ದಿಲ್ಲಿ ದರ್ಬಾರ್

Update: 2018-10-06 18:34 GMT

ಸಂತೃಪ್ತ ವ್ಯಕ್ತಿ ಮೊಯ್ಲಿ

ಸಂಸದೀಯ ಆರ್ಥಿಕ ಸ್ಥಾಯಿ ಸಮಿತಿಯ ನೇತೃತ್ವವನ್ನು ಕಾಂಗ್ರೆಸ್ ನಾಯಕ ವೀರಪ್ಪ ಮೊಯ್ಲಿಗೆ ನೀಡಲಾಗಿದೆ. ಕಾಂಗ್ರೆಸ್‌ನಲ್ಲಿ ಅವರ ಉಪಸ್ಥಿತಿ ಹಿಂದಿನ ಮಹತ್ವವನ್ನು ಕಳೆದುಕೊಂಡಿರಬಹುದು. ಆದರೆ ಈ ಸಮಿತಿಯಲ್ಲಿ ಮೊಯ್ಲಿ ಓರ್ವ ಕಠಿಣ ಪರಿಶ್ರಮಪಡುವ ಮುಖ್ಯಸ್ಥ ಎಂದೇ ಖ್ಯಾತರಾಗಿದ್ದಾರೆ.

ಇತ್ತೀಚೆಗೆ ಭಾರತೀಯ ತಾಂತ್ರಿಕ ಸಂಸ್ಥೆಯೊಂದು ಮೊಯ್ಲಿಯ ಸಮಿತಿಯು ಉಳಿದ ಎಲ್ಲ ಸಂಸದೀಯ ಸಮಿತಿಗಳಿಗಿಂತ ಅತ್ಯಂತ ಸಮರ್ಥವಾದುದು ಎಂದು ಹೇಳುವ ಮೂಲಕ ಹಿರಿಯ ಕಾಂಗ್ರೆಸ್ ನಾಯಕನಿಗೆ ಸಂತೋಷ ನೀಡುವಂತಹ ಸುದ್ದಿಯೊಂದನ್ನು ನೀಡಿದೆ. ಈ ಸಾಧನೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸುವ ಮೊಯ್ಲಿ ಸಿಕ್ಕಸಿಕ್ಕವರಲ್ಲಿ ಇದರ ಬಗ್ಗೆ ಮಾತನಾಡಿ ಗಮನ ಸೆಳೆಯುತ್ತಿದ್ದಾರೆ. ಆದರೆ ಅವರಿಗೆ ಇನ್ನೂ ಒಂದೆರಡು ಪಶ್ಚಾತ್ತಾಪಗಳಿವೆ. ಉದಾಹರಣೆಗೆ, ಸಮಿತಿಯ ಪರವಾಗಿ 70 ವರದಿಗಳನ್ನು ಸಿದ್ಧಪಡಿಸುವ ಗುರಿ ಮೊಯ್ಲಿಗೆ ನೀಡಲಾಗಿತ್ತು. ಆದರೆ ಅವರು ಕೇವಲ ಒಂದು ವರದಿಯಿಂದ ಈ ಗುರಿ ಮುಟ್ಟುವಲ್ಲಿ ಎಡವಿದರು. ನೋಟು ಅಮಾನ್ಯ ಕುರಿತ ವರದಿಯು ಸಂಪೂರ್ಣಗೊಳ್ಳಲು ಮತ್ತು ಹಸ್ತಾಂತರಿಸಲು ಬಿಜೆಪಿ ಸಂಸದರು ಅವಕಾಶ ನೀಡಲಿಲ್ಲ. ಕಾಂಗ್ರೆಸ್ ಅಧಿಕಾರದಲ್ಲಿದ್ದಿದ್ದರೆ ಸರಕಾರಕ್ಕೆ ಮುಜುಗರವಾಗುವಂಥ ವರದಿಯ ವಿಷಯದಲ್ಲಿ ಅದು ಕೂಡಾ ಹೀಗೆಯೇ ಮಾಡುತ್ತಿತ್ತು ಎನ್ನುವುದು ಮೊಯ್ಲಿಗೆ ತಿಳಿದಿದೆ. ಆದರೂ ಸದ್ಯ ಮೊಯ್ಲಿ ಈಗ ಸಂತೃಪ್ತ ವ್ಯಕ್ತಿಯಾಗಿದ್ದಾರೆ.


ರಾಜನಾಥ್‌ರನ್ನು ನಿರ್ಲಕ್ಷಿಸುವಂತಿಲ್ಲ

ಭಾರತೀಯ ಕಿಸಾನ್ ಸಂಘಟನೆ ನೇತೃತ್ವದ ಕಿಸಾನ್ ಕ್ರಾಂತಿ ಪಾದಯಾತ್ರೆಯಲ್ಲಿ ಸಾವಿರಾರು ರೈತರು ದಿಲ್ಲಿಯತ್ತ ಪಾದಯಾತ್ರೆ ಕೈಗೊಂಡಿದ್ದರು. ಕಳೆದ ವಾರ ಈ ಪಾದಯಾತ್ರೆಯನ್ನು ದಿಲ್ಲಿ-ಉತ್ತರ ಪ್ರದೇಶ ಗಡಿಯಲ್ಲಿ ಪೊಲೀಸರು ತಡೆದಾಗ ಪೊಲೀಸರು ರೈತರ ಮೇಲೆ ಜಲ ಫಿರಂಗಿ, ಗ್ಯಾಸ್ ಶೆಲ್‌ಗಳನ್ನು ಪ್ರಯೋಗ ಮಾಡಿದ ಕಾರಣ ಹಿಂಸಾಚಾರ ಭುಗಿಲೆದ್ದು ಹಲವರು ಗಾಯಗೊಂಡರು. ಇಂಥ ಒಂದು ಪರಿಸ್ಥಿತಿಯನ್ನು ನಿರೀಕ್ಷಿಸಿರದ ಸರಕಾರ, ಮುಖ್ಯವಾಗಿ ಮೋದಿ, ರೈತ ನಾಯಕರ ಜೊತೆ ಮಾತನಾಡುವಂತೆ ಗೃಹ ಸಚಿವ ರಾಜನಾಥ್ ಸಿಂಗ್‌ಗೆ ಸೂಚಿಸಿದರು.

ಇದಕ್ಕೂ ಮೊದಲು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಪ್ರತಿಭಟನಾಕಾರರ ಜೊತೆ ಮಾತನಾಡಿ ಅವರನ್ನು ಸಮಾಧಾನಪಡಿಸಲು ವಿಫಲವಾಗಿದ್ದರು. ಈ ಪ್ರತಿಭಟನೆಯ ನೇತೃತ್ವವನ್ನು ಖ್ಯಾತ ರೈತ ನಾಯಕ ಮಹೇಂದ್ರ ಸಿಂಗ್ ಟೀಕಾಯತ್ ಪುತ್ರರಾದ ನರೇಶ್ ಮತ್ತು ರಾಕೇಶ್ ಟೀಕಾಯತ್ ವಹಿಸಿದ್ದರು. ಭಾರತೀಯ ಕಿಸಾನ್ ಸಂಘಟನೆ 80-90ರ ದಶಕದ ತನ್ನ ಮಹತ್ವವನ್ನು ಕಳೆದುಕೊಂಡಿ ದ್ದರೂ ಪಶ್ಚಿಮ ಉತ್ತರ ಪ್ರದೇಶದ, ಮುಖ್ಯವಾಗಿ ಜಾಟ್ ಸಮುದಾಯದ ರೈತರ ಮೇಲೆ ಈಗಲೂ ತನ್ನ ಪ್ರಭಾವವನ್ನು ಉಳಿಸಿಕೊಂಡಿದೆ. ಆದರೆ ರಾಜನಾಥ್ ಸಿಂಗ್ ಈ ನಾಯಕರ ಜೊತೆ ಉತ್ತಮ ಬಾಂಧವ್ಯ ಹೊಂದಿರುವುದರಿಂದ ಮತ್ತು ಅವರ ತಂದೆಯನ್ನು ಹತ್ತಿರದಿಂದ ಬಲ್ಲವರಾಗಿದ್ದರಿಂದ ಸಮಸ್ಯೆಯನ್ನು ಬಗೆಹರಿಸುವಲ್ಲಿ ಯಶಸ್ವಿಯಾದರು. ಈ ಮಧ್ಯೆ ಅವರು ಸ್ಪಷ್ಟವಾಗಿ ತೋರಿಸಿಕೊಟ್ಟಿದ್ದೇನೆಂದರೆ, ಉತ್ತರ ಪ್ರದೇಶದ ಸಮಸ್ಯೆಯ ವಿಷಯ ಬಂದಾಗ ಈಗಲೂ ಪರಿಹಾರ ಕಂಡುಕೊಳ್ಳಲು ತನ್ನಿಂದ ಸಾಧ್ಯ ಎಂಬುದು.


ವಿಜಯ್ ಗೋಯಲ್ ಗುರಿ!

ನರೇಂದ್ರ ಮೋದಿ ಮತ್ತು ಅವರ ಸರಕಾರ ತಮ್ಮ ಡಿಜಿಟಲ್ ಇಂಡಿಯಾ ಕನಸನ್ನು ನನಸಾಗಿಸುವ ಪ್ರಯತ್ನದಲ್ಲಿದ್ದರೆ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ವಿಜಯ್ ಗೋಯಲ್ ಬೇರೆಯದೇ ಹಾಡು ಹಾಡುವಂತಿದೆ. ಇತ್ತೀಚೆಗೆ ಸಂಸತ್‌ನಲ್ಲಿ ನಡೆದ ಸಂಸದರ ರಾಷ್ಟ್ರೀಯ ಸಮ್ಮೇಳನದಲ್ಲಿ, ಡಿಜಿಟಲ್ ಯುಗದ ಉದಯದಿಂದ ಸಂಸ್ಥೆಗಳ ಸ್ಪಂದನೆಗೆ ಅಪಾಯ ಎದುರಾಗಿದೆ ಎಂದು ಹೇಳುವ ಮೂಲಕ ಗೋಯಲ್ ಎಲ್ಲರನ್ನೂ ಚಕಿತಗೊಳಿಸಿದ್ದರು.

ಸಂಸತ್ ಮತ್ತು ವಿಧಾನಸಭೆಗಳಲ್ಲಿ ಮೊಬೈಲ್ ಫೋನ್ ಮತ್ತು ಟ್ಯಾಬ್‌ಗಳನ್ನು ಬಳಸುವ ಬಗ್ಗೆಯೂ ಅವರು ವಿರೋಧ ವ್ಯಕ್ತಪಡಿಸಿದ್ದರು. ವೈಯಕ್ತಿಕ ಮಾತುಕತೆಗಳು ಮತ್ತು ಅಭಿಪ್ರಾಯ ಬದಲಾವಣೆಗಳು ಸದನದ ಪ್ರಕ್ರಿಯೆಗೆ ಕ್ರಿಯಾತ್ಮಕತೆ ಮತ್ತು ಜೀವಂತಿಕೆಯನ್ನು ನೀಡುತ್ತಿದ್ದವು ಎಂದು ಅವರು ತಿಳಿಸಿದ್ದರು. ಅಷ್ಟಕ್ಕೆ ಸುಮ್ಮನಾಗದ ಗೋಯಲ್, ಸಂಸತ್ ಅಧಿವೇಶನಗಳನ್ನು ಮೊಟಕುಗೊಳಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದರು. ಅವರನ್ನು ಆಲಿಸುತ್ತಿದ್ದ ಎಲ್ಲರೂ, ಮೋದಿ ಸಂಪುಟದ ಓರ್ವ ಸಚಿವ ಈ ರೀತಿ ಮಾತನಾಡುತ್ತಿದ್ದಾರೆ ಎಂಬುದನ್ನು ನಂಬಲು ಸಿದ್ಧವಿರಲಿಲ್ಲ. ಅಷ್ಟಕ್ಕೂ ಗೋಯಲ್ ಈ ರೀತಿ ಮಾತಾಡಲು ಕಾರಣವೇನಿರಬಹುದು ಎನ್ನುವುದೇ ಎಲ್ಲರ ಪ್ರಶ್ನೆಯಾಗಿತ್ತು.


ಯಾರಿಗೆ ಗೊತ್ತು? ಗೊಗೊಯಿ ಸಂಪತ್ತು!!

ಸರ್ವೋಚ್ಚ ನ್ಯಾಯಾಲಯ ಹಿರಿಯ ವಕೀಲರ ಆಸ್ತಿಗೆ ಹೋಲಿಸಿದರೆ ನೂತನವಾಗಿ ಅಧಿಕಾರ ಸ್ವೀಕರಿಸಿರುವ ಭಾರತದ ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯಿ ಅವರು ಅತ್ಯಂತ ಕನಿಷ್ಠ ಸಂಪತ್ತು ಮತ್ತು ಆಸ್ತಿಯನ್ನು ಹೊಂದಿದ್ದಾರೆ. ದೇಶದ 46ನೇ ಮುಖ್ಯ ನ್ಯಾಯಾಧೀಶರಾಗಿ ಕಳೆದ ವಾರ ಪ್ರತಿಜ್ಞೆ ಸ್ವೀಕರಿಸಿದ ರಂಜನ್ ಗೊಗೊಯಿ ಬಳಿ ಒಂದೂ ಚಿನ್ನವಿಲ್ಲ. ಅವರ ಪತ್ನಿ ಧರಿಸುವ ಚಿನ್ನ ವಿವಾಹದ ಸಮಯದಲ್ಲಿ ಅವರ ಹೆತ್ತವರು ಮತ್ತು ಸಂಬಂಧಿಕರು ಉಡುಗೊರೆಯಾಗಿ ನೀಡಿದಂತಹವುಗಳು. ಭಾರತದ ನೂತನ ಸಿಜೆಐ ಬಳಿ ಸ್ವಂತ ಮನೆ ಮತ್ತು ವಾಹನ ಕೂಡಾ ಇಲ್ಲ. ಅವರು ಯಾವ ಸಾಲವನ್ನು ಹೊಂದಿಲ್ಲ. ನಿವೃತ್ತಿಯ ನಂತರ ಯಾವುದೇ ಹುದ್ದೆಯನ್ನು ಸ್ವೀಕರಿಸುವುದಿಲ್ಲ ಎಂದು ಈಗಾಗಲೇ ಗೊಗೊಯಿ ಘೋಷಿಸಿದ್ದಾರೆ. ನಿವೃತ್ತ ಜೀವನವನ್ನು ಅಸ್ಸಾಂನಲ್ಲಿ ಕಳೆಯುವುದಾಗಿಯೂ ಅವರು ತಿಳಿಸಿದ್ದಾರೆ. ಬಹಳ ಗಂಭೀರ ಸ್ವಭಾವದ ನ್ಯಾಯಾಧೀಶರಾಗಿರುವ ಗೊಗೊಯಿ, ತಮ್ಮ ವಾದವನ್ನು ಸರಿಯಾಗಿ ಮಂಡಿಸದ ಹಿರಿಯ ವಕೀಲರನ್ನೂ ತರಾಟೆಗೆ ತೆಗೆದುಕೊಳ್ಳಲು ಹಿಂದೆಮುಂದೆ ನೋಡುವುದಿಲ್ಲ. ತನ್ನ ಒಂದು ವರ್ಷಕ್ಕಿಂತ ಸ್ವಲ್ಪ ಅಧಿಕ ಸೇವಾವಧಿಯಲ್ಲಿ ಗೊಗೊಯಿ ಹಲವು ಬಾರಿ ಮಾಧ್ಯಮಗಳಲ್ಲಿ ಮುಖ್ಯಸುದ್ದಿಯಲ್ಲಿ ಕಾಣಿಸಿಕೊಂಡರೆ ಆಶ್ಚರ್ಯವೇನೂ ಇಲ್ಲ.


ಜೋಗಿಯ ಮಾರ್ಗ
ಚುನಾವಣಾ ಹೊಸ್ತಿಲಲ್ಲಿರುವ ಛತ್ತೀಸ್‌ಗಡದಲ್ಲಿ ಚುನಾವಣಾ ರಾಜಕೀಯವು ಪತಂಗದಂತಹ ಅಧಿಕಾರಿಗಳಿಗೆ ಜ್ಞಾನದ ಬೆಳಕಿನಂತೆ ಕಾಣುತ್ತಿದೆ.

ರಾಯಪುರದ ಕಲೆಕ್ಟರ್ ಒ.ಪಿ.ಚೌಧರಿ ಸೇರಿದಂತೆ 25ಕ್ಕೂ ಅಧಿಕ ಅಧಿಕಾರಿಗಳು ರಾಜಕೀಯ ಸೇರಲು ತಮ್ಮ ಹುದ್ದೆಯನ್ನು ತೊರೆದಿದ್ದಾರೆ. ಇಂಥ ವೃತ್ತಿಜೀವನ ಬದಲಾವಣೆಗೆ ನಾಂದಿ ಹಾಡಲು ಈ ಅಧಿಕಾರಿಗಳಿಗೆ ಬಹುಶಃ ಅಜಿತ್ ಜೋಗಿ ಪ್ರೇರಣೆಯಾಗಿರಬಹುದು. ಕಾಂಗ್ರೆಸ್ ನೇತೃತ್ವವನ್ನು ರಾಜೀವ್ ಗಾಂಧಿ ವಹಿಸಿಕೊಂಡಿದ್ದ ಕಾಲದಲ್ಲಿ ಅಜಿತ್ ಜೋಗಿ ಕಲೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ನಂತರ ಅವರು ರಾಜಕೀಯ ಸೇರುವ ಉದ್ದೇಶದಿಂದ ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಸದ್ಯ ಮಾಜಿ ಮುಖ್ಯಮಂತ್ರಿಯಾಗಿರುವ ಜೋಗಿ ಕಾಂಗ್ರೆಸ್ ಪಕ್ಷದ ಸಾಂಗತ್ಯವನ್ನು ತೊರೆದು ಮಾಯಾವತಿಯ ಬಹುಜನ ಸಮಾಜ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ಜೋಗಿಯ ಜನತಾ ಕಾಂಗ್ರೆಸ್ ಛತ್ತೀಸ್‌ಗಡದಲ್ಲಿ ಸರಕಾರಿ ಅಧಿಕಾರಿಗಳನ್ನು ತನ್ನ ಪಕ್ಷಕ್ಕೆ ಸೇರಿಸಿಕೊಳ್ಳಲು ಕಾತರಿಸುತ್ತಿದ್ದು ಈಗಾಗಲೇ ಅನೇಕ ಅಧಿಕಾರಿಗಳಿಗೆ ಟಿಕೆಟ್ ನೀಡಿದೆ. ಅವರ ಈ ನಡೆ ಯಾರಿಗೂ ಆಶ್ಚರ್ಯ ಉಂಟುಮಾಡದು. ಯಾಕೆಂದರೆ ಜೋಗಿಯೂ ಈ ಹಿಂದೆ ಸರಕಾರಿ ಅಧಿಕಾರಿಯಾಗಿದ್ದು ನಂತರ ರಾಜಕೀಯಕ್ಕೆ ಧುಮುಕಿದವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News