ಸೌದಿಯ ಭದ್ರತೆಗಾಗಿ ಅಮೆರಿಕಕ್ಕೆ ಹಣ ನೀಡಬೇಕಾದ ಅಗತ್ಯ ನಮಗಿಲ್ಲ: ಟ್ರಂಪ್ ಗೆ ರಾಜಕುಮಾರ ಸಲ್ಮಾನ್ ತಿರುಗೇಟು

Update: 2018-10-07 17:19 GMT

ರಿಯಾದ್, ಅ.7: ಅಮೆರಿಕದ ಸೇನಾ ನೆರವಿಲ್ಲದೆ ಸೌದಿ ಎರಡು ವಾರಕ್ಕಿಂತ ಹೆಚ್ಚು ಕಾಲ ಅಧಿಕಾರದಲ್ಲಿರದು ಎಂಬ ಅಮೆರಿಕದ ಅಧ್ಯಕ್ಷ ಟ್ರಂಪ್ ಹೇಳಿಕೆಗೆ ಇದಿರೇಟು ನೀಡಿರುವ ಸೌದಿಯ ರಾಜಕುಮಾರ ಸಲ್ಮಾನ್ ದೇಶದ ಭದ್ರತೆಗಾಗಿ ಸೌದಿ ಅರೇಬಿಯಾ ಅಮೆರಿಕಕ್ಕೆ ಏನನ್ನೂ ನೀಡುವುದಿಲ್ಲ ಎಂದು ಹೇಳಿದ್ದಾರೆಂದು presstv.com ವರದಿ ಮಾಡಿದೆ.

ನಮ್ಮ ಭದ್ರತೆಗಾಗಿ ಅಮೆರಿಕಕ್ಕೆ ಏನನ್ನೂ ನೀಡಬೇಕಾದ ಅಗತ್ಯ ನಮಗಿಲ್ಲ. ಅಮೆರಿಕದಿಂದ ಪಡೆದಿರುವ ಶಸ್ತ್ರಾಸ್ತ್ರಗಳಿಗೆ ನಾವು ಹಣ ಪಾವತಿಸಿದ್ದೇವೆ ಎಂಬ ವಿಶ್ವಾಸವಿದೆ. ಇದು ಉಚಿತವಾಗಿ ಪಡೆದಿರುವ ಅಸ್ತ್ರಗಳಲ್ಲ ಎಂದು ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸಲ್ಮಾನ್ ಹೇಳಿದರು.

ಸೌದಿ ಅರೇಬಿಯಾ ತನ್ನ ಭದ್ರತೆಯ ದೃಷ್ಟಿಯಿಂದ ಅಮೆರಿಕಕ್ಕೆ ಇನ್ನೂ ಹೆಚ್ಚು ಪಾವತಿಸುವ ಅಗತ್ಯವಿದೆಯೇ ಎಂಬ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು. ಸೌದಿ ಮತ್ತು ಅಮೆರಿಕದ ಮಧ್ಯೆ ಸಂಬಂಧ ಆರಂಭವಾದಂದಿನಿಂದಲೂ ನಾವು ಎಲ್ಲವನ್ನೂ ಹಣ ಕೊಟ್ಟೇ ಪಡೆದಿದ್ದೇವೆ. ಟ್ರಂಪ್ ಅಧಿಕಾರಕ್ಕೆ ಬಂದಂದಿನಿಂದ ಸೌದಿಯು ತನಗೆ ಅಗತ್ಯವಿರುವ ಶಸ್ತ್ರಾಸ್ತ್ರಗಳ ಪೈಕಿ ಶೇ.60ಕ್ಕೂ ಹೆಚ್ಚು ಶಸ್ತ್ರಾಸ್ತ್ರವನ್ನು ಅಮೆರಿಕದಿಂದಲೇ ಖರೀದಿಸುತ್ತಿದೆ ಎಂದವರು ಹೇಳಿದರು. ಸೌದಿಯು ಅಮೆರಿಕದಿಂದ 110 ಬಿಲಿಯನ್ ಡಾಲರ್ ಮೊತ್ತದ ಅಮೆರಿಕದ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಒಪ್ಪಂದ ಮಾಡಿಕೊಂಡಿದೆ. ಅಲ್ಲದೆ ಸುಮಾರು 400 ಬಿಲಿಯನ್ ಡಾಲರ್ ಮೊತ್ತದ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು. ಈ ಶಸ್ತ್ರಾಸ್ತ್ರಗಳ ಪೈಕಿ ಅರ್ಧದಷ್ಟು ಸೌದಿಯಲ್ಲಿ ಉತ್ಪಾದನೆಯಾಗಬೇಕೆಂದು ಒಪ್ಪಂದದಲ್ಲಿ ತಿಳಿಸಲಾಗಿದೆ. ಇದರಿಂದ ಎರಡೂ ದೇಶಗಳಲ್ಲಿ ಉದ್ಯೋಗಾವಕಾಶ ಹೆಚ್ಚುತ್ತದೆ. ಒಪ್ಪಂದದಿಂದ ಎರಡೂ ದೇಶಗಳಿಗೆ ಲಾಭವಾಗುತ್ತದೆ ಎಂದರು. ಬುಧವಾರ ಪತ್ರಿಕೆಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಸೌದಿಯ ರಾಜಕುಮಾರ ಹೇಳಿದ ಮಾತುಗಳು ಶುಕ್ರವಾರದ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News