ಪ್ರೊ ಕಬಡ್ಡಿ ಲೀಗ್: ತಮಿಳ್ ತಲೈವಾಸ್ ಶುಭಾರಂಭ

Update: 2018-10-07 18:36 GMT

ಚೆನ್ನೈ, ಅ.7: ಹಾಲಿ ಚಾಂಪಿಯನ್ ಪಾಟ್ನಾ ಪೈರೇಟ್ಸ್ ತಂಡವನ್ನು 42-26 ಅಂತರದಿಂದ ಮಣಿಸಿದ ಆತಿಥೇಯ ತಮಿಳ್ ತಲೈವಾಸ್ ರವಿವಾರ ಇಲ್ಲಿ ಆರಂಭವಾದ ಪ್ರೊ ಕಬಡ್ಡಿ ಲೀಗ್‌ನ ಮೊದಲ ಪಂದ್ಯದಲ್ಲಿ ಜಯ ಸಾಧಿಸಿ ಶುಭಾರಂಭ ಮಾಡಿದೆ.

5ನೇ ಆವೃತ್ತಿ ಲೀಗ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ತಮಿಳ್ ತಂಡ ಪರ ನಾಯಕ ಅಜಯ್ ಠಾಕೂರ್ ಒಟ್ಟು 14 ರೈಡ್ ಪಾಯಿಂಟ್ಸ್ ಪಡೆದರು. ಸಹ ರೈಡರ್ ಸುರ್ಜೀತ್ ಸಿಂಗ್ 7 ಅಂಕ ಗಳಿಸಿದರು.

ಸತತ 4ನೇ ಪ್ರಶಸ್ತಿ ಗೆಲ್ಲುವತ್ತ ಚಿತ್ತವಿರಿಸಿರುವ ಪಾಟ್ನಾ ತಂಡ ಮೊದಲ ಅವಧಿಯಲ್ಲಿ ಸಂಪೂರ್ಣ ಹಿಡಿತ ಕಳೆದುಕೊಂಡಿತು. ಎರಡು ಬಾರಿ ಆಲೌಟಾಯಿತು. ಏಕಪಕ್ಷೀಯವಾಗಿ ಸಾಗಿದ ಪಂದ್ಯದಲ್ಲಿ 16 ಅಂಕಗಳಿಂದ ಸೋಲುಂಡಿತು. ಇದೇ ವೇಳೆ, ಯು ಮುಂಬಾ-ಪುಣೇರಿ ಪಲ್ಟನ್ ನಡುವೆ ನಡೆದ ಮತ್ತೊಂದು ಪಂದ್ಯ 32-32 ರಿಂದ ರೋಚಕ ಡ್ರಾಗೊಂಡಿದೆ. ಉಭಯ ತಂಡಗಳು ತಲಾ 3 ಅಂಕವನ್ನು ಹಂಚಿಕೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News