ಲೋಕಸಭಾ ಚುನಾವಣೆಗೆ ಮಾತ್ರ ಮಹಾಮೈತ್ರಿ: ವೀರಪ್ಪ ಮೊಯ್ಲಿ

Update: 2018-10-09 13:19 GMT

ಹೈದರಾಬಾದ್, ಅ.9: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ವಿರುದ್ಧ ರಚಿಸಲಾಗುವ ಮಹಾಮೈತ್ರಿಕೂಟ ಬಹುಜನ ಸಮಾಜವಾದಿ ಪಕ್ಷ(ಬಿಸ್ಪಿ) ಹಾಗೂ ಸಮಾಜವಾದಿ ಪಕ್ಷ(ಎಸ್ಪಿ)ಗಳನ್ನು ಒಳಗೊಂಡಿರುತ್ತದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಎಂ.ವೀರಪ್ಪ ಮೊಯ್ಲಿ ಹೇಳಿದ್ದಾರೆ.

 ಪ್ರಸ್ತಾವಿತ ಮಹಾಮೈತ್ರಿ ಲೋಕಸಭಾ ಚುನಾವಣೆಗೆ ಸಂಬಂಧಿಸಿದ್ದು, ರಾಜ್ಯಗಳ ವಿಧಾನಸಭೆ ಚುನಾವಣೆಗೆ ಇದು ಸಂಬಂಧಿಸಿಲ್ಲ. ವಿಧಾನಸಭೆ ಚುನಾವಣೆಗಳಲ್ಲಿ ಪಕ್ಷಗಳಿಗೆ ತಮ್ಮದೇ ಆದ ಬಾಧ್ಯತೆಗಳಿರುತ್ತವೆ . ಲೋಕಸಭಾ ಚುನಾವಣೆಯ ಸಂದರ್ಭ ಪಕ್ಷಗಳು ಒಗ್ಗೂಡಿರಬೇಕು ಎಂಬುದು ನಮ್ಮ ಮುಖ್ಯ ಉದ್ದೇಶವಾಗಿದ್ದು ಇದನ್ನು ಸಾಧಿಸುವ ವಿಶ್ವಾಸವಿದೆ ಎಂದರು. ಅಲ್ಲದೆ ಮುಂದಿನ ಎರಡು ತಿಂಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಕನಿಷ್ಟ ನಾಲ್ಕರಿಂದ ಐದು ರಾಜ್ಯಗಳಲ್ಲಿ ಅಧಿಕಾರಕ್ಕೆ ಬರಲಿದೆ ಎಂದವರು ವಿಶ್ವಾಸ ವ್ಯಕ್ತಪಡಿಸಿದರು. ರಾಜಸ್ತಾನ ಮತ್ತು ಮಿರೆರಾಂ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಮತ್ತು ಮಧ್ಯಪ್ರದೇಶದಲ್ಲಿ ಬಿಜೆಪಿಗಿಂತ ಹೆಚ್ಚಿನ ಸ್ಥಾನ ಗಳಿಸಲಿದೆ. ಛತ್ತೀಸ್‌ಗಢದಲ್ಲಿ 50:50 ಅವಕಾಶವಿದ್ದು ಫಲಿತಾಂಶವು ನಮ್ಮ ಅಭ್ಯರ್ಥಿಗಳ ಆಯ್ಕೆಯನ್ನು ಆಧರಿಸಿದೆ ಎಂದರು.

ಅಲ್ಲದೆ ಟಿಡಿಪಿ, ಸಿಪಿಐ ಹಾಗೂ ಇತರ ಪಕ್ಷಗಳ ನೆರವಿನಿಂದ ತೆಲಂಗಾಣದಲ್ಲೂ ಪಕ್ಷ ಉತ್ತಮ ಸಾಧನೆ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮಹಾಮೈತ್ರಿಯ ಪ್ರಧಾನಿ ಅಭ್ಯರ್ಥಿ ವಿಷಯ ಈಗ ಅಪ್ರಸ್ತುತ ಎಂದ ಮೊಯ್ಲಿ, ನಮ್ಮ ಮೂಲ ಉದ್ದೇಶ ಬಿಜೆಪಿ ಹಾಗೂ ಕೋಮುವಾದಿ ಶಕ್ತಿಗಳನ್ನು ಸೋಲಿಸುವುದು. ಸೂಕ್ತ ಸಮಯದಲ್ಲಿ ಪ್ರಧಾನಿ ಅಭ್ಯರ್ಥಿಯನ್ನು ನಾಯಕರು ಆಯ್ಕೆ ಮಾಡುತ್ತಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News