ಸೋಯಾ ಪ್ರೋಟಿನ್ ನಿಮ್ಮ ಆರೋಗ್ಯಕ್ಕೆ ಒಳ್ಳೆಯದೇ......?

Update: 2018-10-06 10:29 GMT

ಡೇರಿ ಉತ್ಪನ್ನಗಳಿಗೆ ಅಲರ್ಜಿ ಹೊಂದಿರುವವರು ಮತ್ತು ಸಸ್ಯಾಹಾರಿಗಳು ಕೂಡ ಪ್ರಾಣಿಜನ್ಯ ಪ್ರೋಟಿನ್‌ನ ಬದಲಾಗಿ ಸೋಯಾ ಪ್ರೋಟಿನ್‌ಗಳನ್ನು ಸೇವಿಸುವ ಮೂಲಕ ಪ್ರೋಟಿನ್ ಕೊರತೆಯನ್ನು ನೀಗಿಸಿಕೊಳ್ಳುತ್ತಾರೆ. ಸೋಯಾ ಪ್ರೋಟಿನ್‌ಗಳನ್ನು ಮಾಂಸಕ್ಕೆ ಆರೋಗ್ಯಕರ ಪರ್ಯಾಯವೆಂದೇ ಪರಿಗಣಿಸಲಾಗಿದೆ. ಟೋಫು,ಸೋಯಾ ಮಿಲ್ಕ್‌ನಂತಹ ಜಲವಾರು ಸೋಯಾ ಉತ್ಪನ್ನಗಳು ಯಥೇಚ್ಛ ಪ್ರೋಟಿನ್ ಅನ್ನು ಒಳಗೊಂಡಿರುತ್ತವೆ. ಜನರು ಪ್ರೋಟಿನ್ ಪೌಡರ್‌ನ ರೂಪದಲ್ಲಿಯೂ ಸೋಯಾ ಪ್ರೋಟಿನ್‌ಗಳನ್ನು ಸೇವಿಸುತ್ತಾರೆ.

ಅತಿಯಾದ ಸೋಯಾ ಆಹಾರಗಳ ಸೇವನೆಯು ವಿವಿಧ ನಕಾರಾತ್ಮಕ ಅಂಶಗಳೊಂದಿಗೆ ಗುರುತಿಸಿಕೊಂಡಿದೆ ಮತ್ತು ಇದೇ ಕಾರಣಕ್ಕಾಗಿ ಸೋಯಾ ಪ್ರೋಟಿನ್‌ಗಳು ವಿವಾದಾಸ್ಪದ ಆಹಾರಗಳೆಂದು ಪರಿಗಣಿಸಲ್ಪಟ್ಟಿವೆ. ಹೀಗಾಗಿ ಸೋಯಾ ಉತ್ಪನ್ನಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಲು ಬಯಸಿದರೆ ಅದು ಹಿತವಾದ ಪ್ರಮಾಣದಲ್ಲಿರುವಂತೆ ನೋಡಿಕೊಳ್ಳಿ ಮತ್ತು ನಿಮ್ಮ ಆರೋಗ್ಯಕ್ಕೆ ಎಷ್ಟು ಪ್ರಮಾಣದಲ್ಲಿ ಸೋಯಾ ಪ್ರೋಟಿನ್‌ಗಳನ್ನು ಸೇವಿಸಿದರೆ ಸೂಕ್ತ ಎನ್ನುವುದನ್ನು ತಜ್ಞರಿಂದ ತಿಳಿದುಕೊಳ್ಳಿ.

► ಸೋಯಾ ಪ್ರೋಟಿನ್‌ನ ಲಾಭಗಳು

ಮಾಂಸಖಂಡಗಳನ್ನು ಬಲಿಷ್ಠಗೊಳಿಸಲು ನೆರವಾಗುತ್ತದೆ:

ಸೋಯಾ ಪ್ರೋಟಿನ್ ನಮ್ಮ ಶರೀರಕ್ಕೆ ಅಗತ್ಯವಾಗಿರುವ ಹಲವಾರು ಅಮಿನೊ ಆಮ್ಲಗಳನ್ನು ಒದಗಿಸುತ್ತದೆ. ಅದು ಲೂಸಿನ್,ಐಸೊಲೂಸಿನ್ ಮತ್ತು ವ್ಯಾಲಿನ್ ಹೀಗೆ ಮೂರು ಅಮಿನೊ ಆಮ್ಲಗಳನ್ನು ಹೊಂದಿರುತ್ತದೆ. ಈ ಆಮ್ಲಗಳು ದೇಹದಾರ್ಢ್ಯ ರೂಪಿಸಿಕೊಳ್ಳಲು ನೆರವಾಗುತ್ತವೆಯಾದರೂ ವ್ಹೇ ಪ್ರೋಟಿನ್‌ನಂತಹ ಇತರ ಪ್ರೋಟಿನ್ ಮೂಲಗಳಷ್ಟು ಪರಿಣಾಮಕಾರಿಯಲ್ಲ. ಆದರೆ ಡೇರಿ ಉತ್ಪನ್ನಗಳೊಂದಿಗೆ ಸೋಯಾ ಪ್ರೋಟಿನ್‌ನನ್ನು ಸೇವಿಸಿದರೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎನ್ನುವುದನ್ನು ಸಂಶೋಧನೆಗಳು ತೋರಿಸಿವೆ.

ದೇಹತೂಕ ಇಳಿಸಲು ನೆರವಾಗುತ್ತದೆ:

ಅಧ್ಯಯನ ವರದಿಗಳಂತೆ ಅಧಿಕ ಪ್ರೋಟಿನ್ ಒಳಗೊಂಡಿರುವ ಆಹಾರಗಳು ದೇಹತೂಕವನ್ನು ಇಳಿಸಲು ನೆರವಾಗುತ್ತವೆ. ಆದರೆ ಸೋಯಾ ಪ್ರೋಟಿನ್‌ನ ವಿಷಯದಲ್ಲಿ ಮಿಶ್ರ ಫಲಿತಾಂಶ ಹೊಂದಿರುವಂತಿದೆ. ಸೋಯಾ ಪ್ರೋಟಿನ್‌ಗಳು ದೇಹತೂಕ ಇಳಿಸುವಲ್ಲಿ ಮಾಂಸ ಆಧಾರಿತ ಪ್ರೋಟಿನ್‌ನಷ್ಟೇ ಪರಿಣಾಮಕಾರಿಯಾಗಿವೆ ಎಂದು ಕೆಲವು ಅಧ್ಯಯನಗಳು ಹೇಳಿವೆ.

ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತದೆ:

ಸೋಯಾ ಪ್ರೋಟಿನ್ ಹೃದಯದ ಆರೋಗ್ಯಕ್ಕೆ ಒಳ್ಳೆಯದು ಎನ್ನುವುದು ಅಧ್ಯಯನಗಳಿಂದ ತಿಳಿದುಬಂದಿದೆ. ಅದು ಕೆಟ್ಟ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್‌ಗಳ ಮಟ್ಟವನ್ನು ತಗ್ಗಿಸುತ್ತದೆ ಹಾಗೂ ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ ಎನ್ನುವುದು ಹಲವಾರು ಅಧ್ಯಯನಗಳಿಂದ ಬೆಳಕಿಗೆ ಬಂದಿದೆ.

ಕ್ಯಾನ್ಸರ್ ಅಪಾಯವನ್ನು ತಗ್ಗಿಸಬಹುದು:

ಸೋಯಾ ಆಹಾರಗಳು ಈಸ್ಟ್ರೋಜನ್ ಹಾರ್ಮೋನ್‌ನ್ನು ಹೋಲುವ ಐಸೊಫ್ಲಾವೋನ್‌ಗಳನ್ನು ಒಳಗೊಂಡಿವೆ ಮತ್ತು ಈ ಕಾರಣದಿಂದ ಅದು ಹಾರ್ಮೋನ್‌ಗಳಿಗೆ ಸಂವೇದನಾಶೀಲವಾಗಿರುವ ಕ್ಯಾನ್ಸರ್‌ಗಳನ್ನುಂಟು ಮಾಡುತ್ತದೆ ಎಂದು ಜನರು ಭಾವಿಸುವಂತಾಗಿದೆ. ಆದರೆ ಸೋಯಾ ಆಹಾರಗಳು ಈಸ್ಟ್ರೋಜನ್‌ನಂತಹ ಐಸೊಫ್ಲಾವೋನ್‌ಗಳನ್ನು ಹೊಂದಿದ್ದರೂ ಅವು ಈಸ್ಟ್ರೋಜನ್ ವಿರೋಧಿ ಗುಣಗಳನ್ನು ಹೊಂದಿವೆ ಎಂದು ಅಮೆರಿಕನ್ ಕ್ಯಾನ್ಸರ್ ಸೊಸೈಟಿಯು ಸ್ಪಷ್ಟಪಡಿಸಿದೆ. ಸೋಯಾ ಆಹಾರಗಳನ್ನು ಸೇವಿಸುವವರಲ್ಲಿ ಸ್ತನ ಕ್ಯಾನ್ಸರ್‌ನ ಅಪಾಯ ಕಡಿಮೆಯಾಗಿರುತ್ತದೆ ಮತ್ತು ಸೋಯಾದಲ್ಲಿರುವ ನಾರು ವಿವಿಧ ಕ್ಯಾನ್ಸರ್‌ಗಳ ವಿರುದ್ಧ ಹೋರಾಟದಲ್ಲಿ ನೆರವಾಗುತ್ತದೆ ಎನ್ನುವುದನ್ನು ಕೆಲವು ಅಧ್ಯಯನಗಳು ಬೆಳಕಿಗೆ ತಂದಿವೆ. ಸೋಯಾ ಆಹಾರಗಳು ಮತ್ತು ಕ್ಯಾನ್ಸರ್‌ಗೆ ಸಂಬಂಧಿಸಿದ ಅಧ್ಯಯನಗಳು ಮಿಶ್ರ ಫಲಿತಾಂಶಗಳನ್ನು ಒದಗಿಸಿವೆ.

► ಸೋಯಾ ಪ್ರೋಟಿನ್‌ನ ಅಡ್ಡ ಪರಿಣಾಮಗಳು

ಖನಿಜ ಹೀರುವಿಕೆಯ ಶರೀರದ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ:

ಸೋಯಾ ಉತ್ಪನ್ನಗಳು ಫೈಲೇಟ್‌ಗಳೆಂದು ಕರೆಯಲಾಗುವ ಉತ್ಕರ್ಷಣ ನಿರೋಧಕ ಸಂಯುಕ್ತಗಳನ್ನು ಒಳಗೊಂಡಿವೆ. ಇವು ಖನಿಜಗಳನ್ನು ಹೀರಿಕೊಳ್ಳುವ ಶರೀರದ ಸಾಮರ್ಥ್ಯವನ್ನು ಕುಂದಿಸುತ್ತವೆ ಮತ್ತು ದೀರ್ಘಾವಧಿಯಲ್ಲಿ ಶರೀರದ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡಬಹುದು.

ಥೈರಾಯ್ಡ ಗ್ರಂಥಿಯ ಕೆಲಸಕ್ಕೆ ವ್ಯತ್ಯಯವನ್ನುಂಟು ಮಾಡಬಹುದು:

ಥೈರಾಯ್ಡ ಗ್ರಂಥಿಯು ಆಹಾರದಲ್ಲಿರುವ ಅಯೊಡಿನ್ ಅನ್ನು ಥೈರಾಯ್ಡ ಹಾರ್ಮೋನ್‌ಗಳನ್ನಾಗಿ ಪರಿವರ್ತಿಸುತ್ತದೆ. ಸೋಯಾ ಆಹಾರಗಳಲ್ಲಿರುವ ಐಸೊಫ್ಲಾವೋನ್‌ಗಳು ಥೈರಾಯ್ಡಾ ಗ್ರಂಥಿಯ ಕಾರ್ಯ ನಿರ್ವಹಣೆಗೆ ತಡೆಯನ್ನುಂಟು ಮಾಡುತ್ತವೆ ಮತ್ತು ಥೈರಾಯ್ಡಾ ಹಾರ್ಮೋನ್‌ಗಳ ಉತ್ಪತ್ತಿಗೆ ವ್ಯತ್ಯಯವನ್ನುಂಟು ಮಾಡುತ್ತವೆ.

ಶರೀರದ ಹಾರ್ಮೋನ್ ಸಮತೋಲನವನ್ನು ಕೆಡಿಸಬಹುದು:

ಸಸ್ಯಗಳಲ್ಲಿರುವ ಫೈಟೊಈಸ್ಟ್ರೋಜನ್ ಎಂಬ ರಾಸಾಯನಿಕ ಸಂಯುಕ್ತಗಳನ್ನು ಸೋಯಾ ಒಳಗೊಂಡಿದ್ದು,ಇವು ಈಸ್ಟ್ರೋಜನ್‌ನಂತಹುದೇ ಗುಣಗಳನ್ನು ಹೊಂದಿವೆ. ಇವು ಶರೀರದಲ್ಲಿನ ಹಾರ್ಮೋನ್ ಸಮತೋಲನದಲ್ಲಿ ವ್ಯತ್ಯಯವನ್ನುಂಟು ಮಾಡುವ ಸಾಮರ್ಥ್ಯವನ್ನು ಹೊಂದಿವೆ ಎನ್ನುವುದು ಹಲವಾರು ತಜ್ಞರ ಅಭಿಪ್ರಾಯವಾಗಿದೆ.

ಹೀಗಾಗಿ ಹೆಚ್ಚಿನ ಪ್ರಮಾಣದಲ್ಲಿ ಸೋಯಾ ಪ್ರೋಟಿನ್‌ಗಳನ್ನು ಸೇವಿಸುವ ಮುನ್ನ ಅದರ ಸಾಧಕ-ಬಾಧಕಗಳನ್ನು ಚೆನ್ನಾಗಿ ತಿಳಿದುಕೊಳ್ಳುವುದು ಅಗತ್ಯವಾಗಿದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಮಿತವಾದ ಪ್ರಮಾಣದಲ್ಲಿ ಸೋಯಾ ಪ್ರೋಟಿನ್‌ಗಳ ಸೇವನೆಯು ಸುರಕ್ಷಿತವೆಂದು ಪರಿಗಣಿಸಲಾಗಿದೆ ಮತ್ತು ನೀವು ಸಸ್ಯಾಹಾರಿಗಳಾಗಿದ್ದರೆ ಅದು ಪ್ರೋಟಿನ್‌ನ ಉತ್ತಮ ಮೂಲವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News