ಏರ್‌ಸೆಲ್ ಮ್ಯಾಕ್ಸಿಸ್ ಪ್ರಕರಣ: ಚಿದಂಬರಂ, ಕಾರ್ತಿಗೆ ಬಂಧನದಿಂದ ರಕ್ಷಣೆ ವಿಸ್ತರಣೆ
ಹೊಸದಿಲ್ಲಿ, ಅ. 8: ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ ದಾಖಲಿಸಿದ ಏರ್‌ಸೆಲ್-ಮ್ಯಾಕ್ಸಿಸ್ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಹಾಗೂ ಅವರ ಪುತ್ರ ಕಾರ್ತಿ ಅವರನ್ನು ಬಂಧಿಸದಂತೆ ನೀಡಿದ ಮಧ್ಯಂತರ ರಕ್ಷಣೆಯನ್ನು ದಿಲ್ಲಿ ಉಚ್ಚ ನ್ಯಾಯಾಲಯ ನವೆಂಬರ್ 1ರ ವರೆಗೆ ವಿಸ್ತರಿಸಿದೆ.
ಪ್ರಕರಣ ಮುಂದೂಡುವಂತೆ ತನಿಖಾ ಸಂಸ್ಥೆಗಳ ಪರ ನ್ಯಾಯಾಲಯಕ್ಕೆ ಹಾಜರಾಗಿದ್ದ ನ್ಯಾಯವಾದಿ ಪ್ರತಿಪಾದಿಸಿದ ಬಳಿಕ ಸಿಬಿಐ ವಿಶೇಷ ನ್ಯಾಯಮೂರ್ತಿ ಒ.ಪಿ. ಸಹಾನಿ ವಿಚಾರಣೆಯನ್ನು ನವೆಂಬರ್ 1ಕ್ಕೆ ಮುಂದೂಡಿದರು. ವಿವರ ಪ್ರತಿಕ್ರಿಯೆಗೆ ಸಮಯಾವಕಾಶದ ಅಗತ್ಯತೆ ಇದೆ ಎಂದು ಸಿಬಿಐ ಹಾಗೂ ಜಾರಿ ನಿರ್ದೇಶನಾಲಯದ ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹಾಗೂ ನಿತೇಶ್ ರಾಣಾ ನ್ಯಾಯಾಲಯಕ್ಕೆ ತಿಳಿಸಿದರು ಹಾಗೂ ವಕೀಲ ಪಿ.ಕೆ. ದುಬೆ ಹಾಗೂ ಅರ್ಶದ್ ದೀಪ್ ಮೂಲಕ ಸಲ್ಲಿಸಿದ ಮನವಿಯ ಕುರಿತು ವಾದಿಸಿದರು. ಈ ಪ್ರಕರಣಕ್ಕೆ ಸಂಬಂಧಿಸಿ ಜುಲೈ 19ರಂದು ಸಿಬಿಐ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಪಿ. ಚಿದಂಬರಂ ಹಾಗೂ ಅವರ ಪುತ್ರ ಕಾರ್ತಿ ಅವರನ್ನು ಹೆಸರಿಸಲಾಗಿತ್ತು.