ಉಪಕುಲಪತಿ ನೇಮಕಾತಿಯಲ್ಲಿ ಕೋಟಿಗಟ್ಟಲೆ ಲಂಚ: ತಮಿಳುನಾಡು ರಾಜ್ಯಪಾಲರ ಆರೋಪ
ಚನ್ನೈ, ಅ. 7: ತಾನು ಅಧಿಕಾರ ಸ್ವೀಕರಿಸುವ ಮೊದಲು ವಿಶ್ವವಿದ್ಯಾನಿಲಯದ ಉಪ ಕುಲಪತಿ ನೇಮಕಕ್ಕೆ ಕೋಟಿಗಟ್ಟಲೆ ರೂಪಾಯಿ ಕೈ ಬದಲಾಗಿದೆ ಎಂದು ತಮಿಳುನಾಡಿನ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಆರೋಪಿಸಿದ್ದಾರೆ.
ಅವರ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸಿರುವ ಎಐಎಡಿಎಂಕೆ, ಉಪ ಕುಲಪತಿ ನೇಮಕದಲ್ಲಿ ನಮ್ಮ ಪಾತ್ರವಿಲ್ಲ ಎಂದು ಹೇಳಿದೆ. ಉಪ ಕುಲಪತಿ ನೇಮಕದಲ್ಲಿ ಕೋಟಿಗಟ್ಟಲೆ ಹಣ ಕೈ ಬದಲಾಗಿದೆ. ಅದಕ್ಕಾಗಿ ನಾನು ಬದಲಾವಣೆ ತರಬೇಕು ಎಂದು ನಿರ್ಧರಿಸಿದೆ ಎಂದು ಶಿಕ್ಷಣಕ್ಕೆ ಸಂಬಂಧಿಸಿ ಕಾರ್ಯಕ್ರಮವೊಂದರಲ್ಲಿ ಪುರೋಹಿತ್ ಹೇಳಿದ್ದಾರೆ. “ನಾನು ಇದುವರೆಗೆ 9 ಮಂದಿ ಉಪ ಕುಲಪತಿಗಳನ್ನು ಕೇವಲ ಮೆರಿಟ್ ಆಧಾರದಲ್ಲಿ ಆಯ್ಕೆ ಮಾಡಿದ್ದೇನೆ. ನನ್ನ ವಿರುದ್ಧ ಯಾರೊಬ್ಬರೂ ಬೆರಳು ತೋರಿಸಿಲ್ಲ. ಉಪ ಕುಲಪತಿಯಿಂದ ಶಾಲೆಯ ಅದ್ಯಾಪಕರ ವರೆಗೆ ಎಲ್ಲ ನೇಮಕಾತಿಗಳು ಮೆರಿಟ್ ಮೇಲೆ ನಡೆದಿದೆ. ಅದಕ್ಕಾಗಿ ತಮಿಳುನಾಡು ಜನರು ನನ್ನನ್ನು ಪ್ರಶಂಸಿಸುತ್ತಾರೆ” ಎಂದು ಅವರು ಹೇಳಿದರು.
ರಾಜ್ಯ ಸ್ವಾಮಿತ್ವದ ವಿಶ್ವವಿದ್ಯಾನಿಲಯಗಳಲ್ಲಿ ಉಪ ಕುಲಪತಿಗಳ ನೇಮಕ ಕುರಿತಂತೆ ಎಐಎಡಿಎಂಕೆ ಸರಕಾರದ ವಿರುದ್ಧ ಪ್ರತಿಪಕ್ಷದ ಟೀಕೆಗೆ ರಾಜ್ಯಪಾಲರ ಅಭಿಪ್ರಾಯ ಶಕ್ತಿ ನೀಡಿದೆ. ತಮಿಳುನಾಡಿನ ವಿಶ್ವವಿದ್ಯಾನಿಲಯಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಪಿಎಂಕೆ ಕಳೆದ ಫೆಬ್ರವರಿಯಲ್ಲಿ ಆಗ್ರಹಿಸಿತ್ತು.