ಶ್ರೀದೇವಿಯಾಗಲಿರುವ ರಾಕುಲ್

Update: 2018-10-06 15:08 GMT

ಟಾಲಿವುಡ್‌ನ ಜನಪ್ರಿಯ ನಟಿ ರಾಕುಲ್ ಪ್ರೀತ್‌ಸಿಂಗ್, ಈಗ ತಮಿಳು ಚಿತ್ರರಂಗದಲ್ಲೂ ಬ್ಯುಸಿಯಾಗಿದ್ದಾರೆ. ಸೂರ್ಯ ಅಭಿನಯದ ಎನ್‌ಜಿಕೆಯಲ್ಲಿ ನಟಿಸುತ್ತಿರುವ ಜೊತೆಗೆ ಆಕೆ ‘ಕಾರ್ತಿ 17’ ಹಾಗೂ ‘ಎಸ್‌ಕೆ 14’ ಚಿತ್ರಗಳಿಗೂ ಬಣ್ಣ ಹಚ್ಚಿದ್ದಾರೆ. ಸ್ವಾರಸ್ಯಕರವೆಂದರೆ ರಾಕುಲ್, ತಾನು ಮಹೇಶ್ ಬಾಬು ಜೊತೆಗೆ ನಟಿಸಿದ್ದ ಚಿತ್ರವಾದ ಸ್ಪೈಡರ್ ಬಾಕ್ಸ್ ಆಫೀಸ್‌ನಲ್ಲಿ ಮುಗ್ಗರಿಸಿದ ಬಳಿಕ ಸುಮಾರು ಒಂದು ವರ್ಷದವರೆಗೆ ಯಾವುದೇ ಟಾಲಿವುಡ್ ಚಿತ್ರಕ್ಕೂ ಸಹಿಹಾಕಿರಲಿಲ್ಲ. ಆದರೆ ಇದೀಗ ಆಕೆ, ತೆಲುಗು ಚಿತ್ರವೊಂದಕ್ಕೆ ಕಾಲ್‌ಶೀಟ್ ನೀಡಿದ್ದಾರೆ. ಜನಪ್ರಿಯ ನಟ ಹಾಗೂ ಆಂಧ್ರದ ಮುಖ್ಯಮಂತ್ರಿ ಎನ್‌ಟಿಆರ್ ಅವರ ಬದುಕನ್ನು ಆಧರಿಸಿದ ಕಥೆಯಿರುವ ಚಿತ್ರವೊಂದರಲ್ಲಿ ಆಕೆ ದಿವಂಗತ ನಟಿ ಶ್ರೀದೇವಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದ್ದೂರಿ ಯಾಗಿ ನಿರ್ಮಾಣಗೊಳ್ಳಲಿರುವ ಈ ಚಿತ್ರಕ್ಕೆ ರಾಕುಲ್ ಸುಮಾರು 10 ದಿನಗಳ ಕಾಲ್‌ಶೀಟ್ ನೀಡಿದ್ದಾರೆ. ಎನ್‌ಟಿಆರ್ ಎಂದೇ ಹೆಸರಿಡಲಾದ ಈ ಚಿತ್ರವನ್ನು ಕ್ರಿಶ್ ನಿರ್ದೇಶಿಸುತ್ತಿದ್ದಾರೆ. ರಾಕುಲ್ ಅಭಿನಯದ ದೃಶ್ಯಗಳ ಚಿತ್ರೀಕರಣವು ಈ ತಿಂಗಳ ಅಂತ್ಯದ ವೇಳೆ ಆರಂಭಗೊಳ್ಳಲಿದೆಯಂತೆ.

ಚಿತ್ರದಲ್ಲಿ ಎನ್‌ಟಿಆರ್ ಪಾತ್ರದಲ್ಲಿ ಅವರ ಪುತ್ರ ಹಾಗೂ ಟಾಲಿವುಡ್‌ನ ಜನಪ್ರಿಯ ನಟ ಬಾಲಕೃಷ್ಣ ನಟಿಸುತ್ತಿದ್ದಾರೆ. ಎನ್‌ಟಿಆರ್ ಅಳಿಯ, ಆಂಧ್ರದ ಹಾಲಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಪಾತ್ರವನ್ನು ಇನ್ನೋರ್ವ ಟಾಲಿವುಡ್ ನಟ ರಾಣಾ ದುಗ್ಗುಬಾಟಿ ನಿರ್ವಹಿಸುತ್ತಿದ್ದಾರೆ. ವಿದ್ಯಾ ಬಾಲನ್, ಕೈಕಲಾ ಸತ್ಯನಾರಾಯಣ ಹಾಗೂ ಸುಮಂತ್ ಅವರು ಚಿತ್ರದ ಕೆಲವು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಮಕರಸಂಕ್ರಾತಿಯ ವೇಳೆಗೆ ಚಿತ್ರ ಬೆಳ್ಳಿತೆರೆಗೆ ಪ್ರವೇಶಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News