×
Ad

2008ರ ಮಹಾರಾಷ್ಟ್ರ ಬಾಂಬ್ ಸ್ಫೋಟದಲ್ಲಿ ನಮ್ಮ ಪಾತ್ರವಿತ್ತು ಎಂದು ಒಪ್ಪಿಕೊಂಡ ಸನಾತನ ಸಂಸ್ಥೆ ಕಾರ್ಯಕರ್ತರು

Update: 2018-10-08 21:46 IST
ಫೊಟೊ ಕೃಪೆ: www.indiatoday.in

ಮುಂಬೈ,ಅ.8: 2008ರಲ್ಲಿ ಮಹಾರಾಷ್ಟ್ರದ ಚಿತ್ರಮಂದಿರಗಳಲ್ಲಿ ನಡೆದ ಬಾಂಬ್ ಸ್ಫೋಟಗಳಲ್ಲಿ ತಾವೂ ಭಾಗಿಯಾಗಿದ್ದೆವು ಎಂದು ತಾನು ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಸನಾತನ ಸಂಸ್ಥೆಯ ಇಬ್ಬರು ಕಾರ್ಯಕರ್ತರು ಒಪ್ಪಿಕೊಂಡಿರುವುದಾಗಿ indiatoday.in ವರದಿ ಮಾಡಿದೆ.

ಈ ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ನ್ಯಾಯಾಲಯ ಈ ಇಬ್ಬರನ್ನೂ ಖುಲಾಸೆಗೊಳಿಸಿತ್ತು. ಮಹಾರಾಷ್ಟ್ರದ ವಾಶಿಯಲ್ಲಿರುವ ಚಿತ್ರಮಂದಿರದ ಬಳಿ ನಡೆದ ಬಾಂಬ್ ಸ್ಪೋಟದ ಆರೋಪಿ ಸನಾತನ ಸಂಸ್ಥೆಯ ಕಾರ್ಯಕರ್ತ ಮಂಗೇಶ್ ದಿನಕರ ನಿಕಮ್ ಕುಟುಕು ಕಾರ್ಯಾಚರಣೆಯಲ್ಲಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎಂದು ವರದಿ ತಿಳಿಸಿದೆ.

ಕುಟುಕು ಕಾರ್ಯಾಚರಣೆಯಲ್ಲಿ ಸುದ್ದಿ ಸಂಸ್ಥೆಯ ರಹಸ್ಯ ವರದಿಗಾರನ ಜೊತೆ ಮಾತನಾಡಿದ ನಿಕಮ್, “ವಾಶಿಯ ರಂಗಮಂದಿರದಲ್ಲಿ ನಡೆಯುತ್ತಿದ್ದ ಮರಾಠಿ ನಾಟಕದಲ್ಲಿ ಹಿಂದೂ ದೇವದೇವತೆಗಳನ್ನು ಅವಮಾನಕಾರಿಯಾಗಿ ಬಿಂಬಿಸಲಾಗುತ್ತಿತ್ತು. ನಾವೆಷ್ಟು ಪ್ರತಿಭಟನೆ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಹಾಗಾಗಿ ನಾವು ಬಾಂಬ್ ಸ್ಫೋಟಿಸುವ ಮೂಲಕ ಅವರನ್ನು ಹೆದರಿಸಲು ಬಯಸಿದ್ದೆವು” ಎಂದು ಒಪ್ಪಿಕೊಂಡಿದ್ದಾನೆ ಎನ್ನುವುದು ವರದಿಯಲ್ಲಿದೆ.

ಇನ್ನೋರ್ವ ಆರೋಪಿ 58ರ ಹರೆಯದ ಹರಿಬಾವು ಕೃಷ್ಣ ದಿವಾಕರ ಕೂಡಾ ಸ್ಫೋಟ ಪ್ರಕರಣದಲ್ಲಿ ತನ್ನ ಪಾತ್ರವನ್ನು ಒಪ್ಪಿಕೊಂಡಿದ್ದು, ತನಿಖಾಧಿಕಾರಿಗಳು ತನ್ನ ಮೇಲೆ ಹೊರಿಸಿದ ಆರೋಪಗಳಿಗಿಂತಲೂ ಹೆಚ್ಚಿನ ಪಾತ್ರವನ್ನು ತಾನು ಈ ಬಾಂಬ್ ಸ್ಪೋಟದಲ್ಲಿ ನಿಭಾಯಿಸಿದ್ದೆ ಎಂದು ತಿಳಿಸಿದ್ದಾನೆ.

“ನನ್ನ ಬಳಿ ಬೃಹತ್ ಪ್ರಮಾಣದಲ್ಲಿ ಸ್ಫೋಟಕಗಳಿದ್ದವು. ಅವುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು” ಎಂದು ಹರಿಬಾವು ಕೃಷ್ಣ ತಿಳಿಸಿದ್ದಾನೆ. ಎಟಿಎಸ್ ದೋಷಾರೋಪಣೆ ಪ್ರಕಾರ ಆರು ಆರೋಪಿಗಳು 2008ರ ಜನವರಿ ಮತ್ತು ಜೂನ್ ಮಧ್ಯೆ ಚಿತ್ರ ಮಂದಿರಗಳ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದರು. ಮರಾಠಿ ನಾಟಕ ಆಮಿ ಪಚ್ಪುತೆ ಮತ್ತು ಜೋಧಾ ಅಕ್ಬರ್ ಹಿಂದಿ ಸಿನೆಮಾವನ್ನು ಪ್ರದರ್ಶಿಸುವ ಚಿತ್ರ ಮಂದಿರಗಳು ಅವರ ಗುರಿಯಾಗಿದ್ದವು ಎಂದು indiatoday.in ವರದಿ ಮಾಡಿದೆ.

ಪ್ರಕರಣದ ವಿಚಾರಣೆ ನಡೆಸಿದ ವಿಚಾರಣಾ ನ್ಯಾಯಾಲಯ ರಮೇಶ್ ಹನುಮಂತ ಗಡ್ಕರಿ ಮತ್ತು ವಿಕ್ರಮ್ ವಿನಯ್ ಭವೆಯನ್ನು ದೋಷಿಗಳೆಂದು ತೀರ್ಪು ನೀಡಿ ಶಿಕ್ಷೆ ವಿಧಿಸಿದರೆ ಇತರ ನಾಲ್ವರು ಆರೋಪಿಗಳನ್ನು ಖುಲಾಸೆಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News