ಆಯುಷ್ಮಾನ್ ಭಾರತ್ ಯೋಜನೆ: ಎರಡನೇ ಬಾರಿ ಚಿಕಿತ್ಸೆಗೆ ಆಧಾರ್ ಕಡ್ಡಾಯ

Update: 2018-10-07 14:51 GMT

ಹೊಸದಿಲ್ಲಿ, ಅ.7: ಇತ್ತೀಚೆಗೆ ಅನುಷ್ಠಾನಗೊಳಿಸಲಾದ ಆಯುಷ್ಮಾನ್ ಭಾರತ್- ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ(ಪಿಎಂಜೆಎವೈ)ಯ ಪ್ರಯೋಜನವನ್ನು ಪ್ರಥಮ ಬಾರಿಗೆ ಪಡೆಯಲು ಆಧಾರ್ ಕಡ್ಡಾಯವಲ್ಲ. ಆದರೆ ಎರಡನೇ ಬಾರಿ ಆಧಾರ್ ಕಡ್ಡಾಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಧಾರ್ ಸಂಖ್ಯೆ ದೊರಕಿರದಿದ್ದಲ್ಲಿ ತಾವು ಆಧಾರ್ ಕಾರ್ಡ್ ಪಡೆಯಲು ನೋಂದಣಿ ಮಾಡಿಕೊಂಡಿರುವುದನ್ನು ದೃಢಪಡಿಸಲು ಪೂರಕ ದಾಖಲೆಗಳನ್ನು ಒದಗಿಸಬೇಕು ಎಂದು ರಾಷ್ಟ್ರೀಯ ಆರೋಗ್ಯ ಮಂಡಳಿ(ಎನ್‌ಎಚ್‌ಎ)ಯ ಸಿಇಒ ಇಂದು ಭೂಷಣ್ ತಿಳಿಸಿದ್ದಾರೆ. ಪಿಎಂಜೆಎವೈಯ ಅನುಷ್ಠಾನದ ಹೊಣೆಯನ್ನು ರಾಷ್ಟ್ರೀಯ ಆರೋಗ್ಯ ಮಂಡಳಿಗೆ ವಹಿಸಲಾಗಿದೆ. ಆಧಾರ್ ಯೋಜನೆಗೆ ಸಾಂವಿಧಾನಿಕ ಮಾನ್ಯತೆಯನ್ನು ಸುಪ್ರೀಂಕೋರ್ಟ್ ನೀಡಿದ್ದು ಸುಪ್ರೀಂಕೋರ್ಟ್‌ನ ಆದೇಶವನ್ನು ಅಧ್ಯಯನ ಮಾಡುತ್ತಿದ್ದೇವೆ. ಪಿಎಂಜೆಎವೈಯಡಿ ಪ್ರಥಮ ಬಾರಿಗೆ ಸೌಲಭ್ಯ ಪಡೆದುಕೊಳ್ಳಲು ಆಧಾರ ಅಥವಾ ಮತದಾರರ ಗುರುತು ಪತ್ರದಂತಹ ಯಾವುದೇ ದಾಖಲೆಗಳಿದ್ದರೆ ಸಾಕಾಗುತ್ತದೆ ಎಂದು ಇಂದು ಭೂಷಣ್ ತಿಳಿಸಿದ್ದಾರೆ.

ಸೆ.23ರಂದು ಪ್ರಧಾನಿ ಮೋದಿ ಚಾಲನೆ ನೀಡಿರುವ ಪಿಎಂಜೆಎವೈ ವಿಶ್ವದ ಬೃಹತ್ ಆರೋಗ್ಯ ಸುರಕ್ಷಾ ಯೋಜನೆ ಎನಿಸಿದ್ದು ಇದುವರೆಗೆ 47 ಸಾವಿರಕ್ಕೂ ಹೆಚ್ಚು ಮಂದಿ ಇದರ ಪ್ರಯೋಜನ ಪಡೆದಿದ್ದಾರೆ ಎಂದು ಎನ್‌ಎಚ್‌ಎ ಸಹಾಯಕ ಸಿಇಒ ದಿನೇಶ್ ಅರೋರಾ ತಿಳಿಸಿದ್ದಾರೆ. ಕುಟುಂಬದ ಸದಸ್ಯರ ಸಂಖ್ಯೆ ಅಥವಾ ಪ್ರಾಯವನ್ನು ಪರಿಗಣಿಸದೆ ಸುಮಾರು 50 ಕೋಟಿ ಜನತೆಯನ್ನು ಯೋಜನೆಯಡಿ ತರುವ ಉದ್ದೇಶವಿದೆ ಎಂದು ಅರೋರಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News