ಸುಳ್ಳು ಭರವಸೆ ನೀಡಿಯೇ ನಾವು ಜಯ ಗಳಿಸಿದ್ದು: ನಿತಿನ್ ಗಡ್ಕರಿ ಹೇಳಿಕೆಯ ವೀಡಿಯೊ ವೈರಲ್

Update: 2018-10-08 14:53 GMT

ಹೊಸದಿಲ್ಲಿ, ಅ.8: ಸುಳ್ಳು ಆಶ್ವಾಸನೆಗಳಿಂದಲೇ ಮೋದಿ ಸರಕಾರ ಅಧಿಕಾರಕ್ಕೆ ಬಂದಿದೆ ಎಂದು ಖಾಸಗಿ ಚಾನೆಲ್ ಒಂದರ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್ ಬಿಜೆಪಿಯನ್ನು ಟೀಕಿಸಿದೆ.

ಖಾಸಗಿ ಚಾನೆಲ್ ‘ಕಲರ್ಸ್ ಮರಾಠಿ’ಯ ಕಾರ್ಯಕ್ರಮವೊಂದರಲ್ಲಿ ಬಾಲಿವುಡ್ ನಟ ನಾನಾ ಪಾಟೇಕರ್ ಜೊತೆ ನಿತಿನ್ ಗಡ್ಕರಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ, ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಸುಳ್ಳು ಆಶ್ವಾಸನೆಗಳ ಮೂಲಕ ಅಧಿಕಾರಕ್ಕೆ ಬಂದಿದೆ ಎಂದಿದ್ದಾರೆ.

“ನಮಗೆ ಯಾವತ್ತೂ ಅಧಿಕಾರ ಹಿಡಿಯಲು ಸಾಧ್ಯವಿಲ್ಲ ಎನ್ನುವುದು ತಿಳಿದಿತ್ತು. ಆದ್ದರಿಂದ ದೊಡ್ಡ ದೊಡ್ಡ ಭರವಸೆಗಳನ್ನು ನೀಡುವಂತೆ ಪಕ್ಷದ ಜನರು ಹೇಳಿದರು. ಒಂದು ವೇಳೆ ಅಧಿಕಾರಕ್ಕೆ ಬರದಿದ್ದರೆ, ನಾವು ಅವುಗಳಿಗೆ ಜವಾಬ್ದಾರರಾಗಿರುವುದಿಲ್ಲ. ಆದರೆ ಸಮಸ್ಯೆಯೆಂದರೆ ಈಗ ಜನರು ನಮಗೆ ಅಧಿಕಾರ ನೀಡಿದ್ದಾರೆ” ಎಂದು ನಗುವ ಗಡ್ಕರಿ, “ಈಗ ಜನರು ನಮಗೆ ನಾವು ನೀಡಿದ್ದ ಆಶ್ವಾಸನೆಗಳನ್ನು ನೆನಪಿಸುತ್ತಿದ್ದಾರೆ. ಆದರೆ ನಾವು ಇವುಗಳನ್ನು ಕೇಳಿ ನಕ್ಕು ಮುಂದೆ ಸಾಗುತ್ತೇವೆ” ಎಂದಿದ್ದಾರೆ.

ಕಾರ್ಯಕ್ರಮದಲ್ಲಿ ಗಡ್ಕರಿಯ ಈ ಮಾತುಗಳ ವಿಡಿಯೋವನ್ನು ಟ್ವೀಟ್ ಮಾಡಿರುವ ಕಾಂಗ್ರೆಸ್ ಟ್ವಿಟರ್ ಖಾತೆಯು, “ಮೋದಿ ಸರಕಾರ ಜುಮ್ಲಾಗಳು ಮತ್ತು ಸುಳ್ಳು ಆಶ್ವಾಸನೆಗಳ ಮೇಲೆ ಅಧಿಕಾರದಲ್ಲಿದೆ ಎನ್ನುವ ನಮ್ಮ ದೃಷ್ಟಿಕೋನವನ್ನು ಒಪ್ಪಿದ ನಿತಿನ್ ಗಡ್ಕರಿ” ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News