ನಡುವೆ ಅಂತರವಿರಲಿ: ಸಮ್ಮೋಹನದ ಜೊತೆಗೆ ಸಂದೇಶ ನೀಡುವ ಚಿತ್ರ

Update: 2018-10-06 18:32 GMT
Editor : ಶಶಿ

ಪ್ರೀತಿ ಪ್ರೇಮದ ಕತೆಗಳಿರುವ ಚಿತ್ರಗಳು ಭಾರತೀಯ ಸಿನೆಮಾರಂಗದಲ್ಲಿ ಬಂದಷ್ಟು ಬಹುಶಃ ಬೇರೆಲ್ಲೂ ಬಂದಿರುವುದು ಕಷ್ಟ. ಆದರೆ ಅವುಗಳಲ್ಲಿ ಬಹುತೇಕ ಮದುವೆಯೊಂದಿಗೆ ಮುಗಿದು ‘ಶುಭಂ’ ಆಗಿಬಿಡುತ್ತದೆ. ಆದರೆ ಆ ಬಳಿಕದ ವಾಸ್ತವಿಕ ಬದುಕಿಗೆ ಇರುವ ಅಂತರವನ್ನು ಅತ್ಯಂತ ಮನೋಜ್ಞವಾಗಿ ನಿರೂಪಿಸಿರುವ ಚಿತ್ರ ‘ನಡುವೆ ಅಂತರವಿರಲಿ’.

ಚಿತ್ರದಲ್ಲಿ ನಾಯಕನಿಗೆ ನಾಯಕಿಯೊಂದಿಗೆ ಪ್ರೀತಿ ಶುರುವಾಗುವ ರೀತಿಯೇ ವಿಭಿನ್ನ. ಅದು ಮುಂದಿನ ಅವರ ನಿರ್ಧಾರಗಳ ಸೂಚನೆ ಎಂದು ನಮಗೆ ಆಗ ಅರ್ಥವಾಗುವುದಿಲ್ಲ. ಆದರೆ ಕತೆ ಮುಂದುವರಿಯುತ್ತಾ ಹೋದಂತೆ ಸಾಮಾನ್ಯ ಕಾಲೇಜ್ ಲವ್ ಸ್ಟೋರಿಯ ಎಲ್ಲ ನಿರೀಕ್ಷೆಗಳನ್ನು ಮೀರುವ ರೀತಿಯಲ್ಲಿ ಚಿತ್ರ ಮನಸೆಳೆಯುತ್ತದೆ.

 ನಿತ್ಯಾ ಎಂಬ ಹುಡುಗಿಯನ್ನು ಕಂಡ ಮೇಲೆ ದಿನ ನಿತ್ಯ ಆಕೆಯ ಹಿಂದೆ ತಿರುಗುವುದೇ ಸಂಜು ಎಂಬ ಯುವಕನ ಕಾಯಕ. ಕೊನೆಗೊಮ್ಮೆ ಆಕೆ ಪ್ರೀತಿ ಒಪ್ಪಿಕೊಂಡ ಮೇಲೆ ಪ್ರೀತಿಯ ಮೋಹ ದೈಹಿಕ ಆಕರ್ಷಣೆಗೆ ಪ್ರಾರಂಭ. ಅಲ್ಲಿಂದ ಶುರುವಾಗುತ್ತದೆ ಸಮಸ್ಯೆ. ಇಂಥದೊಂದು ಕತೆ ಕನ್ನಡಕ್ಕೆ ಹೊಸತೇನೂ ಅಲ್ಲ. ‘ಚಿತ್ರ’ ಸಿನೆಮಾ ಕೂಡಾ ಅದಕ್ಕೊಂದು ಉದಾಹರಣೆ. ಮಲಯಾಳಂನಲ್ಲಿ ಕೂಡ ‘ನೋಟ್‌ಬುಕ್’ ಹೆಸರಲ್ಲಿ ಇದೇ ಮಾದರಿಯ ಕತೆಯ ಚಿತ್ರ ಬಂದಿತ್ತು. ಅವೆಲ್ಲಕ್ಕಿಂತ ಇದು ಐದು ವರ್ಷಗಳ ಹಿಂದೆ ತೆರೆಕಂಡ ‘ಆದಲಾಲ್ ಕಾದಲ್ ಸಿವಿಯರ್’ ಚಿತ್ರದ ರಿಮೇಕ್ ಎನ್ನುವುದು ಉಲ್ಲೇಖನೀಯ.

ಸಾಮಾನ್ಯವಾಗಿ ರಿಮೇಕ್ ಚಿತ್ರಗಳನ್ನು ಮಾಡಿದಾಗಲೆಲ್ಲ ಮೂಲ ಚಿತ್ರಕ್ಕೆ ಹೋಲಿಸಿದಾಗ ಕನ್ನಡದ ಸಿನೆಮಾಗಳು ಕಳೆಗುಂದಿದ ಹಾಗೆ ಕಾಣುವುದು ಸಹಜ. ಆದರೆ ಇಲ್ಲಿ ಹಾಗಾಗಿಲ್ಲ ಎನ್ನುವುದೇ ವಿಶೇಷತೆ. ತಮಿಳು ಸಿನೆಮಾ ನೋಡಿದವರು ಕೂಡ ಈ ಚಿತ್ರವನ್ನು ಕಂಡು ಮೆಚ್ಚುವಂತಿದೆ. ಅದಕ್ಕೆ ಪ್ರಮುಖ ಕಾರಣ ಕಲಾವಿದರ ನುರಿತ ಅಭಿನಯ ಎನ್ನುವುದು ಗಮನಾರ್ಹ.

ಸಂಜು ಎಂಬ ಯುವಕನಾಗಿ ರಂಗಭೂಮಿ ಹಿನ್ನೆಲೆಯ ಪ್ರಖ್ಯಾತ್ ಪ್ರಥಮ ಬಾರಿಗೆ ನಾಯಕನಾಗಿ ನಟಿಸಿದ್ದಾರೆ. ಅವರು ಯುವ ಹೃದಯದ ಪ್ರೀತಿ, ಪ್ರೇಮ, ಸಿಡುಕುಗಳಿಗೆ ಕನ್ನಡಿಯಾಗಿದ್ದಾರೆ. ನಿತ್ಯಾ ಪಾತ್ರದಲ್ಲಿ ನಾಯಕಿಯಾಗಿ ಐಶಾನಿ ಶೆಟ್ಟಿ ವಿಭಿನ್ನ ಪಾತ್ರವನ್ನು ಆರಿಸಿ ನ್ಯಾಯ ಒದಗಿಸುವ ಮೂಲಕ ತಮ್ಮ ಕ್ಯಾಲಿಬರ್ ಏನು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.

ಕತೆ ಆರಂಭದಲ್ಲಿ ಇವರಿಬ್ಬರ ಮೂಲಕ ಮುಂದುವರಿದರೆ ಮಧ್ಯಂತರದ ವೇಳೆಗೆ ಐಶಾನಿಯ ಪೋಷಕರಾಗಿ ನಟಿಸಿದ ಅಚ್ಯುತ್ ಕುಮಾರ್ ಮತ್ತು ತುಳಸಿ ಹಾಗೂ ಪ್ರಖ್ಯಾತ್ ಪೋಷಕರಾಗಿ ನಟಿಸಿದ ಶ್ರೀನಿವಾಸ ಪ್ರಭು ಮತ್ತು ಅರುಣಾ ಬಾಲರಾಜ್ ಸುತ್ತ ಸುತ್ತುತ್ತದೆ. ಆದರೆ ಅಂತ್ಯದಲ್ಲಿ ಅನಿರೀಕ್ಷಿತವಾಗಿ ನಾಯಕ ಮತ್ತು ನಾಯಕಿಯ ಮಗುವೇ ಕೇಂದ್ರ ಬಿಂದುವಾಗುತ್ತದೆ. ಆ ಸಂದರ್ಭ ಎಷ್ಟು ರೋಮಾಂಚನಕಾರಿ ಎನ್ನುವುದನ್ನು ಚಿತ್ರ ನೋಡಿದರೇನೇ ಅನುಭವಿಸಲು ಸಾಧ್ಯ.

ಚಿಕ್ಕಣ್ಣ ಸೇರಿದಂತೆ ನಾಯಕನ ಸ್ನೇಹಿತರಿಗೆ ಚುರುಕು ಸಂಭಾಷಣೆಗಳನ್ನು ನೀಡಿರುವ ಮಂಜು ಮಾಂಡವ್ಯ ಖುದ್ದಾಗಿ ಒಂದು ಪಾತ್ರವಾಗಿಯೂ ಕಾಣಿಸಿಕೊಂಡಿದ್ದಾರೆ. ಮಣಿಕಾಂತ್ ಕದ್ರಿ ನೀಡಿರುವ ಸಂಗೀತದಲ್ಲಿನ ಹಾಡುಗಳು ಈಗಾಗಲೇ ಜನಪ್ರಿಯತೆಯ ಪಟ್ಟಿ ಸೇರಿದೆ. ರಿಮೇಕ್ ಆದರೂ ಕೂಡಾ ಛಾಯಾಗ್ರಹಣ ಸೇರಿದಂತೆ ತಾಂತ್ರಿಕವಾಗಿಯೂ ಗಮನ ಸೆಳೆಯುವಂಥ ಸಂದೇಶಾತ್ಮಕ ಚಿತ್ರವನ್ನು ನೀಡಿರುವ ನಿರ್ದೇಶಕ ರವೀನ್ ನಿಜಕ್ಕೂ ಅಭಿನಂದನಾರ್ಹರು.

ನಿರ್ದೇಶಕ: ರವೀನ್
ನಿರ್ಮಾಪಕ: ರವೀನ್
ತಾರಾಗಣ: ಪ್ರಖ್ಯಾತ್, ಐಶಾನಿ ಶೆಟ್ಟಿ, ಚಿಕ್ಕಣ್ಣ

Writer - ಶಶಿ

contributor

Editor - ಶಶಿ

contributor

Similar News