2030ರ ವೇಳೆಗೆ ಜಾಗತಿಕ ತಾಪಮಾನ 1.5 ಡಿಗ್ರಿ ಸೆಲ್ಸಿಯಸ್ ಹೆಚ್ಚಳ: ವಿಶ್ವಸಂಸ್ಥೆ ವರದಿ ಎಚ್ಚರಿಕೆ

Update: 2018-10-08 16:17 GMT

ಲಂಡನ್, ಅ. 8: ಜಾಗತಿಕ ತಾಪಮಾನ ಪ್ರಸಕ್ತ ವೇಗದಲ್ಲೇ ಮುಂದುವರಿದರೆ ಹಾಗೂ ಅದನ್ನು ನಿಧಾನಿಸಲು ಕ್ಷಿಪ್ರ ಹಾಗೂ ಅಭೂತಪೂರ್ವ ಕ್ರಮಗಳನ್ನು ತೆಗೆದುಕೊಳ್ಳಲು ಜಗತ್ತು ವಿಫಲವಾದರೆ, ಭೂಮಿಯ ಉಷ್ಣತೆಯು 2030 ಮತ್ತು 2052ರ ನಡುವಿನ ಅವಧಿಯಲ್ಲಿ 1.5 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚುವ ಸಾಧ್ಯತೆಯಿದೆ ಎಂದು ವಿಶ್ವಸಂಸ್ಥೆಯ ವರದಿಯೊಂದು ಸೋಮವಾರ ತಿಳಿಸಿದೆ.

2015ರಲ್ಲಿ ವಿಶ್ವಸಂಸ್ಥೆಯ ಜಾಗತಿಕ ತಾಪಮಾನ ಒಪ್ಪಂದಕ್ಕೆ ಜಗತ್ತಿನ ದೇಶಗಳು ಸಹಿ ಹಾಕಿದ್ದವು. ಆ ಸಂದರ್ಭದಲ್ಲಿ ವಿವಿಧ ಸರಕಾರಗಳ ಬೇಡಿಕೆಯಂತೆ ಸಿದ್ಧಪಡಿಸಲಾಗಿದ್ದ ವರದಿಯನ್ನು ಅಂತಿಮಗೊಳಿಸಲು ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಕುರಿತ ಅಂತರ್ ಸರಕಾರಿ ಸಮಿತಿ (ಐಪಿಸಿಸಿ)ಯು ದಕ್ಷಿಣ ಕೊರಿಯದ ಇಂಚಿಯಾನ್‌ನಲ್ಲಿ ಕಳೆದ ವಾರ ಸಭೆ ಸೇರಿತ್ತು.

2015ರ ಪ್ಯಾರಿಸ್ ಒಪ್ಪಂದವನ್ನು ಅನುಷ್ಠಾನಗೊಳಿಸುವ ವಿಷಯದಲ್ಲಿ ಸರಕಾರಿ ನೀತಿ ನಿರೂಪಕರಿಗೆ ಮಾರ್ಗದರ್ಶನ ನೀಡುವ ಪ್ರಮುಖ ವೈಜ್ಞಾನಿಕ ಮಾರ್ಗದರ್ಶಿ ಎಂಬುದಾಗಿ ಈ ವರದಿಯನ್ನು ಪರಿಗಣಿಸಲಾಗಿದೆ.

 ಜಾಗತಿಕ ಸರಾಸರಿ ಉಷ್ಣತೆ ಹೆಚ್ಚಳವನ್ನು ಕೈಗಾರಿಕಾ ಪೂರ್ವ ಅವಧಿಯ ಉಷ್ಣತೆಗಿಂತ 2 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಕಡಿಮೆಗೆ ಮಿತಿಗೊಳಿಸುವ ಹಾಗೂ ಸಾಧ್ಯವಾದರೆ 1.5 ಡಿಗ್ರಿ ಸೆಲ್ಸಿಯಸ್‌ಗೆ ಸೀಮಿತಗೊಳಿಸಲು ಪ್ರಯತ್ನಿಸುವ ಗುರಿಯನ್ನು ಹವಾಮಾನ ಒಪ್ಪಂದ ಹಾಕಿಕೊಂಡಿದೆ.

ತಾಪಮಾನ ಹೆಚ್ಚಳವನ್ನು 1.5 ಡಿಗ್ರಿ ಸೆಲ್ಸಿಯಸ್‌ಗೆ ಸೀಮಿತಗೊಳಿಸಬೇಕಾದರೆ, ಮಾನವನಿರ್ಮಿತ ಜಾಗತಿಕ ನಿವ್ವಳ ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆಯ ಪ್ರಮಾಣವು 2030ರ ವೇಳೆಗೆ 2010ರಲ್ಲಿ ಇರುವುದಕ್ಕಿಂತ ಸುಮಾರು 45 ಶೇಕಡದಷ್ಟು ಕಡಿಮೆಯಾಗಬೇಕು ಹಾಗೂ ಶತಮಾನದ ಮಧ್ಯದ ಹೊತ್ತಿಗೆ ‘ನಿವ್ವಳ ಶೂನ್ಯ’ಕ್ಕೆ ತಲುಪಬೇಕು.

ಈ ಅವಧಿಯಲ್ಲಿ ಇಂಗಾಲದ ಡೈ ಆಕ್ಸೈಡ್ ಪ್ರಮಾಣ ಹೆಚ್ಚಾದರೆ, ಇಂಗಾಲದ ಡೈ ಆಕ್ಸೈಡನ್ನು ವಾತಾವರಣದಿಂದಲೇ ತೆಗೆಯಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News