ಏಳು ರೊಹಿಂಗ್ಯಾಗಳನ್ನು ವಾಪಸ್ ಕಳುಹಿಸಿದ ಭಾರತ: ಸ್ಪಷ್ಟನೆ ಕೇಳಿದ ವಿಶ್ವಸಂಸ್ಥೆ

Update: 2018-10-05 14:32 GMT

ಹೊಸದಿಲ್ಲಿ, ಅ.5: ಭಾರತ ಗುರುವಾರ ಮ್ಯಾನ್ಮಾರ್‌ಗೆ ವಾಪಸ್ ಕಳುಹಿಸಿದ ಏಳು ಮಂದಿ ರೊಹಿಂಗ್ಯಾಗಳ ಭದ್ರತೆ ಮತ್ತು ಸುರಕ್ಷತೆ ಬಗ್ಗೆ ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆ ಚಿಂತೆ ವ್ಯಕ್ತಪಡಿಸಿರುವುದಾಗಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಈ ನಿರಾಶ್ರಿತರಿಗೆ ಕಾನೂನು ಸಲಹೆಯನ್ನು ಪಡೆಯುವ ಅವಕಾಶವನ್ನು ನಿರಾಕರಿಸಲಾಗಿತ್ತು ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಹೈಕಮಿಷನರ್ ಆರೋಪಿಸಿದ್ದಾರೆ. ಏಳು ರೊಹಿಂಗ್ಯಾಗಳು ಮ್ಯಾನ್ಮಾರ್‌ಗೆ ತೆರಳುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ಭಾರತ ಗುರುವಾರ ತಿಳಿಸಿತ್ತು. ಈ ಏಳು ಮಂದಿಯನ್ನು ತಮ್ಮ ಪ್ರಜೆಗಳು ಎಂದು ಗುರುತಿಸಿದ ಮ್ಯಾನ್ಮಾರ್, ಅವರು ತಮ್ಮ ಸ್ವಂತ ಊರಾದ ರಖೈನ್‌ಗೆ ಮರಳಲು ಪ್ರಯಾಣಕ್ಕೆ ಅನುವು ಮಾಡಿಕೊಡುವ ಪ್ರಮಾಣ ಪತ್ರವನ್ನು ನೀಡಿತ್ತು. ವಿದೇಶಿಗರ ಕಾಯ್ದೆಯನ್ನು ಉಲ್ಲಂಘಿಸಿ ಗಡಿಯೊಳಗೆ ಅಕ್ರಮ ಪ್ರವೇಶಗೈದ ಕಾರಣಕ್ಕೆ ಈ ಏಳು ಮಂದಿಯನ್ನು 2012ರಲ್ಲಿ ಬಂಧಿಸಿ ಸಿಲ್ಚರ್ ಜೈಲಿನಲ್ಲಿಡಲಾಗಿತ್ತು.

ಮ್ಯಾನ್ಮಾರ್‌ನ ರಾಯಭಾರ ಕಚೇರಿಯು ತಾವು ವಾಪಸ್ ತೆರಳಲು ದಾಖಲೆಗಳನ್ನು ಒದಗಿಸುವಂತೆ 2016ರಲ್ಲಿ ಈ ಏಳು ಮಂದಿ ಮನವಿ ಮಾಡಿದ್ದರು. ಏಳು ರೊಹಿಂಗ್ಯಾಗಳನ್ನು ಮ್ಯಾನ್ಮಾರ್‌ಗೆ ವಾಪಸ್ ಕಳುಹಿಸುವ ಕುರಿತು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ತಜ್ಞರು ಚಿಂತೆ ವ್ಯಕ್ತಪಡಿಸಿದ್ದರು. ದೇಶದಲ್ಲಿರುವ 40,000 ರೊಹಿಂಗ್ಯಾ ನಿರಾಶ್ರಿತರನ್ನು ವಾಪಸ್ ಕಳುಹಿಸುವುದಾಗಿ ಭಾರತ 2017ರಲ್ಲಿ ಘೋಷಿಸಿತ್ತು. ಈ ಆದೇಶದ ವಿರುದ್ಧದ ಅರ್ಜಿಯ ವಿಚಾರಣೆ ಸದ್ಯ ಸರ್ವೋಚ್ಚ ನ್ಯಾಯಾಲಯದಲ್ಲಿ ನಡೆಯುತ್ತಿದೆ. ತನ್ನ ತೀರ್ಪು ಹೊರಬೀಳುವವರೆಗೆ ಒಬ್ಬ ರೊಹಿಂಗ್ಯಾನನ್ನೂ ವಾಪಸ್ ಕಳುಹಿಸಕೂಡದು ಎಂದು ಶ್ರೇಷ್ಟ ನ್ಯಾಯಾಲಯ ಆದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News