ್ಲಿ ಅನಿಲ್ ಅಂಬಾನಿ ಮಾಲಕತ್ವದ ರಿಲಯನ್ಸ್ ಡಿಫೆನ್ಸ್ ಲಿಮಿಟೆಡ್‍ಗೆ (ಆರ್‍ ಡಿಎಲ್ ) ರಕ್ಷಣಾ ಉತ್ಪಾದನೆ ಘಟಕ ನಿರ್ಮಿಸಲು ಭೂಮಿಯಾಗಲೀ, ಉದ್ಯಮ ಲೈಸನ್ಸ್ ಆಗಲೀ ಇರಲಿಲ್ಲ ಎಂಬ ಮಹತ್ವದ ಅಂಶವನ್ನು ಸಿಬಿಐಗೆ ನೀಡಿರುವ ದೂರಿನಲ್ಲಿ ಈ ಮೂವರು ಬಹಿರಂಗಪಡಿಸಿದ್ದಾರೆ.

ಈ ಪ್ರಮುಖ ಅಂಶವನ್ನು ನಿರ್ಲಕ್ಷಿಸಿ ಪ್ರಧಾನಿ ನರೇಂದ್ರ ಮೋದಿಯವರು ಡಸಾಲ್ಟ್ ಏವಿಯೇಷನ್‍ಗೆ ಪಾಲುದಾರ ಕಂಪನಿಯಾಗಿ ಆರ್‍ ಡಿಎಲ್ ಅನ್ನು ಶಿಫಾರಸ್ಸು ಮಾಡಿದ್ದಾರೆ. ಹಿಂದೆ ಯುಪಿಎ ಸರ್ಕಾರ ಮಾಡಿಕೊಂಡಿದ್ದ ಖರೀದಿ ಒಪ್ಪಂದದಿಂದ ಹಿಂದೆ ಸರಿದು ದಿಢೀರನೇ, ಡಸಾಲ್ಟ್ ಜತೆ ವ್ಯವಹಾರ ಕುದುರಿಸಿ ಫ್ರಾನ್ಸ್ ಸರ್ಕಾರದ ಜತೆ ಅಂತರ- ಸರ್ಕಾರ ಒಪ್ಪಂದ ಮಾಡಿಕೊಂಡಿರುವುದು ದುರುದ್ದೇಶಪೂರಿತ ಕ್ರಮ ಎಂದು ಈ ಮೂವರು ದೂರಿದ್ದಾರೆ.

ಯುಪಿಎ ಸರ್ಕಾರ ಮಾಡಿಕೊಂಡಿದ್ದ ಒಪ್ಪಂದದಂತೆ ಈ ಖರೀದಿಯ ವ್ಯವಹಾರ ಹಾಗೂ ಡಸಾಲ್ಟ್ ತಂತ್ರಜ್ಞಾನವನ್ನು ಪಡೆಯಬೇಕಿದ್ದ ಸರ್ಕಾರಿ ಸ್ವಾಮ್ಯದ ಉದ್ದಿಮೆಯಾದ ಹಿಂದೂಸ್ತಾನ್ ಏರೋನಾಟಿಕಲ್ಸ್ ಲಿಮಿಟೆಡ್ (ಎಚ್‍ಎಎಲ್) ಕಂಪನಿಯನ್ನು ಕಡೆಗಣಿಸಿ, ಮೋದಿ ಆರ್‍ ಡಿಎಲ್‍ಗೆ ಮತ್ತು ಅನಿಲ್ ಅಂಬಾನಿಯವರಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಈ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಲಾಗಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ 50 ವರ್ಷ ಅನುಭವ ಇರುವ ಎಚ್‍ಎಎಲ್ ಕಂಪನಿಯನ್ನು ಬದಿಗೊತ್ತಿ, 2015ರ ಏಪ್ರಿಲ್‍ನಲ್ಲಿ 36 ರಫೇಲ್ ಯುದ್ಧವಿಮಾನಗಳ ಖರೀದಿ ನಿರ್ಧಾರವನ್ನು ಮೋದಿ ಘೋಷಿಸುವ ಕೇವಲ 12 ದಿನಗಳ ಮೊದಲು ಹುಟ್ಟಿಕೊಂಡ ಹಾಗೂ ಈ ಕ್ಷೇತ್ರದಲ್ಲಿ ಸ್ವಲ್ಪವೂ ಅನುಭವ ಇಲ್ಲದ ಆರ್‍ ಡಿಎಲ್ ಕಂಪನಿಯನ್ನು ಶಿಫಾರಸ್ಸು ಮಾಡಿದ್ದಕ್ಕೆ ಮೋದಿ ಯಾವ ಸಮರ್ಥನೆ ನೀಡುತ್ತಾರೆ ಎಂದು ದೂರಿನಲ್ಲಿ ಪ್ರಶ್ನಿಸಲಾಗಿದೆ.

ಭಾರತೀಯ ಪಾಲುದಾರ ಕಂಪನಿಯನ್ನು ಡಸಾಲ್ಟ್ ಆಯ್ಕೆ ಮಾಡಿಕೊಂಡಿರುವುದರಲ್ಲಿ ಸರ್ಕಾರದ ಪಾತ್ರವೇನೂ ಇಲ್ಲ ಎಂದು ಸರ್ಕಾರ ಹೇಳಿಕೊಂಡು ಬಂದಿದ್ದು, ಇದು ಭಾರತ ಹಾಗೂ ಫ್ರಾನ್ಸ್ ಸರ್ಕಾರಗಳ ನಡುವಿನ ಒಪ್ಪಂದ ಎಂದು ಸಮರ್ಥಿಸಿಕೊಂಡಿದೆ. ಆದರೆ ಸಿನ್ಹಾ, ಶೌರಿ ಹಾಗೂ ಭೂಷಣ್ ಮಾಡಿರುವ ಈ ಗಂಭೀರ ಆರೋಪ, ಫ್ರಾನ್ಸ್‍ನ ಮಾಜಿ ಅಧ್ಯಕ್ಷ ಫ್ರಾಂಸ್ವಾ ಒಲಾಂಡ್  ಇತ್ತೀಚೆಗೆ ನೀಡಿದ ಹೇಳಿಕೆಗೆ ಪುಷ್ಟಿ ನೀಡುತ್ತದೆ. ರಫೇಲ್ ಒಪ್ಪಂದದ ಅನ್ವಯ ಸೇವೆ ಒದಗಿಸುವ ಕಂಪನಿಯಾಗಿ ರಿಲಯನ್ಸ್ ಡಿಫೆನ್ಸ್ ಲಿಮಿಡೆಟ್ ಕಂಪನಿಯ ಹೆಸರನ್ನು ಭಾರತ ಸರ್ಕಾರ ಸಲಹೆ ಮಾಡಿತ್ತು ಎಂದು ಒಲಾಂಡ್ ಇತ್ತೀಚೆಗೆ ಹೇಳಿಕೆ ನೀಡಿದ್ದರು.

ಮೋದಿ 2015ರ ಏಪ್ರಿಲ್ 10ರಂದು ಹೊಸ ಒಪ್ಪಂದವನ್ನು ಘೋಷಿಸಿದ್ದರು. ಡಸಾಲ್ಟ್ ಈಗಾಗಲೇ ಒಪ್ಪಿಕೊಂಡಿರುವಂತೆ ಅದೇ ವೇಳೆಗೆ ಕಂಪನಿ, ಆರ್‍ಡಿಎಲ್ ಜತೆ ಪಾಲುದಾರಿಕೆಯನ್ನು ಜಂಟಿ ಸಹಭಾಗಿತ್ವದ ಡಸಾಲ್ಟ್ ರಿಲಯನ್ಸ್ ಏರೋಸ್ಪೇಸ್ ಲಿಮಿಟೆಡ್ ಕಂಪನಿಯನ್ನು ರೂಪಿಸಲು ಒಪ್ಪಿಕೊಂಡಿತು. ಇದರಲ್ಲಿ ಆರ್‍ ಡಿಎಲ್ ಶೇಕಡ 51ರಷ್ಟು ಷೇರುಗಳನ್ನು ಹೊಂದಿದೆ. ಆದರೆ ಆರ್‍ ಡಿಎಲ್ 2015ರ ಜೂನ್ 16ರಂದು ಮಹಾರಾಷ್ಟ್ರದ ನಾಗ್ಪುರ ಸಮೀಪದ ಮಿಹಾನ್ ಎಂಬಲ್ಲಿ 289 ಎಕರೆ ಭೂಮಿಯನ್ನು ಮಂಜೂರು ಮಾಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಮಾಡಿರುವ ಬಗ್ಗೆ ಈ ಮೂವರು ದಾಖಲೆಗಳನ್ನು ಒದಗಿಸಿದ್ದಾರೆ. 2015ರ ಆಗಸ್ಟ್ 29ರಂದು ಭೂಮಿಪೂಜೆ ಸಂದರ್ಭದಲ್ಲಿ ರಿಲಯನ್ಸ್ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯಲ್ಲೂ ಈ ಅಂಶ ಸ್ಪಷ್ಟವಾಗಿತ್ತು ಎಂದು ಅವರು ಹೇಳಿದ್ದಾರೆ. "ನಾವು 2015ರ ಜೂನ್ 16ರಂದು ಆರಂಭಿಸಿದ್ದೇವೆ. ಮೊದಲ ಪ್ರಸ್ತುತಿಯಲ್ಲೇ ಅಂದರೆ ಕೇವಲ 10 ವಾರಗಳ ಒಳಗಾಗಿ ನಮಗೆ ಭೂಮಿ ಮಂಜೂರಾಗಿದೆ. ಇದು ದಾಖಲೆ" ಎಂದು ಪತ್ರಿಕಾ ಹೇಳಿಕೆಯಲ್ಲಿ ವಿವರಿಸಿದ್ದನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.

"ಈ ದಾಖಲೆ ಅವಧಿಯಲ್ಲಿ ಕೇವಲ 64 ಕೋಟಿ ರೂಪಾಯಿ ಬೆಲೆಗೆ 289 ಎಕರೆ ಭೂಮಿಯನ್ನು ಅಂಬಾನಿಗೆ ದೊರಕಿಸಿಕೊಡುವ ನಿಟ್ಟಿನಲ್ಲಿ ಮೋದಿ ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ. ಈ ಭೂಮಿಯನ್ನು ರಿಲಯನ್ಸ್ ಮತ್ತು ರಫೇಲ್ ಒಪ್ಪಂದದ ಮತ್ತೊಂದು ಉಪ ಪೂರೈಕೆದಾರ ಕಂಪನಿಯಾದ ಥಲೇಸ್ ಎಂಬ ಕಂಪನಿಗಳ ಜಂಟಿ ಸಹಭಾಗಿತ್ವದ ಕಂಪನಿಗೆ ಹಾಗೂ ಜಾಗತಿಕ ಮಟ್ಟದ ಇತರ ಪೂರೈಕೆದಾರ ಕಂಪನಿಗಳ ಜತೆ ರಿಲಯನ್ಸ್ ಮಾಡಿಕೊಳ್ಳಲು ಉದ್ದೇಶಿಸಿದ್ದ ಜಂಟಿ ಸಹಭಾಗಿತ್ವದ ಕಂಪನಿಗೆ ಬಳಸಬೇಕಿತ್ತು" ಎಂದು ವಿವರಿಸಲಾಗಿದೆ.

ಎಲ್ಲಕ್ಕಿಂತ ಮುಖ್ಯವಾಗಿ, ಎಲ್ಲ ರಕ್ಷಣಾ ಒಪ್ಪಂದಗಳಿಗೆ ಅನುಮೋದನೆ ನೀಡಬೇಕಾಗಿರುವ ರಕ್ಷಣಾ ಖರೀದಿ ಮಂಡಳಿ ಕೂಡಾ ತಮ್ಮ ನಿರ್ದಿಷ್ಟ ಉದ್ದೇಶಕ್ಕೆ ಬದ್ಧವಾಗುವಂತೆ ಮಾಡುವ ಸಲುವಾಗಿ ಮೋದಿ ತಮ್ಮ ಪ್ರಭಾವವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಈ ಮೂವರು ಆಪಾದಿಸಿದ್ದಾರೆ. ಅಂಬಾನಿ ಈ ವ್ಯವಹಾರ ಕುದುರಿಸಿಕೊಂಡ ಬಳಿಕ, ಎಲ್ಲ ಅಗತ್ಯ ಲೈಸನ್ಸ್‍ಗಳನ್ನು ತ್ವರಿತವಾಗಿ ಪಡೆಯಲು ಅನುಕೂಲ ಮಾಡಿಕೊಡಲಾಗಿದೆ ಎಂದು ವಿವರಿಸಿದ್ದಾರೆ.

"ಅಂಬಾನಿ ತಮ್ಮ ಹಲವು ರಕ್ಷಣಾ ಕಂಪನಿಗಳಿಗೆ ಉದ್ದಿಮೆ ಲೈಸನ್ಸ್‍ಗೆ 2016ರ ಜೂನ್ 22ರಂದು ಅರ್ಜಿ ಸಲ್ಲಿಸಿ ಅದೇ ದಿನ ಲೈಸನ್ಸ್ ಪಡೆದಿದ್ದಾರೆ" ಎಂದು ದೂರಲಾಗಿದೆ.

===================

ಬಾಕ್ಸ್

==========

ದೂರಿನ ಯಥಾಪ್ರತಿ

"ರಕ್ಷಣಾ ವಲಯದಲ್ಲಿ ಶೂನ್ಯ ಅನುಭವದ ಹಿನ್ನೆಲೆ ಇದ್ದರೂ ಅಂಬಾನಿ, ಉದ್ದಿಮೆ ಲೈಸನ್ಸ್ ಪಡೆಯುವಲ್ಲಿಂದ ಹಿಡಿದು ಕಳ್ಳಮಾರ್ಗದಿಂದ ರಕ್ಷಣಾ ಒಪ್ಪಂದದ ಪ್ರತಿ ಅಂಶವನ್ನೂ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದ್ದರು. ಮೋದಿಯವರ ಸಹಾಯದಿಂದ ಪಾಲುದಾರಿಕೆಯ ವ್ಯವಹಾರವನ್ನು ತಮ್ಮ ಪರವಾಗಿ ತಿರುಗಿಸಿಕೊಳ್ಳುವ ವಿಶ್ವಾಸಹೊಂದಿದ್ದರು. ಆದ್ದರಿಂದ ಹೆಲಿಕಾಪ್ಟರ್, ಕ್ಷಿಪಣಿ, ಭೂಮಿ ಮತ್ತು ನೌಕಾ ಪ್ಲಾಟ್‍ಫಾರಂ, ಪ್ರೊಪಲ್ಷನ್ ಸಿಸ್ಟಮ್, ಮಾನವರಹಿತ ವೈಮಾನಿಕ ವಾಹನ, ನೌಕಾಪಡೆ ಹಡಗುಗಳ ಖರೀದಿಗೆ ಕಂಪನಿ ಹುಟ್ಟುಹಾಕಲು ಲೈಸನ್ಸ್ ಪಡೆಯಲು ಮುಂದಾದರು. ಈ ಉದ್ಯಮಿ ಕೈಹಾಕಿದ ಉದ್ದಿಮೆಯಲ್ಲೆಲ್ಲ ವೈಫಲ್ಯ ಮತ್ತು ದಿವಾಳಿತನದ ಹಿನ್ನೆಲೆ ಹೊಂದಿದ್ದು, ಅದರಲ್ಲೂ ಮುಖ್ಯವಾಗಿ ಅತ್ಯಧಿಕ ಕೌಶಲ ಮತ್ತು ಬಂಡವಾಳ ಸಾಂದ್ರ ವಲಯವಾದ ರಕ್ಷಣಾ ಕ್ಷೇತ್ರವನ್ನು ನಿಭಾಯಿಸಲಾರರು. ಈ ಲೈಸನ್ಸ್ ಮಂಜೂರು ಮಾಡುವ ವೇಳೆ ನಿರ್ಮಲಾ ಸೀತಾರಾಮನ್ ವಾಣಿಜ್ಯ ಸಚಿವರಾಗಿದ್ದರು. ಬಳಿಕ ಅವರಿಗೆ ರಕ್ಷಣಾ ಖಾತೆಗೆ ಬಡ್ತಿ ನೀಡಲಾಯಿತು"

=====================

ಅಗತ್ಯ ಲೈಸನ್ಸ್‍ಗಳನ್ನು ಆರ್‍ ಡಿಎಲ್ ಪಡೆದ ಬಳಿಕ, ಅಂದರೆ ಅಂತರ ಸರ್ಕಾರಿ ಒಪ್ಪಂದವನ್ನು ಮೋದಿ ಘೋಷಿಸಿದ ಒಂದು ವರ್ಷದ ಬಳಿಕ 2016ರ ಸೆಪ್ಟೆಂಬರ್ 23ರಂದು ಪ್ರಮುಖ ಖರೀದಿ ಒಪ್ಪಂದಕ್ಕೆ ಅಧಿಕೃತವಾಗಿ ಸಹಿ ಮಾಡಲಾಗಿದೆ ಮತ್ತು ರಕ್ಷಣಾ ಖರೀದಿ ಪ್ರಕ್ರಿಯೆ ಕಡ್ಡಾಯಪಡಿಸಿರುವಂತೆ ಆಫ್‍ಸೆಟ್ ಗುತ್ತಿಗೆ ಮಾಡಿಕೊಳ್ಳಲಾಗಿದೆ ಎಂದು ದೂರಿದ್ದಾರೆ.

ಒಪ್ಪಂದದಲ್ಲಿ ದಿಢೀರನೇ ರಿಲಯನ್ಸ್ ಕಂಪನಿಯನ್ನು ಸೇರಿಸಿರುವುದು, ರಾಷ್ಟ್ರಮಟ್ಟದಲ್ಲಿ ಕಂಪನಿಯ ವಿಚಾರದಲ್ಲಿ ಯಾವುದೇ ಚರ್ಚೆ ನಡೆಸದಿರುವುದು ಹೀಗೆ ಪ್ರಕ್ರಿಯೆಯಲ್ಲಿ ಆಗಿರುವ ಉಲ್ಲಂಘನೆಗಳನ್ನು ಮುಚ್ಚಿಹಾಕಲು ಕೂಡಾ ಮೋದಿ ಪ್ರಯತ್ನಿಸಿದ್ದಾರೆ. ಇದಕ್ಕಾಗಿ ಫ್ರಾನ್ಸ್ ಜತೆ ಆರ್‍ ಡಿಎಲ್ ಕಂಪನಿಯನ್ನು ಸೇರಿಸುವ ಹೊಸ ಒಪ್ಪಂದ ಮಾಡಿಕೊಂಡ ಎರಡು ತಿಂಗಳ ಬಳಿಕ ರಕ್ಷಣಾ ಖರೀದಿ ಪ್ರಕ್ರಿಯೆಗೆ 2015ರ ಆಗಸ್ಟ್ 5ರಂದು ತಿದ್ದುಪಡಿ ತರಲಾಗಿದೆ ಎಂದು ಆಪಾದಿಸಿದ್ದಾರೆ.

"ಈ ತಿದ್ದುಪಡಿಗಳು ಕೇವಲ ಆಫ್‍ಸೆಟ್ ಷರತ್ತುಗಳ ಬಗ್ಗೆ ಮಾತ್ರ ಇವೆ. 2015ರ ಆಗಸ್ಟ್‍ನಲ್ಲಿ ಅಂದರೆ ಪ್ರಮುಖ ಖರೀದಿ ಒಪ್ಪಂದಕ್ಕೆ ಸಹಿ ಮಾಡುವ ಹಂತದಲ್ಲಿ, ಸರ್ಕಾರದಲ್ಲಿ ಕೆಲವರು ಪಾಲುದಾರ ಕಂಪನಿ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು. ಈ ತಿದ್ದುಪಡಿಯನ್ನು 2016ರಲ್ಲಿ ರಕ್ಷಣಾ ಖರೀದಿ ಪ್ರಕ್ರಿಯೆಯಲ್ಲಿ ಸೇರಿಸಿಕೊಳ್ಳಲಾಗಿದೆ. ಅಕ್ಷರಶಃ ಇದು 2016ರ ಏಪ್ರಿಲ್ 1ರಿಂದ ಜಾರಿಗೆ ಬಂದಿದೆ" ಎಂದು ವಿವರಿಸಲಾಗಿದೆ.

ಹೊಸ ಬಿಸಿ ಚರ್ಚೆಗೆ ಕಾರಣವಾಗಬಲ್ಲ ಮತ್ತೊಂದು ಗಂಭೀರ ಆರೋಪವನ್ನೂ ಈ ಮೂವರು ಮಾಡಿದ್ದಾರೆ. ಯುಪಿಎ ಸರ್ಕಾರ 126 ರಫೇಲ್ ವಿಮಾನಗಳ ಖರೀದಿಗೆ "ಪ್ರಸ್ತಾವನೆ ಸಲ್ಲಿಕೆಗೆ ಮಾಡಿಕೊಂಡಿದ್ದ ಮನವಿ" ಪ್ರಗತಿಯ ಹಂತದಲ್ಲಿರುವಾಗ ಅದರನ್ನು ರದ್ದುಪಡಿಸುವ ಅಧಿಕಾರ ಪ್ರಧಾನಿಗೆ ಇಲ್ಲ ಎಂದು ವಾದಿಸಿದ್ದಾರೆ. ಆದರೆ ಪ್ರಧಾನಿಯ ಉದ್ದೇಶವನ್ನು ಈಡೇರಿಸುವ ಸಲುವಾಗಿಯೇ ಹಿಂದಿನ ಒಪ್ಪಂದವನ್ನು ರದ್ದುಪಡಿಸುವ ಅಂಶವನ್ನು ತಿದ್ದುಪಡಿ ವೇಳೆ ಸೇರಿಸಲಾಗಿದೆ ಎನ್ನುವುದು ಈ ಆರೋಪ.

==========

2007ರಲ್ಲಿ ಮಾಡಿಕೊಂಡ "ಪ್ರಸ್ತಾವನೆ ಸಲ್ಲಿಕೆಗೆ ಮನವಿ" (ಆರ್‍ಎಫ್‍ಪಿ) ಯನ್ನು ಹಿಂದಕ್ಕೆ ಪಡೆಯುವ ಮೂಲಕ ಈ ಮೂಲ ಒಪ್ಪಂದವನ್ನು 2015ರ ಜೂನ್ 24ರಂದು ‘ಹತ್ಯೆ’ ಮಾಡಲಾಗಿದೆ. ಸೇವಾ ಅಗತ್ಯತೆಗೆ ಅನುಗುಣವಾಗಿ ಇಡೀ ಪ್ರಕ್ರಿಯೆಯ ಪರಿಶೀಲನೆ ನಡೆದ ಬಳಿಕ, ಸಾಧನವನ್ನು ತೀವ್ರ ಪರೀಕ್ಷೆಗೆ ಒಳಪಡಿಸಿದ ಬಳಿಕ, ಬಿಡ್ ಪರಿಶೀಲನೆ ಬಳಿಕ ಆರ್‍ಎಫ್‍ಪಿ ರದ್ದುಪಡಿಸಲು ಆ ವೇಳೆಗೆ ರಕ್ಷಣಾ ಖರೀದಿ ಪ್ರಕ್ರಿಯೆಯಲ್ಲಿ ಅವಕಾಶ ಇರಲಿಲ್ಲ. ಅಲ್ಲದೇ ಯಾವುದೇ ರಾಜಕಾರಣಿ, ಕೊನೆಕ್ಷಣದಲ್ಲಿ ಎಲ್1 ಪೂರೈಕೆದಾರರಿಗೆ ಷರತ್ತು ವಿಧಿಸಿ, ಬಾಡಿಗೆ ಆಗ್ರಹಿಸಿ/ ಲಂಚ/ ಅಕ್ರಮ ಲಾಭ ಪಡೆಯುವ ಉದ್ದೇಶದಿಂದ ಆರ್‍ಪಿಎಫ್ ರದ್ದುಪಡಿಸುವ ಬೆದರಿಕೆ ಒಡ್ಡಲು ಅವಕಾಶವಿಲ್ಲ.

=====================

ಪ್ರಧಾನಿ ಹಾಗೂ ಅವರ ರಕ್ಷಣಾ ಸಚಿವರು ಆಪ್ತನಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಅಲ್ಲದೇ ದೇಶದ ಭದ್ರತೆಯ ವಿಚಾರದಲ್ಲೂ ರಾಜಿ ಮಾಡಿಕೊಂಡಿದ್ದಾರೆ. ಭಾರತೀಯ ವಾಯುಪಡೆಗೆ 42 ಸ್ವಾಡರ್ನ್‍ಗಳ ಅಗತ್ಯವಿದ್ದು, ಮೋದಿ ಸರ್ಕಾರ ಕೇವಲ 36ನ್ನು ಮಾತ್ರ ಖರೀದಿಸುತ್ತಿದೆ. ಹಿಂದೆ ಆದೇಶ ಮಾಡಿದ 126 ವಿಮಾನಗಳಿಗೆ ಹೋಲಿಸಿದರೆ ಇದು ತೀರಾ ಕಡಿಮೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.

ತುರ್ತು ಅಗತ್ಯತೆಯ ಹಿನ್ನೆಲೆಯಲ್ಲಿ ಫ್ರಾನ್ಸ್ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎನ್ನುವುದು ಸರ್ಕಾರದ ಸಮರ್ಥನೆ. ಇಷ್ಟಾಗಿಯೂ ಒಪ್ಪಂದ ಪೂರ್ಣಗೊಂಡು ಮೂರು ವರ್ಷ ಕಳೆದರೂ 36 ಯುದ್ಧ ವಿಮಾನಗಳ ಪೈಕಿ ಒಂದು ಕೂಡಾ ಭಾರತಕ್ಕೆ ಬಂದಿಲ್ಲ. ಈ ವ್ಯವಹಾರ ಒಪ್ಪಂದದಿಂದ ದೊರಕಿರುವುದು ದಿವಾಳಿಯಂಚಿನಲ್ಲಿರುವ ಖಾಸಗಿ ಕಂಪನಿ ಮಾತ್ರ ಎಂದು ದೂರಿನಲ್ಲಿ ತಿಳಿಸಲಾಗಿದೆ.

=================

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News