ದೇಶದಲ್ಲಿರುವ ನಕಲಿ ಲೈಸೆನ್ಸ್ ಗಳು ಎಷ್ಟು ಗೊತ್ತಾ ?
ಮುಂಬೈ, ಅ.8: ದೇಶದಲ್ಲಿರುವ ಶೇ.30ರಷ್ಟು ಡ್ರೈವಿಂಗ್ ಲೈಸೆನ್ಸ್ ನಕಲಿಯಾಗಿದೆ. ಕೆಲವು ಭ್ರಷ್ಟ ಆರ್‌ಟಿಒ ಸಿಬ್ಬಂದಿಗಳು ಯಾವುದೇ ದಾಖಲೆಪತ್ರಗಳ ಪರಿಶೀಲನೆ ನಡೆಸದೆ ಡ್ರೈವಿಂಗ್ ಲೈಸೆನ್ಸ್ ನೀಡುವ ಕಾರಣ ಅಪಘಾತ ಪ್ರಕರಣ ಹೆಚ್ಚಾಗುತ್ತಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಫೆಡರೇಶನ್ ಆಫ್ ಆಟೊ ಡೀಲರ್ಸ್ ಅಸೋಸಿಯೇಷನ್(ಎಫ್‌ಎಡಿಎ)ನ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಾದೇಶಿಕ ಸಾರಿಗೆ ಕಚೇರಿ(ಆರ್‌ಟಿಒ)ಗಳಲ್ಲಿ ನಡೆಯುತ್ತಿರುವ ಅವ್ಯವಹಾರದ ಬಗ್ಗೆ ತನಗೆ ಮಾಹಿತಿಯಿದೆ. ಕೆಲವು ಸಂಸದರು ಭ್ರಷ್ಟ ಅಧಿಕಾರಿಗಳಿಗೆ ನೆರವಾಗುತ್ತಿರುವ ಕಾರಣ ಸಾರಿಗೆ ಕಚೇರಿಗಳಲ್ಲಿ ಭ್ರಷ್ಟಾಚಾರವನ್ನು ಹತ್ತಿಕ್ಕಲು ಸರಕಾರ ನಡೆಸುತ್ತಿರುವ ಪ್ರಯತ್ನಗಳಿಗೆ ಅಡ್ಡಿಯಾಗಿವೆ ಎಂದರು.
ದಾಖಲೆಪತ್ರಗಳ ಪರಿಶೀಲನೆ ನಡೆಸದೆ ಡ್ರೈವಿಂಗ್ ಲೈಸೆನ್ಸ್ ನೀಡಲಾಗುತ್ತಿದೆ. ಇದರಿಂದ ಅಪಘಾತದ ಪ್ರಮಾಣ ಹೆಚ್ಚುತ್ತಿದೆ. ಪ್ರತೀ ವರ್ಷ 5 ಲಕ್ಷ ರಸ್ತೆ ಅಪಘಾತ ನಡೆಯುತ್ತಿದ್ದು ಸುಮಾರು 1.5 ಲಕ್ಷ ಚಾಲಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ವಾಹನ ಕ್ಷೇತ್ರ ಹಾಗೂ ಆರ್‌ಟಿಒಗಳಲ್ಲಿ ಇರುವ ಭ್ರಷ್ಟಾಚಾರವನ್ನು ನಿಯಂತ್ರಿಸಲು ಸರಕಾರ ಮಸೂದೆಯೊಂದನ್ನು ರೂಪಿಸಿದ್ದು ಇದಕ್ಕೆ ಲೋಕಸಭೆ ಅಂಗೀಕಾರ ನೀಡಿದೆ. ರಾಜ್ಯಸಭೆಯಲ್ಲಿ ಅಂಗೀಕಾರ ದೊರಕಬೇಕಿದೆ ಎಂದು ಗಡ್ಕರಿ ತಿಳಿಸಿದರು.
ತೈಲ ಬೆಲೆ ಏರಿಕೆಯನ್ನು ಪ್ರಸ್ತಾವಿಸಿದ ಅವರು, ಸರಕಾರ ಡೀಸೆಲ್ ಬದಲು ಮೆಥನಾಲ್ ಬಳಸಲು ಯೋಚಿಸುತ್ತಿದೆ. ಶೀಘ್ರವೇ ಮುಂಬೈ, ನವಿ ಮುಂಬೈ, ಪುಣೆ, ಗುವಾಹಟಿಗಳಲ್ಲಿ ಮೆಥನಾಲ್ ಇಂಧನ ಬಳಸುವ ತಲಾ 10 ಬಸ್ಸುಗಳು ಸಂಚರಿಸಲಿವೆ ಎಂದರು.