ಹೆತ್ತವರಿಗೆ ಜೀವನಾಂಶ ನೀಡದ ಪುತ್ರನಿಗೆ 1,545 ದಿನಗಳ ಜೈಲು

Update: 2018-10-09 10:16 GMT

ಅಹ್ಮದಾಬಾದ್, ಅ.9: ತನ್ನ ಹೆತ್ತವರಿಗೆ ಕೋರ್ಟ್ ಆದೇಶದಂತೆ ಜೀವನಾಂಶ ನೀಡದೇ ಇದ್ದ 45 ವರ್ಷದ  ಕಾಂತಿಭಾಯಿ ಸೋಳಂಕಿ ಎಂಬ ವ್ಯಕ್ತಿಗೆ ಇಲ್ಲಿನ ಕುಟುಂಬ ನ್ಯಾಯಾಲಯ 1,545 ದಿನಗಳ ಜೈಲು ಶಿಕ್ಷೆ ವಿಧಿಸಿದೆ.

ಕಸಗುಡಿಸುವ ವೃತ್ತಿಯ ಸೋಳಂಕಿ ತನ್ನ ಹೆತ್ತವರ ಜತೆಗೆಯೇ ವಾಸಿಸುತ್ತಿದ್ದಾನೆ. 2013ರಲ್ಲಿ ನ್ಯಾಯಾಲಯದ ಆದೇಶದಂತೆ ಆತ ತನ್ನ ತಾಯಿ ಜಶುಮತಿಬೆನ್ (68) ಹಾಗೂ ತಂದೆ ರಂಚ್ಚೊದ್‍ ಭಾಯಿ (69) ಅವರಿಗೆ ಜೀವನಾಂಶ ನೀಡಿಲ್ಲ. ತನ್ನ ತಾಯಿಗೆ  24 ತಿಂಗಳುಗಳ ಕಾಲ ಪ್ರತಿ ತಿಂಗಳಿಗೆ 900 ರೂ.ಗಳಂತೆ ಜೀವನಾಂಶ ನೀಡದ್ದಕ್ಕೆ 735 ದಿನಗಳ ಜೈಲು ವಾಸ ಹಾಗೂ ತಂದೆಗೆ  ಅಷ್ಟೇ ಜೀವನಾಂಶವನ್ನು 30 ತಿಂಗಳು ನೀಡದೇ ಇದ್ದುದಕ್ಕೆ 810 ದಿನಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ತಮ್ಮ ಇಬ್ಬರು ಪುತ್ರರು ಹಾಗೂ ಸೊಸೆಯಂದಿರ ಜತೆಗಿದ್ದ ದೀರ್ಘ ವಿವಾದದ ನಂತರ ದಂಪತಿ ತಮಗೆ ತಮ್ಮ ಪುತ್ರರು ಜೀವನಾಂಶ ನೀಡಬೇಕೆಂದು ಕೋರಿ 2013ರಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದರು. ಅಂತೆಯೇ  ಕಾಂತಿಭಾಯಿ ಮತ್ತಾತನ ಸೋದರ ದಹ್ಯಾಭಾಯಿಗೆ ಪ್ರತಿ ತಿಂಗಳು ತಲಾ ರೂ 900 ರಂತೆ ಹೆತ್ತವರಿಗೆ ಪಾವತಿಸುವಂತೆ ಕೋರ್ಟ್ ಆದೇಶಿಸಿತ್ತು.  ದಹ್ಯಾಭಾಯಿ ನಿಯಮಿತವಾಗಿ ಜೀವನಾಂಶ ನೀಡುತ್ತಿದ್ದರೆ ಕಾಂತಿಭಾಯಿ ಮಾತ್ರ ಆಗಾಗ ತಪ್ಪಿಸಿ ಕೊನೆಗೆ ಹಣ ನೀಡುವುದನ್ನೇ ನಿಲ್ಲಿಸಿದ್ದ.

ಈ ಹಿನ್ನೆಲೆಯಲ್ಲಿ ದಂಪತಿ 2015ರಲ್ಲಿ  ಕುಟುಂಬ ನ್ಯಾಯಾಲಯದ ಮೊರೆ ಹೋಗಿದ್ದರು.

ಕೋರ್ಟ್ ನೊಟಿಸ್ ಹೊರತಾಗಿಯೂ ಹಾಜರಾಗದೆ ಹಲವು ಬಾರಿ ತಪ್ಪಿಸಿಕೊಂಡಿದ್ದ ಸೋಳಂಕಿ ವಿರುದ್ಧ ಬಂಧನ ನೋಟಿಸ್ ಜಾರಿಯಾಗಿತ್ತು. ಆಂತಿಮವಾಗಿ ಆತ ಹಾಜರಾದಾಗ  ಆತನಿಗೆ  1,545 ದಿನಗಳ ತನಕ ಜೈಲು ಶಿಕ್ಷೆ  ಯಾ ಆತ ತನ್ನ ಹೆತ್ತವರಿಗೆ ಸಲ್ಲಬೇಕಾದ ರೂ 49,000 ನೀಡುವ ತನಕ ಜೈಲಿನಲ್ಲಿರಬೇಕೆಂದು ನ್ಯಾಯಾಲಯ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News