ಮೈತ್ರಿಕೂಟ ಬಯಸಿದರೆ ಪ್ರಧಾನಿ ಆಗೋದು ಖಚಿತ: ರಾಹುಲ್ ಗಾಂಧಿ
ಹೊಸದಿಲ್ಲಿ, ಅ.5: ಕಾಂಗ್ರೆಸ್ 2019ರ ಚುನಾವಣೆಯಲ್ಲಿ ಗೆದ್ದರೆ ಮುಂದಿನ ಪ್ರಧಾನಿ ಯಾರಾಗುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿರುವ ರಾಹುಲ್ ಗಾಂಧಿ, ಅವರು (ಮೈತ್ರಿಕೂಟ) ಬಯಸಿದರೆ ನಾನೇ ಪ್ರಧಾನಿಯಾಗುವುದು ಖಚಿತ ಎಂದು ಹೇಳಿದ್ದಾರೆ.
ಶುಕ್ರವಾರ ಹೊಸದಿಲ್ಲಿಯಲ್ಲಿ ನಡೆದ ‘ಹಿಂದುಸ್ತಾನ್ ಟೈಮ್ಸ್’ ನಾಯಕತ್ವ ಸಮ್ಮೇಳನದಲ್ಲಿ ಮಾತನಾಡುತ್ತಿದ್ದ ಅವರು, ಮುಂಬರುವ ಮಹಾಚುನಾವಣೆಯಲ್ಲಿ ಮೋದಿ ಸರಕಾರವನ್ನು ಸೋಲಿಸಲು ವಿಪಕ್ಷಗಳು ನಿರ್ಧರಿಸಿವೆ. ಆ ಬಳಿಕ ಪ್ರಧಾನಿ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು ಎಂದರು. ನರೇಂದ್ರ ಮೋದಿ ಮುಂದಿನ ಬಾರಿ ಪ್ರಧಾನಿಯಾಗಿ ಖಂಡಿತಾ ಆಯ್ಕೆಯಾಗುವುದಿಲ್ಲ ಎಂದವರು ವಿಶ್ವಾಸ ವ್ಯಕ್ತಪಡಿಸಿದರು.
ಮಾಯಾವತಿಯವರ ಬಿಎಸ್ಪಿ ಮಧ್ಯಪ್ರದೇಶ ಮತ್ತು ರಾಜಸ್ತಾನದಲ್ಲಿ ಕಾಂಗ್ರೆಸ್ ಜೊತೆಗಿನ ಮೈತ್ರಿಯನ್ನು ಕಡಿದುಕೊಂಡಿರುವುದು ಈ ರಾಜ್ಯದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮೇಲೆ ಪರಿಣಾಮ ಬೀರುವುದಿಲ್ಲ ಎಂದ ರಾಹುಲ್, 2019ರ ಲೋಕಸಭಾ ಚುನಾವಣೆ ಸಂದರ್ಭ ಮೈತ್ರಿಮಾಡಿಕೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕಲಾಗದು ಎಂದರು. ರಾಜ್ಯದಲ್ಲಿ ಮೈತ್ರಿಕೂಟ ಹಾಗೂ ಕೇಂದ್ರದಲ್ಲಿ ಮೈತ್ರಿಕೂಟ ಪ್ರತ್ಯೇಕ ವಿಷಯವಾಗಿದೆ. ಮಾಯಾವತಿಯವರೇ ಈ ಬಗ್ಗೆ ಸೂಚನೆ ನೀಡಿದ್ದಾರೆ. ಮೈತ್ರಿಯ ವಿಷಯದಲ್ಲಿ ತಾನು ಹೆಚ್ಚಿನ ಹೊಂದಾಣಿಕೆ ಮಾಡಿಕೊಳ್ಳಲು ಸಿದ್ಧ ಎಂದು ರಾಹುಲ್ ಹೇಳಿದರು.