ಮೃತ ಮುಸ್ತಕೀಂ, ನೌಷಾದ್ ಕುಟುಂಬ ಸದಸ್ಯರಿಗೆ ಗೃಹಬಂಧನ: ಪತ್ರಕರ್ತರು, ಹೋರಾಟಗಾರರ ಭೇಟಿಗೆ ನಿಷೇಧ
# ಬಜರಂಗದಳ ಕಾರ್ಯಕರ್ತರಿಂದ ಹಲ್ಲೆ: ಆರೋಪ
# ಇಂದಿಗೂ ಮನೆಗೆ ಮರಳಿಲ್ಲ ಮುಸ್ತಕೀಂ ತಂದೆ
ಅಲಿಗಡ/ಹೊಸದಿಲ್ಲಿ.ಅ.6: ಸೆ.16ರಂದು ಪೊಲೀಸರು ವಶಕ್ಕೆ ತೆಗೆದುಕೊಂಡ ಬಳಿಕ ಸೆ.20ರಂದು ನಕಲಿ ಎಂದು ಆರೋಪಿಸಲಾಗಿರುವ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟ ಮುಸ್ತಕೀಂ(22) ಮತ್ತು ನೌಷಾದ್(17) ಅವರ ಕುಟುಂಬ ಸದಸ್ಯರು ಗೃಹಬಂಧನಕ್ಕೊಳಗಾಗಿದ್ದಾರೆ. ದಿನವಿಡೀ ಅವರ ಒಂದು ಕೋಣೆಯ ಬಾಡಿಗೆ ಮನೆಗಳನ್ನು ಕಾಯುವ ಮಫ್ತಿಯಲ್ಲಿರುವ ಪೊಲೀಸರು ರಾತ್ರ್ರಿ ಅಲ್ಲಿಂದ ಹೊರಡುವ ಮುನ್ನ ಬೀಗ ಹಾಕುತ್ತಿದ್ದಾರೆ ಎಂದು ಪತ್ರಕರ್ತ ಹಸನ್ ಖಾಲಿದ್ ಅವರು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಸಂತ್ರಸ್ತ ಕುಟುಂಬಗಳನ್ನು ಭೇಟಿಯಾಗಲು ಪ್ರಯತ್ನಿಸುವ ಬಂಧುಗಳು ಮತ್ತು ನೆರೆಕರೆಯವರಿಗೂ ಅಲ್ಲಿರುವ ಪೊಲೀಸರು ಕಿರುಕುಳಗಳನ್ನು ನೀಡುತ್ತಿದ್ದಾರೆ ಮತ್ತು ಬೆದರಿಕೆಗಳನ್ನು ಒಡ್ಡುತ್ತಿದ್ದಾರೆ. ಮಾನವ ಹಕ್ಕು ಹೋರಾಟಗಾರರು ಅಥವಾ ಮಾಧ್ಯಮ ಪ್ರತಿನಿಧಿಗಳು ಈ ಕುಟುಂಬದ ಸದ್ಯರನ್ನು ಭೇಟಿಯಾಗಲು ಬಂದರೆ ಪೊಲೀಸರು ಅವರ ಗುರುತಿನ ಚೀಟಿಗಳನ್ನು ಕೇಳುತ್ತಾರೆ. ಇದೇ ವೇಳೆ ಇತರ ಪೊಲೀಸ್ ಸಿಬ್ಬಂದಿಗಳಿಂದ ಮಾಹಿತಿ ಪಡೆಯುವ ಬಜರಂಗ ದಳದ ಗೂಂಡಾಗಳು ಅಲ್ಲಿಗೆ ಬಂದು ಅವರ ಮೇಲೆ ಹಲ್ಲೆ ನಡೆಸುತ್ತಾರೆ ಎಂದು ಖಾಲಿದ್ ಆರೋಪಿಸಿದ್ದಾರೆ.
ಕಳೆದ ವಾರ ಅತ್ರ್‌ಲಿ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತ ಕುಟುಂಬಗಳನ್ನು ಭೇಟಿಯಾಗಲು ಪ್ರಯತ್ನಿಸಿದ್ದ ಯುನೈಟೆಡ್ ಅಗೇನ್‌ಸ್ಟ್ ಹೇಟ್(ಯುಎಎಚ್) ತಂಡದ ಸದಸ್ಯರ ಮೇಲೆ ಹಲ್ಲೆ ನಡೆಸಿದ್ದ ಬಜರಂಗಿಗಳು ಅವರಿಗೆ ಬೆದರಿಕೆಯನ್ನೂ ಒಡ್ಡಿದ್ದರು.
ಐದೇ ನಿಮಿಷಗಳಲ್ಲಿ ಎಂತಹ ವಾತಾವರಣ ಅಲ್ಲಿ ಸೃಷ್ಟಿಯಾಗಿತ್ತೆಂದರೆ ನಾವು ಇನ್ನೂ ಕೆಲವು ನಿಮಿಷಗಳ ಕಾಲ ಅಲ್ಲಿದ್ದರೆ ಅವರು ನಮ್ಮನ್ನು ಕೊಲ್ಲುತ್ತಿದ್ದರು ಎಂದು ಯುಎಎಚ್‌ನ ನದೀಂ ಖಾನ್ ನೆನಪಿಸಿಕೊಂಡರು.
ಮುಸ್ತಕೀಂ ಮತ್ತು ನೌಷಾದ್ ಜೊತೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದ ನಫೀಸ್ ಎಂಬಾತ ಕಳೆದ 21 ದಿನಗಳಿಂದಲೂ ಅತ್ರ್‌ಲಿ ಪೊಲೀಸ್ ಠಾಣೆಯ ಲಾಕಪ್‌ನಲ್ಲಿ ಕೊಳೆಯುತ್ತಿದ್ದಾನೆ.
ಈ ಮೂವರನ್ನೂ ವಶಕ್ಕೆ ತೆಗೆದುಕೊಂಡ ದಿನವೇ ನಾಪತ್ತೆಯಾಗಿರುವ ಮುಸ್ತಕೀಂ ತಂದೆ ಫುರ್ಖಾನ್ ಅವರು ಈವರೆಗೂ ಮನೆಗೆ ಮರಳಿಲ್ಲ. ಅವರು ಎಲ್ಲಿದ್ದಾರೆಂಬ ಸುಳಿವುಗಳೂ ಲಭಿಸಿಲ್ಲ.