×
Ad

ಬಿಹಾರ, ಉತ್ತರಪ್ರದೇಶದಲ್ಲಿ ವಲಸಿಗರ ಮೇಲೆ ದಾಳಿ: 150 ಜನರ ಬಂಧನ

Update: 2018-10-06 19:47 IST

ಅಹ್ಮದಾಬಾದ್,ಅ.6: ಬಿಹಾರ ಮತ್ತು ಉತ್ತರ ಪ್ರದೇಶದ ಜನರ ವಿರುದ್ಧ ಹಿಂಸಾಚಾರದ ಘಟನೆಗಳ ಬಳಿಕ ಕಳೆದೊಂದು ವಾರದಲ್ಲಿ ಕನಿಷ್ಠ 150 ಜನರನ್ನು ಬಂಧಿಸಲಾಗಿದೆ ಎಂದು ಗುಜರಾತ್ ಪೊಲೀಸರು ತಿಳಿಸಿದ್ದಾರೆ. ಸೆ.28ರಂದು ರಾಜ್ಯದ ಸಬರಕಾಂತಾ ಜಿಲ್ಲೆಯಲ್ಲಿ 14 ತಿಂಗಳ ಮಗುವಿನ ಮೇಲೆ ಅತ್ಯಾಚಾರ ನಡೆಸಿದ ಆರೋಪದಲ್ಲಿ ಬಿಹಾರಿ ವ್ಯಕ್ತಿಯೋರ್ವನ ಬಂಧನದ ಬಳಿಕ ಗುಜರಾತಿನ ಕೆಲವು ಪ್ರದೇಶಗಳಲ್ಲಿ ಈ ರಾಜ್ಯಗಳ ವಲಸಿಗರನ್ನು ಗುರಿಯಾಗಿಸಿಕೊಂಡು ಹಲ್ಲೆಗಳು ನಡೆದಿದ್ದವು.

ಗಾಂಧಿನಗರ,ಮೆಹ್ಸಾನಾ,ಸಬರಕಾಂತಾ.ಪಾಟಣ್ ಮತ್ತು ಅಹ್ಮದಾಬಾದ್ ಜಿಲ್ಲೆಗಳಲ್ಲಿ ಈ ದಾಳಿಗಳು ನಡೆದಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ವಲಸಿಗರ ವಿರುದ್ಧ ದ್ವೇಷ ಸಂದೇಶಗಳು ಹರಿದಾಡಿದ ಬಳಿಕ ಈ ದಾಳಿಗಳು ಆರಂಭಗೊಂಡಿದ್ದವು ಎಂದು ಡಿಜಿಪಿ ಶಿವಾನಂದ ಝಾ ಅವರು ಸುದ್ದಿಗಾರರಿಗೆ ತಿಳಿಸಿದರು.

ಘಟನೆಗಳಿಗೆ ಸಂಬಂಧಿಸಿದಂತೆ 18 ಎಫ್‌ಐಆರ್‌ಗಳು ದಾಖಲಾಗಿವೆ.ಇಂತಹ ಚಟುವಟಿಕೆಗಳಿಗೆ ಅವಕಾಶ ನೀಡಲಾಗುವುದಿಲ್ಲ. ಗುಜರಾತಿಯೇತರರು ಸಾಕಷ್ಟು ಸಂಖ್ಯೆಯಲ್ಲಿರುವ ಫ್ಯಾಕ್ಟರಿಗಳು ಮತ್ತು ಹೌಸಿಂಗ್ ಸೊಸೈಟಿಗಳ ಮೇಲೆ ನಿಗಾ ಇರಿಸುವಂತೆ ಸ್ಥಳೀಯ ಪೊಲೀಸರಿಗೆ ನಿರ್ದೇಶಗಳನ್ನು ನೀಡಲಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿಯ ಸಂದೇಶಗಳ ಮೇಲೂ ನಿಗಾಯಿರಿಸಲಾಗಿದೆ ಎಂದರು.

ಇತರ ರಾಜ್ಯಗಳ ವಲಸಿಗ ಕಾರ್ಮಿಕರಿಗೆ ಗುಜರಾತಿನಲ್ಲಿ ಕೆಲಸಗಳನ್ನು ನೀಡಬಾರದು ಎಂದು ಕ್ಷತ್ರಿಯ ಠಾಕೂರ್ ಸೇನಾ ಪ್ರತಿಪಾದಿಸಿದೆ. ವಿವಿಧಡೆಗಳಲ್ಲಿ ವಲಸಿಗರ ಮೇಲೆ ಹಲ್ಲೆಗಳನ್ನು ನಡೆಸಿರುವ ಸೇನಾದ ಕಾರ್ಯಕರ್ತರು ಗುಜರಾತ್ ತೊರೆಯುವಂತೆ ಅವರಿಗೆ ಬೆದರಿಕೆಯೊಡ್ಡಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಕ್ಷತ್ರಿಯ ಠಾಕೂರ್ ಸೇನಾದ ವರಿಷ್ಠರಾಗಿರುವ ಕಾಂಗ್ರೆಸ್ ಶಾಸಕ ಅಲ್ಪೇಶ ಠಾಕೂರ್ ಅವರು ಉತ್ತರ ಪ್ರದೇಶ ಮತ್ತು ಬಿಹಾರಗಳ ಜನರ ಮೇಲೆ ದಾಳಿ ನಡೆಸದಂತೆ ತನ್ನ ಸಮುದಾಯಕ್ಕೆ ಮತ್ತು ಸೇನಾದ ಕಾರ್ಯಕರ್ತರನ್ನು ಕೋರಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News