ದೇಶದ ಜನತೆ ನೀಡುವ ಉಪತೆರಿಗೆಯನ್ನು ಅಸಮರ್ಪಕವಾಗಿ ಬಳಸಿದ ಸರಕಾರ: ವಿತ್ತ ಸಚಿವಾಲಯದ ವರದಿಯಿಂದ ಬಹಿರಂಗ

Update: 2018-10-07 16:32 GMT

ಹೊಸದಿಲ್ಲಿ, ಅ.7: ಶಿಕ್ಷಣ ಉಪತೆರಿಗೆ , ಕೃಷಿ ಕಲ್ಯಾಣ ಉಪತೆರಿಗೆ, ಸ್ವಚ್ಛ ಭಾರತ ಉಪತೆರಿಗೆ ಇತ್ಯಾದಿಗಳ ರೂಪದಲ್ಲಿ ಜನತೆ ನೀಡುವ ಸಣ್ಣಮೊತ್ತದ ಶುಲ್ಕ ಕಳೆದ ಹಲವು ವರ್ಷಗಳಿಂದ ಬೃಹತ್ ಮೊತ್ತವಾಗಿ ಬೆಳೆದಿದೆ. ಆದರೆ ಈ ಮೊತ್ತದಲ್ಲಿ ಗಣನೀಯ ಪ್ರಮಾಣದ ಹಣವನ್ನು ಸರಕಾರ ಸಂಪೂರ್ಣ ಬಳಸಿಕೊಂಡಿಲ್ಲ ಎಂಬುದು ವಿತ್ತ ಸಚಿವಾಲಯದ ಮಾಹಿತಿಯಲ್ಲಿ ತಿಳಿದುಬಂದಿದೆ.

2016-17ರಲ್ಲಿ ಉಪಕರ(ಉಪತೆರಿಗೆ) ರೂಪದಲ್ಲಿ 1,78,594 ಕೋಟಿ ರೂ. ಹಣ ಸಂಗ್ರಹವಾಗಿದೆ. ಆದರೆ ಇದರಲ್ಲಿ ಕೇವಲ 1,00,871 ಕೋಟಿ ರೂ. ಮೊತ್ತ ಮಾತ್ರ ಬಳಕೆಯಾಗಿದೆ. ಸಂಗ್ರಹಿಸಲಾದ ಉಪಕರವನ್ನು ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣಕ್ಕೆ ಬಳಸಿಕೊಳ್ಳದ ಬಗ್ಗೆ ಸಿಎಜಿ(ನಿಯಂತ್ರಕ ಮತ್ತು ಮಹಾಲೆಕ್ಕ ಪರಿಶೋಧಕರ) ವರದಿಯಲ್ಲೂ ಉಲ್ಲೇಖಿಸಲಾಗಿದೆ. ಜನತೆಯಿಂದ ಹೆಚ್ಚುವರಿ ಹಣ ಸಂಗ್ರಹಿಸುವ ಮಾಧ್ಯಮವಾಗಿರುವ ಉಪಕರದ ಮೂಲಕ ಸಂಗ್ರಹಿಸಲಾಗುವ ಮೊತ್ತ ಸಮರ್ಪಕವಾಗಿ ಬಳಕೆಯಾಗಬೇಕು. ಇಲ್ಲದಿದ್ದರೆ ಇದು ಜನತೆಯ ಮೇಲೆ ಹೊರಿಸಲಾದ ಅನವಶ್ಯಕ ಹೊರೆಯಾಗಿರುತ್ತದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಉಪತೆರಿಗೆಯು ಆದಾಯವನ್ನು ಹೆಚ್ಚಿಸುವ ಕ್ರಮವಾಗಿದೆ. ಕಾರ್ಪೊರೇಟ್ ಕ್ಷೇತ್ರಕ್ಕೆ ಸರಕಾರ ಲಕ್ಷಾಂತರ ಕೋಟಿ ರೂ.ಗಳಷ್ಟು ವಿನಾಯಿತಿ ನೀಡುತ್ತದೆ. ಇನ್ನೊಂದೆಡೆ ಜನಸಾಮಾನ್ಯರ ಮೇಲೆ ಹೆಚ್ಚುವರಿ ಉಪತೆರಿಗೆ ವಿಧಿಸುತ್ತದೆ. ಸಮಾಜದ ತಳಹಂತದಿಂದ ಹಣವನ್ನು ಎಳೆದು ತೆಗೆದು ಎತ್ತರದ ಹಂತಕ್ಕೆ ವರ್ಗಾಯಿಸಿದಂತಾಗುತ್ತದೆ. ಜನಸಾಮಾನ್ಯರಿಂದ ಉಪಕರದ ರೂಪದಲ್ಲಿ ಹಣವನ್ನು ಹೀರಿ ತೆಗೆಯಲಾಗುತ್ತದೆ ಎಂದು ಕೃಷಿ ನೀತಿ ತಜ್ಞ ದೇವಿಂದರ್ ಶರ್ಮ ಹೇಳುತ್ತಾರೆ.

ಉಪಕರದ ಅಸಮರ್ಪಕ ಬಳಕೆಯ ಬಗ್ಗೆ ಸಂಸದೀಯ ಸ್ಥಾಯಿ ಸಮಿತಿಯ ವರದಿಯಲ್ಲೂ ಉಲ್ಲೇಖಿಸಲಾಗಿದೆ. ಗೊತ್ತುಪಡಿಸಿದ ಉದ್ದೇಶಕ್ಕಾಗಿ ಸಂಗ್ರಹಿಸುವ ಉಪಕರವನ್ನು ಆ ಉದ್ದೇಶಕ್ಕಾಗಿ ಬಳಸಿಕೊಳ್ಳದಿದ್ದರೆ ಅರ್ಥವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ ಎಂದು ಸಮಿತಿಯ ವರದಿಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News