ನಾಯಿ ಬಳಿ ಕ್ಷಮೆ ಯಾಚಿಸದ ಟ್ರಕ್ ಚಾಲಕನ ಹತ್ಯೆ !

Update: 2018-10-07 03:34 GMT

ಹೊಸದಿಲ್ಲಿ, ಅ. 7: ಇನ್ನೊಂದು ನಿಮಿಷದಲ್ಲಿ ವಿಜೇಂದ್ರ ರಾಣಾ ಮನೆ ಸೇರಿಕೊಳ್ಳಬೇಕಿತ್ತು. ಅದು ಶನಿವಾರ ಮಧ್ಯರಾತ್ರಿ. ತಮ್ಮ ಟ್ರಕ್ ನಿಲ್ಲಿಸಲು ಖಾಲಿ ಜಾಗ ಹುಡುಕುವ ವೇಳೆ ಅವರ ಮಿನಿ ಟ್ರಕ್, ಪಕ್ಕದಲ್ಲಿದ್ದ ಕಪ್ಪು ಲ್ಯಾಬ್ರಡೋರ್ ನಾಯಿಗೆ ಒರೆಸಿತು. ನಾಯಿ ಬೊಗಳಲಾರಂಭಿಸಿತು. ಕೆಲವೇ ನಿಮಿಷಗಳಲ್ಲಿ 40 ವರ್ಷದ ರಾಣಾ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಅಡುಗೆ ಚಾಕು ಮತ್ತು ಸ್ಕ್ರೂಡ್ರೈವರ್‌ನಿಂದ ಆರು ಬಾರಿ ಚುಚ್ಚಿ ಅವರನ್ನು ಕೊಲೆ ಮಾಡಲಾಗಿತ್ತು. ಕಾರಣ ಅವರು ಟಾಮಿಗೆ "ಸ್ಸಾರಿ" ಹೇಳದಿದ್ದುದು !

ಹತ್ತು ಮಂದಿಯ ಕುಟುಂಬದ ಜೀವನಾಧಾರವಾಗಿದ್ದ ವ್ಯಕ್ತಿ ಕ್ಷುಲ್ಲಕ ಕಾರಣಕ್ಕೆ ಶವವಾಗಿ ಬಿದ್ದರೆ, ಅವರ ನೆರವಿಗೆ ಬಂದ ಸಹೋದರ ರಾಜೇಶ್ ರಾಣಾ (45) ದೀನದಯಾಳ್ ಉಪಾಧ್ಯಾಯ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಅವರಿಗೆ ಮೂರು ಬಾರಿ ಇರಿದ ಕಾರಣದಿಂದ ತೀವ್ರವಾಗಿ ಗಾಯಗೊಂಡಿದ್ದಾರೆ.

ಆಗ್ನೇಯ ದೆಹಲಿಯ ಉತ್ತಮ್‌ನಗರದ ಮೋಹನ್ ಗಾರ್ಡನ್ ಬಳಿ ಶನಿವಾರ ಈ ಘಟನೆ ನಡೆದಿದ್ದು, ಅಂಕಿತ್ ಹಾಗೂ ಪರಾಸ್ ಎನ್ನುವವರು ಪ್ರಮುಖ ಆರೋಪಿಗಳು. ಅವರ ಮನೆಯಲ್ಲಿ ಬಾಡಿಗೆಗಿದ್ದ ದೇವ್ ಛೋಪ್ರಾ ಎಂಬಾತ ಕೂಡಾ ಕೃತ್ಯದಲ್ಲಿ ಷಾಮೀಲಾಗಿದ್ದಾನೆ ಎನ್ನಲಾಗಿದೆ.

ಮಧ್ಯರಾತ್ರಿ ವೇಳೆ ಅಂಕಿತ್, ಪಾರಸ್ ಹಾಗೂ ದೇವ್, ಟಾಮಿಯ ಜತೆ ವಾಯುವಿಹಾರಕ್ಕೆ ತೆರಳಿದ್ದರು. ಹತ್ತು ನಿಮಿಷದಲ್ಲಿ ವಿಜೇಂದ್ರ ಟ್ರಕ್‌ನೊಂದಿಗೆ ಆಗಮಿಸಿದರು. ಟಾಮಿ ರಸ್ತೆ ಬದಿ ಕುಳಿತಿತ್ತು. ರಸ್ತೆಯ ಇನ್ನೊಂದು ಪಕ್ಕದಲ್ಲಿ ನಿಲ್ಲಿಸಿದ್ದ ಸ್ಕೂಟರ್ ಬಳಿ ಮೂವರು ಮಾತನಾಡುತ್ತಾ ನಿಂತಿದ್ದರು. ವಿಜಯೇಂದ್ರ ಅವರ ಟ್ರಕ್‌ನತ್ತ ನೋಡಿ ನಾಯಿ ಬೊಗಳಲು ಆರಂಭಿಸಿದಾಗ ಮೂವರೂ ಆತನತ್ತ ಧಾವಿಸಿ ಆತನನ್ನು ನಿಂದಿಸಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಆತನ ಕೂದಲು ಹಿಡಿದು ಎಳೆದು ಟಾಮಿ ಬಳಿ ಕ್ಷಮೆ ಯಾಚಿಸುವಂತೆ ಆಗ್ರಹಿಸಿದರು. ಕೋಪಗೊಂಡ ವಿಜೇಂದ್ರ, ನಿಮ್ಮ ನಾಯಿಯನ್ನು ನೋಡಿಕೊಳ್ಳಿ ಎಂದು ಹೇಳಿದರು. ಆತನನ್ನು ಬಿಟ್ಟು ಮನೆಗೆ ಧಾವಿಸಿದರು. ಮನೆ ತಲುಪಲು 50 ಮೀಟರ್ ದೂರದಲ್ಲಿದ್ದಾಗ ಅಂಕಿತ್ ಹಾಗೂ ಪರಾಸ್ ಮತ್ತೆ ಆತನನ್ನು ಎಳೆದು ಜಗಳ ಆರಂಭಿಸಿದರು. ಅವರ ಜಗಳ ಕೇಳಿ ಸಹೋದರ ರಾಜೇಶ್ ಅಲ್ಲಿಗೆ ಧಾವಿಸಿದ್ದರು ಎಂದು ವಿಜೇಂದ್ರ ಸಹೋದರಿ ಸುಷ್ಮಾ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News