ಬಾಯಿಯಲ್ಲಿ ಅತಿಯಾಗಿ ಜೊಲ್ಲುಂಟಾಗಲು ಕಾರಣಗಳು ಗೊತ್ತೇ......?

Update: 2018-10-07 06:56 GMT

ಕೆಲವರಲ್ಲಿ ಅತಿಯಾದ ಪ್ರಮಾಣದಲ್ಲಿ ಜೊಲ್ಲು ಉತ್ಪತ್ತಿಯಾಗುತ್ತಿರುತ್ತದೆ. ಬಾಯಿ ತುಂಬಿ ಕೆಳತುಟಿಯಿಂದ ಜೊಲ್ಲು ಹೊರಗೆ ಹರಿಯುತ್ತಿರುತ್ತದೆ. ಇದನ್ನು ವೈದ್ಯಕೀಯವಾಗಿ ‘ಹೈಪರ್‌ಸಲೈವೇಶನ್’ ಎಂದು ಕರೆಯಲಾಗುತ್ತದೆ. ನಾವು ಸಾಮಾನ್ಯವಾಗಿ ಜೊಲ್ಲು ಸುರಿಸುವುದು ಎಂದು ಹೇಳುತ್ತೇವೆ. ಕಾರಣವನ್ನು ಅವಲಂಬಿಸಿ ಈ ಜೊಲ್ಲು ಸುರಿಸುವಿಕೆ ತಾತ್ಕಾಲಿಕವಾಗಿರಬಹುದು ಅಥವಾ ಖಾಯಂ ಆಗಬಹುದು. ಜೊಲ್ಲು ಸುರಿಯುವಿಕೆಯ ಹಿಂದಿನ ಕಾರಣವನ್ನು ಗುರುತಿಸುವುದು ಈ ಸಮಸ್ಯೆಯನ್ನೆದುರಿಸುತ್ತಿರುವ ರೋಗಿಗಳಿಗೆ ನೀಡಬಹುದಾದ ಸಾಧ್ಯವಿರುವ ಅತ್ಯುತ್ತಮ ಚಿಕಿತ್ಸೆಯಾಗಿದೆ.

ಏನಿದು ಹೈಪರ್‌ಸಲೈವೇಶನ್?

ಜೊಲ್ಲು ಸುರಿಸುವುದು ಒಂದು ರೋಗವಲ್ಲದಿದ್ದರೂ ಅದು ಯಾವುದಾದರೂ ಅನಾರೋಗ್ಯ ಸಮಸ್ಯೆಯ ಲಕ್ಷಣವೆಂದು ಪರಿಗಣಿಸಲಾಗಿದೆ. ಇವು ಹೆಚ್ಚಾಗಿ ಸಾಮಾನ್ಯ ಅನಾರೋಗ್ಯಗಳಾಗಿದ್ದು ಸುಲಭವಾಗಿ ಗುಣಪಡಿಸಬಹುದಾಗಿದೆ.

ಜೊಲ್ಲು ಸ್ವಚ್ಛ ದ್ರವದ ರೂಪದಲ್ಲಿರುತ್ತದೆ ಮತ್ತು ಬಾಯಿಯಲ್ಲಿರುವ ಜೊಲ್ಲುಗ್ರಂಥಿಗಳು ಅದನ್ನು ಉತ್ಪಾದಿಸುತ್ತವೆ. ಜೊಲ್ಲು ನಾವು ಅಗಿಯುವ ಆಹಾರವನ್ನು ತೇವಗೊಳಿಸುವ ಮೂಲಕ ಅದನ್ನು ನುಂಗಲು ನೆರವಾಗುತ್ತದೆ.

ಜೊಲ್ಲಿನಲ್ಲಿರುವ ಕಿಣ್ವಗಳು ಜೀರ್ಣಕ್ರಿಯೆಯಲ್ಲಿ ನೆರವಾಗುತ್ತವೆ. ಅದು ಬಾಯಿಯೊಳಗಿನ ಕ್ರಿಮಿಗಳನ್ನು ನಿವಾರಿಸುವ ಅಸ್ತ್ರವೂ ಆಗಿದೆ. ಗಾಯಗಳು ಮಾಯಲು ಸಹ ನೆರವಾಗುವ ಅದು,ವಿಷಾಣುಗಳು ಮತ್ತು ಹಾನಿಕಾರಕಗಳ ವಿರುದ್ಧ ರಕ್ಷಣೆಯನ್ನು ನಿಡುತ್ತದೆ. ಅಲ್ಲದೆ ಬಾಯಿ ಒಣಗುವುದನ್ನು ಅದು ತಡೆಯುತ್ತದೆ.

ಆರೋಗ್ಯಯುತ ವ್ಯಕ್ತಿಯಲ್ಲಿ ಜೊಲ್ಲಿನ ಉತ್ಪಾದನೆಯ ಪ್ರಮಾಣ ಸುಮಾರು ಮುಕ್ಕಾಲು ಲೀ.ನಿಂದ ಒಂದೂವರೆ ಲೀ.ನಷ್ಟಿರುತ್ತದೆ. ನಾವು ಆಹಾರವನ್ನು ತಿನ್ನುತ್ತಿರುವಾಗ ಜೊಲ್ಲಿನ ಉತ್ಪತ್ತಿ ಗರಿಷ್ಠ ಮಟ್ಟದಲ್ಲಿರುತ್ತದೆ ಮತ್ತು ನಿದ್ರೆಯಲ್ಲಿರುವಾಗ ಕನಿಷ್ಠ ಮಟ್ಟದಲ್ಲಿರುತ್ತದೆ. ನಿಮ್ಮ ಬಾಯಿಯಲ್ಲಿ ಅತಿಯಾಗಿ ಜೊಲ್ಲು ಉತ್ಪತ್ತಿಯಾಗುತ್ತಿದ್ದರೆ ತಿನ್ನುವಾಗ ಮಾತನಾಡುವುದು ಕಷ್ಟವಾಗುತ್ತದೆ. ಹೈಪರ್‌ಸಲೈವೇಷನ್ ಚರ್ಮದ ಸೋಂಕುಗಳಿಗೆ ಮತ್ತು ತುಟಿಗಳು ಒಡೆಯುವುದಕ್ಕೂ ಕಾರಣವಾಗುತ್ತದೆ. ಅಲ್ಲದೆ ಬಾಯಿಯಿಂದ ಜೊಲ್ಲು ಸುರಿಯುತ್ತಿದ್ದರೆ ಜನರೆದುರು ಆತ್ಮಗೌರವಕ್ಕೂ ಕುಂದುಂಟಾಗುತ್ತದೆ.

ಹೈಪರ್‌ಸಲೈವೇಶನ್ ಅಥವಾ ಅತಿಯಾದ ಜೊಲ್ಲಿಗೆ ಪ್ರಾಥಮಿಕ ಕಾರಣಗಳು

►ಗರ್ಭಾವಸ್ಥೆ: ಗರ್ಭಿಣಿಯರಲ್ಲಿ ಬೆಳಗಿನ ಅನಾರೋಗ್ಯ ಮತ್ತು ವಾಕರಿಕೆ ಅತಿಯಾದ ಜೊಲ್ಲಿನ ಉತ್ಪಾದನೆಗೆ ಕಾರಣವಾಗುತ್ತವೆ. ಗರ್ಭಾವಸ್ಥೆಯಲ್ಲಿ ಸ್ರವಿಸಲ್ಪಡುವ ಹಾರ್ಮೋನ್‌ಗಳು ಜೊಲ್ಲುಗ್ರಂಥಿಗಳ ಕಾರ್ಯ ನಿರ್ವಹಣೆಯ ಮೇಲೆ ಪರಿಣಾಮವನ್ನುಂಟು ಮಾಡುತ್ತವೆ.

►ಆಮ್ಲ ಹಿಮ್ಮುಖ ಹರಿವು: ಜಠರಾಮ್ಲದ ನಿರಂತರ ಹಿಮ್ಮುಖ ಹರಿವು ಅನ್ನನಾಳದ ಪದರಗಳಲ್ಲಿ ಉರಿಯನ್ನುಂಟು ಮಾಡುತ್ತದೆ ಮತ್ತು ಅತಿಯಾದ ಜೊಲ್ಲು ಉತ್ಪತ್ತಿಗೆ ಕಾರಣವಾಗುತ್ತದೆ. ಇಂತಹ ಪ್ರಕರಣಗಳಲ್ಲಿ ಇದನ್ನು ‘ವಾಟರ್ ಬ್ರಾಷ್’ ಎಂದು ನಿರ್ದಿಷ್ಟವಾಗಿ ಕರೆಯಲಾಗುತ್ತದೆ. ಅಂದರೆ ಬಾಯಿಯಲ್ಲಿನ ಜೊಲ್ಲಿನೊಂದಿಗೆ ಅನ್ನನಾಳದ ಮೂಲಕ ಹಿಮ್ಮುಖವಾಗಿ ಹರಿದ ಆಮ್ಲವೂ ಸೇರಿರುತ್ತದೆ. ಇಂತಹ ಜೊಲ್ಲಿಗೆ ಯಾವುದೇ ರುಚಿಯಿರುವುದಲ್ಲ ಅಥವಾ ಕಹಿ ದ್ರಾವಣದ ರುಚಿಯಿರುತ್ತದೆ.

►ಅತಿಯಾಗಿ ಪಿಷ್ಟ ಸೇವನೆ

ಪಿಷ್ಟವು ಸಮೃದ್ಧವಾಗಿರುವ ಆಹಾರ ಸೇವನೆಯು ಜೊಲ್ಲಿನ ಉತ್ಪತ್ತಿಯನ್ನು ಹೆಚ್ಚಿಸುತ್ತದೆ.

►ಮೇದೋಜ್ಜೀರಜ ಗ್ರಂಥಿಯ ಉರಿಯೂತ

ಇದು ಜೊಲ್ಲುಗ್ರಂಥಿಗಳ ಕಾರ್ಯದಲ್ಲಿ ಏರುಪೇರುಗಳನ್ನುಂಟು ಮಾಡುತ್ತದೆ. ಸುದೀರ್ಘ ಕಾಲದವರೆಗೆ ಅತಿಯಾದ ಮದ್ಯಸೇವನೆ ಮೇದೋಜ್ಜೀರಕ ಗ್ರಂಥಿಯ ಉರಿಯೂತಕ್ಕೆ ಕಾರಣವಾಗುತ್ತದೆ.

►ಬಾಯಿ ಹುಣ್ಣುಗಳು

ಬಾಯಿಯಲ್ಲಿ ನೋವಿದ್ದಾಗ ಹೆಚ್ಚು ಜೊಲ್ಲು ಉತ್ಪತ್ತಿಯಾಗುವುದು ಸಹಜವೇ ಆಗಿದೆ. ಹೀಗಾಗಿ ನೋವಿನಿಂದ ಕೂಡಿದ ಬಾಯಿ ಹುಣ್ಣುಗಳಿದ್ದಾಗ ಜೊಲ್ಲು ಅತಿಯಾಗಿ ಉತ್ಪತ್ತಿಯಾಗುತ್ತದೆ.

►ಯಕೃತ್ತಿನ ಕಾಯಿಲೆ

ಜೊಲ್ಲಿನ ಸ್ರವಿಸುವಿಕೆಯು ಸ್ವಾಯತ್ತ ನರಮಂಡಳದಿಂದ ನಿಯಂತ್ರಿಸಲ್ಪಡುತ್ತದೆ. ಯಕೃತ್ತಿನ ಕಾಯಿಲೆ ಅತಿಯಾದ ಜೊಲ್ಲಿನ ಉತ್ಪತ್ತಿಗೆ ಕಾರಣವಾಗಬಲ್ಲದು.

►ಬಾಯಿ ಸೋಂಕುಗಳು

ಟಾನ್ಸಿಲಿಟಿಸ್ ಅಥವಾ ಗಲಗ್ರಂಥಿಯ ಉರಿಯೂತದಂತಹ ಸೋಂಕುಗಳು ಅತಿಯಾದ ಜೊಲ್ಲಿನ ಉತ್ಪತ್ತಿಗೆ ಕಾರಣವಾಗುತ್ತವೆ. ಇವು ಬಾಯಿಯ ಸರ್ಪಸುತ್ತಿನಂತಹ ವೈರಲ್ ಸೋಂಕುಗಳ ರೂಪದಲ್ಲಿಯೂ ಇರಬಹುದು.

►ಸೆರೊಟೋನಿನ್ ಸಿಂಡ್ರೋಮ್

ಸೆರೊಟೋನಿನ್ ಶರೀರದಲ್ಲಿ ಉತ್ಪಾದನೆಯಾಗುವ ರಾಸಾಯನಿಕವಾಗಿದ್ದು,ಇದು ಮಿದುಳು ಕೋಶಗಳು ಮತ್ತು ನರಮಂಡಳದ ಕೋಶಗಳ ನಡುವಿನ ಸಂವಹನವನ್ನು ಸಾಧ್ಯವಾಗಿಸುತ್ತದೆ. ಮಿದುಳಿನಲ್ಲಿ ಸೆರೊಟೋನಿನ್ ಅಲ್ಪ ಪ್ರಮಾಣದಲ್ಲಿದ್ದರೆ ಅದು ಖಿನ್ನತೆಗೆ ಕಾರಣವಾಗುತ್ತದೆ ಎನ್ನಲಾಗಿದೆ. ಇದು ಅತಿಯಾದ ಪ್ರಮಾಣದಲ್ಲಿದ್ದರೆ ನರಕೋಶಗಳ ಅತಿಶಯ ಚಟುವಟಿಕೆಗಳಿಗೆ ಕಾರಣವಾಗುತ್ತದೆ ಮತ್ತು ಸೆರೊಟೋನಿನ್ ಸಿಂಡ್ರೋಮ್‌ನ್ನುಂಟು ಮಾಡುತ್ತದೆ. ಇದು ಜೀವಕ್ಕೆ ಅಪಾಯಕಾರಿಯೂ ಆಗಬಹುದು. ಈ ಸ್ಥಿತಿಯಲ್ಲಿ ರೋಗಿಯು ಮಾನಸಿಕ ಬದಲಾವಣೆಗಳು,ನರಸ್ನಾಯುಕ ಅತಿಕ್ರಿಯಾಶೀಲತೆ ಮತ್ತು ಸ್ವನಿಯಂತ್ರಿತ ಅಸ್ಥಿರತೆಯನ್ನೆದುರಿಸುತ್ತಿರುತ್ತಾನೆ. ಈ ಸಮಸ್ಯೆಯಿರುವ ರೋಗಿಗಳಲ್ಲಿ ಜೊಲ್ಲು ಸುರಿಯುವಿಕೆ ಸಾಮಾನ್ಯವಾಗಿದೆ.

ಹೈಪರ್‌ಸಲೈವೇಶನ್‌ಗೆ ಚಿಕಿತ್ಸೆ

ಜೊಲ್ಲು ಸುರಿಯುವಿಕೆಯನ್ನು ನಿಲ್ಲಿಸಬೇಕಿದ್ದರೆ ಅದಕ್ಕೆ ಕಾರಣವಾಗಿರುವ ಅನಾರೋಗ್ಯಕ್ಕೆ ಚಿಕಿತ್ಸೆ ನೀಡುವುದು ಅಗತ್ಯವಾಗುತ್ತದೆ. ರೋಗಿಯ ಅನಾರೋಗ್ಯವನ್ನು ಅವಲಂಬಿಸಿ ಚಿಕಿತ್ಸೆಯನ್ನು ಆರಂಭಿಸಲಾಗುತ್ತದೆ.

ಯಥೇಚ್ಛ ನೀರಿನ ಸೇವನೆ ಜೊಲ್ಲಿನ ಉತ್ಪತ್ತಿಯನ್ನು ತಗ್ಗಿಸುವಲ್ಲಿ ಪರಿಣಾಮಕಾರಿಯಾಗಿದೆ. ವೌತ್‌ವಾಷ್‌ನಿಂದ ಬಾಯಿ ಮುಕ್ಕಳಿಸಿದರೆ ತಾತ್ಕಾಲಿಕವಾಗಿ ಬಾಯಿಯನ್ನು ಒಣದಾಗಿರಿಸಲು ನೆರವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News