ಉ.ಪ್ರ. ಸಿಎಂ ಕಚೇರಿಯನ್ನು ಲೋಕಾಯುಕ್ತ ಕಾಯ್ದೆ ವ್ಯಾಪ್ತಿಗೆ ತರುವಂತೆ ಆಗ್ರಹಿಸಿ ಸುಪ್ರೀಂಗೆ ಮನವಿ
ಹೊಸದಿಲ್ಲಿ, ಅ. 7: ರಾಜ್ಯ ಒಂಬುಡ್ಸ್‌ಮನ್ ಲೋಕಾಯುಕ್ತದ ವ್ಯಾಪ್ತಿ ಅಡಿಯಲ್ಲಿ ಮುಖ್ಯಮಂತ್ರಿ ಅವರ ಕಚೇರಿ ತರಲು ಕಾಯ್ದೆ ತಿದ್ದುಪಡಿ ಮಾಡಲು ಉತ್ತರಪ್ರದೇಶ ಸರಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಲಾಗಿದೆ. 1975ರ ಉತ್ತರಪ್ರದೇಶ ಲೋಕಾಯುಕ್ತ ಹಾಗೂ ಯುಪಿ ಲೋಕಾಯುಕ್ತ ಕಾಯ್ದೆಯ ಈಗಿರುವ ಸ್ಥಿತಿ ಕಾಯ್ದೆ ರೂಪಿಸುವಾಗ ಇದ್ದ ಉದ್ದೇಶ ಈಡೇರಿಸುತ್ತಿಲ್ಲ ಎಂದು ಮನವಿ ಹೇಳಿದೆ.
ಭ್ರಷ್ಟಾಚಾರದ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಮುಖ್ಯಮಂತ್ರಿ ಅವರನ್ನು ಒಂಬುಡ್ಸ್‌ಮನ್‌ನ ವ್ಯಾಪ್ತಿ ಅಡಿ ತರಲು 43 ವರ್ಷ ಹಳೆಯ ರಾಜ್ಯ ಕಾಯ್ದೆಗೆ ತಿದ್ದುಪಡಿ ತರಲು ನಿರ್ದೇಶಿಸುವಂತೆ ಕೋರಿ ನ್ಯಾಯವಾದಿ ಶಿವ ಕುಮಾರ್ ತ್ರಿಪಾಠಿ ಸಾರ್ವಜನಿಕ ಹಿತಾಸಕ್ತಿ ದಾವೆ ಸಲ್ಲಿಸಿದ್ದಾರೆ. ಸ್ವಜನ ಪಕ್ಷಪಾತ, ಬದ್ಧತೆಯ ಕೊರತೆ ಹಿನ್ನೆಲೆಯಲ್ಲಿ ತಪ್ಪೆಸಗಿರುವುದು ಕಂಡು ಬಂದರೆ ಮುಖ್ಯಮಂತ್ರಿ ವಿರುದ್ಧ ಯಾವುದೇ ಭ್ರಷ್ಟಾಚಾರದ ಕ್ರಮ ತೆಗೆದುಕೊಳ್ಳಲು ಉತ್ತರಪ್ರದೇಶದ ಲೋಕಾಯುಕ್ತಕ್ಕೆ ಅವಕಾಶವಿಲ್ಲ. ಆದುದರಿಂದ ಭ್ರಷ್ಟಾಚಾರದ ಸಂದರ್ಭ ಮುಖ್ಯಮಂತ್ರಿ ಅವರ ವಿರುದ್ಧ ಕೂಡ ಕ್ರಮ ಕೈಗೊಳ್ಳಲು ಸಾಧ್ಯವಾಗುವಂತೆ ಕಾಯ್ದೆ ತಿದ್ದುಪಡಿ ಮಾಡಬೇಕಾದ ಅಗತ್ಯತೆ ಇದೆ ಎಂದು ಮನವಿ ಹೇಳಿದೆ.
ರಾಜ್ಯ ಕಾಯ್ದೆ ಅಡಿ ಸ್ಥಾಪಿಸಲಾದ ರಾಜ್ಯ, ಸ್ವಾಯತ್ತ ಹಾಗೂ ಖಾಸಗಿ ಸಂಸ್ಥೆ, ಸಮಿತಿ, ಮಂಡಳಿ, ಆಯೋಗಗಳಂತಹ ಸಂಸ್ಥೆಗಳನ್ನು ಲೋಕಾಯುಕ್ತ ಕಾನೂನಿನ ಅಡಿ ತರಲು ನಿರ್ದೇಶನ ನೀಡುವಂತೆ ಕೂಡ ಮನವಿ ಕೋರಿದೆ. ಲೋಕಾಯುಕ್ತಕ್ಕೆ ‘ಶೋಧ ಹಾಗೂ ವಶ’ಕ್ಕೆ ಅಲ್ಲದೆ, ಪ್ರಕರಣಗಳ ತನಿಖೆ ನಡೆಸುವ ರಾಜ್ಯ ಪೊಲೀಸರ ಆಡಳಿತಾತ್ಮಕ ನಿಯಂತ್ರಣಕ್ಕೆ ಅಧಿಕಾರ ನೀಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.