ಮೂರು ವರ್ಷಗಳಲ್ಲಿ ಮಾವೋವಾದಿಗಳ ಹಿಂಸಾಚಾರಕ್ಕೆ ಅಂತ್ಯ: ರಾಜ್‌ನಾಥ್ ಸಿಂಗ್
ಲಕ್ನೊ, ಅ.7: ಮಾವೋವಾದಿ, ತೀವ್ರವಾದಿಗಳ ಹಿಂಸಾಚಾರ ಮತ್ತು ಬೆದರಿಕೆಯನ್ನು ಮೂರು ವರ್ಷದೊಳಗೆ ದೇಶದಿಂದ ನಿವಾರಿಸಲಾಗುವುದು ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಈ ಹಿಂದೆ ದೇಶದಲ್ಲಿ ಮಾವೋವಾದಿಗಳ ಹಿಂಸೆಯಿಂದ 126 ಜಿಲ್ಲೆಗಳು ಬಾಧಿತವಾಗಿದ್ದರೆ ಈಗ 10ರಿಂದ 12ಕ್ಕೆ ಇಳಿದಿದೆ ಎಂದು ಸಿಂಗ್ ಹೇಳಿದರು.
ಲಕ್ನೊದ ಸಿಆರ್‌ಪಿಎಫ್ ಶಿಬಿರದಲ್ಲಿ ನಡೆದ ಕ್ರಿಪ್ರ ಕಾರ್ಯಪಡೆ (ಆರ್‌ಎಎಫ್)ಯ 26ನೇ ವಾರ್ಷಿಕ ದಿನಾಚರಣೆಯ ಸಂದರ್ಭ ಅವರು ಯೋಧರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಈ ದಿನ ದೂರವಿಲ್ಲ. ಹೆಚ್ಚೆಂದರೆ ಮೂರು ವರ್ಷ ಅಷ್ಟೇ. ಯೋಧರ ದೃಢಸಂಕಲ್ಪ, ಶೌರ್ಯ ಹಾಗೂ ಕಠಿಣ ಪರಿಶ್ರಮದಿಂದ ಹಾಗೂ ರಾಜ್ಯದ ಪೊಲೀಸರ ಸಹಾಯದಿಂದ ಮಾವೋವಾದಿಗಳ ಬೆದರಿಕೆಯನ್ನು ನಿವಾರಿಸಲಾಗುವುದು. ಈ ವರ್ಷ ಸಿಆರ್‌ಪಿಎಫ್ ಪಡೆಗಳು 131 ಮಾವೋವಾದಿಗಳನ್ನು ಹಾಗೂ ಭಯೋತ್ಪಾದಕರನ್ನು ಹತ್ಯೆಗೈದಿದ್ದು, 1,278 ಮಂದಿಯನ್ನು ಬಂಧಿಸಿದ್ದು 58 ಮಂದಿ ಶರಣಾಗಿದ್ದಾರೆ ಎಂದು ಸಿಂಗ್ ತಿಳಿಸಿದರು.
ಜಮ್ಮು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ ಮತ್ತು ಹೀಗೆಯೇ ಮುಂದುವರಿಯಲಿದೆ. ರಾಜ್ಯದ ಕೆಲವು ಯುವಜನರ ದಾರಿತಪ್ಪಿಸಿ ಅವರನ್ನು ಉಗ್ರರ ಸಂಘಟನೆಗೆ ಸೇರಿಸಿಕೊಳ್ಳಲಾಗಿದೆ. ಆದರೂ ನಮ್ಮ ಧೀರ ಸೇನಾಪಡೆ ರಾಜ್ಯದಲ್ಲಿ ಗಮನಾರ್ಹ ಪ್ರಮಾಣದಲ್ಲಿ ಶಾಂತಿ, ಸುರಕ್ಷೆ ನೆಲೆಸಲು ಕಾರಣವಾಗಿದೆ ಎಂದು ಶ್ಲಾಘಿಸಿದರು. ಕ್ಷಿಪ್ರ ಕಾರ್ಯಪಡೆಯವರು ತ್ವರಿತ ಹಾಗೂ ಸಕಾಲಿಕ ಕ್ರಮ ಕೈಗೊಳ್ಳಬೇಕು ಆದರೆ ನಿರ್ಲಕ್ಷದಿಂದ ಇರಬಾರದು. ಒಂದು ವೇಳೆ ಯಾವುದೇ ವ್ಯಕ್ತಿ ಭಯೋತ್ಪಾದಕ ಕೃತ್ಯದಲ್ಲಿ ತೊಡಗಿದ್ದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು ಎಂದು ಯೋಧರಿಗೆ ಕಿವಿ ಮಾತು ಹೇಳಿದರು.