ಭಾರತ ಕುಸ್ತಿ ತಂಡ ಪ್ರಕಟ

Update: 2018-10-08 18:29 GMT

ಹೊಸದಿಲ್ಲಿ, ಅ.8: ಏಶ್ಯನ್ ಗೇಮ್ಸ್ ಚಾಂಪಿಯನ್ ಬಜರಂಗ್ ಪೂನಿಯಾ ಹಾಗೂ ಒಲಿಂಪಿಕ್ಸ್ ನಲ್ಲಿ ಪದಕ ವಿಜೇತೆ ಸಾಕ್ಷಿ ಮಲಿಕ್ ನೇತೃತ್ವದ 30 ಸದಸ್ಯರ ಕುಸ್ತಿ ತಂಡ ಹಂಗೇರಿಯದಲ್ಲಿ ತಿಂಗಳಾಂತ್ಯದಲ್ಲಿ ನಡೆಯುವ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ವಿಶ್ವ ಕುಸ್ತಿ ಚಾಂಪಿಯನ್‌ಶಿಪ್ ಅಕ್ಟೋಬರ್ 20 ರಿಂದ 28ರ ತನಕ ಹಂಗೇರಿಯದ ಬುಡಾಪೆಸ್ಟ್‌ನಲ್ಲಿ ನಡೆಯಲಿದೆ.

 ಭಾರತದ ಕುಸ್ತಿ ಕ್ಕೂಟ(ಡಬ್ಲುಎಫ್‌ಐ)ಫ್ರೀ-ಸ್ಟೈಲ್, ಗ್ರೀಕೊ-ರೋಮನ್ ಹಾಗೂ ಮಹಿಳೆಯರ ಕುಸ್ತಿ ವಿಭಾಗಗಳಲ್ಲಿ ತಲಾ 10 ಸದಸ್ಯರುಗಳನ್ನು ಆಯ್ಕೆ ಮಾಡಿದೆ.

ಫ್ರೀ-ಸ್ಟೈಲ್ ವಿಭಾಗದಲ್ಲಿ ಬಜರಂಗ್(65ಕೆಜಿ)ಭಾರತದ ಪರ ಪದಕ ಗೆಲ್ಲಬಲ್ಲ ಫೇವರಿಟ್ ಕುಸ್ತಿಪಟು. ಸಾಕ್ಷಿ(62ಕೆಜಿ) ಹಾಗೂ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ವಿಜೇತೆ ಪೂಜಾ ಧಂಡಾ(57ಕೆಜಿ)ಮಹಿಳೆಯರ ಕುಸ್ತಿಯಲ್ಲಿ ಭಾರತದ ಅಭಿಯಾನದ ನೇತೃತ್ವವಹಿಸಲಿದ್ದಾರೆ.

ಜಗ್‌ಮಿಂದರ್ ಸಿಂಗ್ ಫ್ರೀ-ಸ್ಟೈಲ್ ತಂಡದ ಮುಖ್ಯ ಕೋಚ್ ಆಗಿದ್ದರೆ, ಕುಲ್‌ದೀಪ್ ಮಲಿಕ್ ಮಹಿಳಾ ತಂಡದ ಉಸ್ತುವಾರಿವಹಿಸಿಕೊಂಡಿದ್ದಾರೆ.

30 ಕುಸ್ತಿಪಟುಗಳಲ್ಲದೆ, ಭಾರತದ ನಿಯೋಗದಲ್ಲಿ ಕೋಚ್‌ಗಳು, ಫಿಸಿಯೋ, ಮಸಾಜುಗಾರ ಹಾಗೂ ರೆಫರಿಗಳ ಸಹಿತ 17 ಅಧಿಕಾರಿಗಳು ಹಂಗೇರಿಯಕ್ಕೆ ತೆರಳಲಿದ್ದಾರೆ.

ಭಾರತ ಕುಸ್ತಿ ತಂಡ ಮಂಗಳವಾರ ಬೆಳಗ್ಗೆ ಬುಡಾಪೆಸ್ಟ್‌ಗೆ ತೆರಳಲಿದೆ. ಪ್ರಮುಖ ಟೂರ್ನಿಗೆ ಮೊದಲು ಟೂರ್ನಮೆಂಟ್ ಪೂರ್ವ ಕಂಡಿಶನಿಂಗ್ ಶಿಬಿರದಲ್ಲಿ ಭಾಗವಹಿಸಲಿದೆ.

ಫೋಗಟ್ ಸಹೋದರಿಯರ ಪೈಕಿ ರಿತು ಮಾತ್ರ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗಿದ್ದು, ಗೀತಾ ಹಾಗೂ ಬಬಿತಾ ಟ್ರಯಲ್ಸ್‌ಗೆ ಹಾಜರಾಗಿರಲಿಲ್ಲ. ಏಶ್ಯನ್ ಗೇಮ್ಸ್ ಚಾಂಪಿಯನ್ ವಿನೇಶ್ ಫೋಗಟ್ ಮೊಣಕೈ ಗಾಯದಿಂದಾಗಿ ಟೂರ್ನಮೆಂಟ್‌ನಿಂದ ದೂರ ಉಳಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News