ಆಧಾರ್ ಕಾರ್ಡ್ ದೋಷದಿಂದ ಭವಿಷ್ಯ ನಿಧಿ ಪಡೆಯಲು ಅಡ್ಡಿ: ಆತ್ಮಹತ್ಯೆಗೆ ಮುಂದಾದ ಸರಕಾರಿ ನೌಕರ
ಭುವನೇಶ್ವರ, ಅ.5: ಆಧಾರ್ ಕಾರ್ಡ್‌ನಲ್ಲಿದ್ದ ದೋಷದ ಕಾರಣ ಇಪಿಎಫ್ (ಭವಿಷ್ಯ ನಿಧಿ)ನ ಹಣ ಮರಳಿ ಪಡೆಯಲು ಸಾಧ್ಯವಾಗದ ಹತಾಶೆಯಲ್ಲಿ ಒಡಿಶಾದ ವಿದ್ಯುತ್ ಇಲಾಖೆಯ ನೌಕರನೋರ್ವ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಒಡ್ಡಿದ ಘಟನೆ ನಡೆದಿದೆ.
ಕಳೆದ 30 ವರ್ಷಗಳಿಂದ ಒಡಿಶಾದ ವಿದ್ಯುತ್ ಇಲಾಖೆಯ ಬರಿಪಾದ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಸಂತೋಷ್ ಜೆನಾ ಮಗಳ ಮದುವೆ ಹಾಗೂ ಮಗನ ಶಿಕ್ಷಣಕ್ಕಾಗಿ ಹಣ ಹೊಂದಿಸಲು ಭವಿಷ್ಯ ನಿಧಿಯ ಹಣಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಆಧಾರ್ ಕಾರ್ಡ್‌ನಲ್ಲಿ ನಮೂದಿಸಿರುವ ಜನ್ಮ ದಿನಾಂಕ ಹಾಗೂ ಎಸ್ಸೆಸ್ಸೆಲ್ಸಿ ಅಂಕಪಟ್ಟಿಯಲ್ಲಿರುವ ಜನ್ಮ ದಿನಾಂಕದಲ್ಲಿ ವ್ಯತ್ಯಾಸವಿದ್ದ ಕಾರಣ ಇವರ ಅರ್ಜಿಯನ್ನು ತಿರಸ್ಕರಿಸಲಾಗಿದೆ. ನನಗೆ ಸಿಗುವ ಅಲ್ಪ ವೇತನದಲ್ಲಿ ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ. ಕಳೆದೊಂದು ವರ್ಷದಿಂದ ಬಹಳಷ್ಟು ಸಮಸ್ಯೆ ಎದುರಾಗಿದೆ. ಇದೀಗ ನನ್ನ ಉಳಿತಾಯದ ಹಣವನ್ನು ಮರಳಿ ಪಡೆಯಲೂ ನನಗೆ ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡಿರುವ ಸಂತೋಷ್, ತನಗೆ ನೆರವಾಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದಾರೆ.
ತನ್ನ ಆಧಾರ್‌ಕಾರ್ಡ್ ಸರಿಪಡಿಸುವಂತೆ ಕೋರಿ ಹಲವು ಸರಕಾರಿ ಅಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರೂ ಯಾವುದೇ ಇಲಾಖೆ ನೆರವಾಗಿಲ್ಲ ಎಂದು ಸಂತೋಷ್ ಹೇಳಿದ್ದಾರೆ. ಆಧಾರ್ ಕಾರ್ಡ್‌ನಲ್ಲಿ ಜನ್ಮ ದಿನಾಂಕ ತಪ್ಪಾಗಿ ನಮೂದಿತವಾಗಿದ್ದರೆ ಅದನ್ನು ಸರಿಪಡಿಸುವ ಅವಕಾಶವಿದೆ. ಸಂಬಂಧಿತ ವ್ಯಕ್ತಿ ಆಧಾರ್ ಸಂಸ್ಥೆಯ ಪ್ರಾದೇಶಿಕ ಕಚೇರಿಗೆ ಭೇಟಿ ನೀಡಿ ಅಲ್ಲಿ ಅರ್ಜಿ ನೀಡಿ ಸರಿಪಡಿಸಬಹುದು ಎಂದು 2016ರ ಆಧಾರ್ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಆದರೆ ಸಣ್ಣ ನಗರ ಹಾಗೂ ಹಳ್ಳಿಗಳಲ್ಲಿ ಈ ಕುರಿತು ಅರಿವು ಮೂಡಿಸಲಾಗಿಲ್ಲ ಎಂದು ಹಲವರು ಟೀಕಿಸಿದ್ದಾರೆ. ಘಟನೆಯನ್ನು ಖಂಡಿಸಿರುವ ಮಾನವ ಹಕ್ಕುಗಳ ವಕೀಲ ಸತ್ಯವೃತ ಮೊಹಾಂತಿ, ಒಡಿಶಾದ ಹಳ್ಳಿ ಪ್ರದೇಶಗಳಲ್ಲಿ ಮಾತ್ರವಲ್ಲ ನಗರಗಳಲ್ಲೂ ದೋಷಪೂರಿತ ಆಧಾರ್ ಕಾರ್ಡ್ ಹೊಂದಿರುವವರು ಹಲವರಿದ್ದಾರೆ. ಸಾವಿರಾರು ಮಂದಿ ಇನ್ನೂ ಆಧಾರ್ ಕಾರ್ಡ್ ಮಾಡಿಸಿಕೊಂಡಿಲ್ಲ. ತಮ್ಮ ಹಣವನ್ನು ಮರಳಿ ಪಡೆಯಬೇಕಿದ್ದರೆ ಆಧಾರ್ ಕಾರ್ಡ್ ತೋರಿಸಿ ಎಂದು ಸರಕಾರ ಈಗಲೂ ಹೇಳುತ್ತಿರುವುದು ವಿಷಾದಕರವಾಗಿದೆ ಎಂದಿದ್ದಾರೆ.