ದೆಹಲಿ ಮೆಟ್ರೊ ನಿಯಮ ಉಲ್ಲಂಘನೆಗೆ ದಂಡ ತೆತ್ತವರೆಷ್ಟು ಮಂದಿ ಗೊತ್ತೇ ?

Update: 2018-10-07 03:41 GMT

ಹೊಸದಿಲ್ಲಿ, ಅ. 7: ಈ ವರ್ಷದ ಆಗಸ್ಟ್ ತಿಂಗಳವರೆಗೆ ದೆಹಲಿ ಮೆಟ್ರೊ ರೈಲಿನ ನೆಲದಲ್ಲಿ ಕುಳಿತು ಪ್ರಯಾಣಿಸಿದ್ದಕ್ಕಾಗಿ 22,699 ಮಂದಿಗೆ ದಂಡ ವಿಧಿಸಲಾಗಿದೆ.

ಆಸನದ ಕೆಳಗೆ ಕುಳಿತು ಪ್ರಯಾಣಿಸುವ ಮೂಲ ನಿಯಮ ಉಲ್ಲಂಘಿಸಿದವರು ಇತರ ನಿಯಮ ಉಲ್ಲಂಘನೆ ಮಾಡಿದವರಿಗಿಂತ ಅಧಿಕ ಎನ್ನುವುದು ಅಂಕಿ ಅಂಶಗಳಿಂದ ತಿಳಿದುಬಂದಿದೆ. ಉಳಿದಂತೆ 3933 ಮಂದಿಗೆ ಅಸಂಬದ್ಧ ವರ್ತನೆಗಾಗಿ, 2871 ಮಂದಿಗೆ ಟೋಕನ್ ನೀಡದೇ ನಿಲ್ದಾಣದ ಆವರಣದಿಂದ ಹೊರ ಹೋದ್ದಕ್ಕಾಗಿ ದಂಡ ವಿಧಿಸಲಾಗಿದೆ ಎಂದು ದೆಹಲಿ ಮೆಟ್ರೊ ರೈಲು ನಿಗಮ ಪ್ರಕಟಿಸಿದೆ.

ಇತರ ಸಾಮಾನ್ಯ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ, ಮಹಿಳೆಯರಿಗೆ ಮೀಸಲಾಗಿರುವ ಬೋಗಿಗಳಿಗೆ ಅಕ್ರಮವಾಗಿ ಪ್ರವೇಶ ಮಾಡಿರುವುದು, ನಿಲ್ದಾಣ ಹಾಗೂ ರೈಲುಗಳಲ್ಲಿ ಉಗುಳುವುದು ಸೇರಿದೆ. ಮಹಿಳಾ ಬೋಗಿಯಲ್ಲಿ ಕುಳಿತು ಪ್ರಯಾಣಿಸಿದ್ದಕ್ಕಾಗಿ 2278 ಪುರುಷರಿಗೆ ದಂಡ ವಿಧಿಸಿದ್ದರೆ, 604 ಮಂದಿ ಉಗುಳಿ ದಂಡ ತೆತ್ತಿದ್ದಾರೆ.

ರೈಲಿನ ನೆಲದಲ್ಲಿ ಕುಳಿತು ಪ್ರಯಾಣಿಸಿದ್ದಕ್ಕಾಗಿ 2014ರಲ್ಲಿ ಕೇವಲ ನಾಲ್ಕು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿತ್ತು. 2015ರಲ್ಲಿ ಈ ಸಂಖ್ಯೆ 108 ಆಗಿದ್ದರೆ, 2016ರಲ್ಲಿ 1521, 2017ರಲ್ಲಿ 10155ಕ್ಕೆ ಹೆಚ್ಚಿತು.

ಜನವರಿಯಿಂದ ಆಗಸ್ಟ್‌ವರೆಗೆ ಒಟ್ಟು 24.13 ಲಕ್ಷ ರೂಪಾಯಿ ದಂಡ ವಸೂಲಾಗಿದೆ. ರೈಲಿನ ನೆಲದಲ್ಲಿ ಕುಳಿತು ಪ್ರಯಾಣಿಸುವುದಕ್ಕೆ 200 ರೂ., ಉಗುಳಿದ್ದಕ್ಕೆ 150 ರೂ. ದಂಡ ವಿಧಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News