11ರಂದು ಆಂಧ್ರ, ಒಡಿಶಾಗೆ ಅಪ್ಪಳಿಸಲಿರುವ ‘ತಿತ್ಲಿ’ ಚಂಡಮಾರುತ: ಹವಾಮಾನ ಇಲಾಖೆ ಮುನ್ಸೂಚನೆ

Update: 2018-10-09 13:25 GMT

ಭುವನೇಶ್ವರ, ಅ.9: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಮಂಗಳವಾರ ಬೆಳಿಗ್ಗೆ ತೀವ್ರಸ್ವರೂಪ ಪಡೆದುಕೊಂಡಿದ್ದು ಆಂಧ್ರ ಮತ್ತು ಒಡಿಶಾ ಕರಾವಳಿ ತೀರದತ್ತ ಕ್ರಮೇಣ ಮುಂದುವರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಅ.11ರಂದು ಈ ಎರಡೂ ರಾಜ್ಯಗಳಿಗೆ ಚಂಡಮಾರುತ ಅಪ್ಪಳಿಸುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆಯ ವಿಶೇಷ ಪ್ರಕಟಣೆ ತಿಳಿಸಿದೆ.

ತೀವ್ರ ವಾಯುಭಾರ ಕುಸಿತ ಚಂಡಮಾರುತವಾಗಿ ಪರಿವರ್ತಿತವಾಗುವಾಗ ಅದಕ್ಕೆ ‘ತಿತ್ಲಿ’ ಎಂದು ಹೆಸರಿಸಲಾಗುತ್ತದೆ. ಉತ್ತರ ಆಂಧ್ರಪ್ರದೇಶ, ಒಡಿಶಾ ಮತ್ತು ಪಶ್ಚಿಮ ಬಂಗಾಳ ತೀರದಲ್ಲಿ ಮಂಗಳವಾರ ರಾತ್ರಿಯಿಂದ ಗಂಟೆಗೆ 45ರಿಂದ 65 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸಲಿದ್ದು, ಕ್ರಮೇಣ ಮತ್ತಷ್ಟು ತೀವ್ರಗೊಂಡು ಬುಧವಾರ ಬೆಳಿಗ್ಗೆ 100 ಕಿ.ಮೀ. ವೇಗ ಪಡೆಯಲಿದೆ. ಅಲ್ಲದೆ ಆಂಧ್ರದ ಶ್ರೀಕಾಕುಳಂ ಜಿಲ್ಲೆಯ ತಗ್ಗು ಪ್ರದೇಶಗಳು, ಒಡಿಶಾದ ಗಂಜಾಂ, ಖುರ್ಡ ಮತ್ತು ಪುರಿ ಜಿಲ್ಲೆಗಳಲ್ಲಿ ಸಮುದ್ರದಲ್ಲಿ ಭಾರೀ ಗಾತ್ರ ಅಲೆಗಳು ಉಂಟಾಗಲಿವೆ ಎಂದು ಇಲಾಖೆ ತಿಳಿಸಿದೆ.

ಇಲಾಖೆಯ ಎಚ್ಚರಿಕೆಯ ಹಿನ್ನೆಲೆಯಲ್ಲಿ ಗರಿಷ್ಟ ಜಾಗರೂಕತೆ ವಹಿಸುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೂ ಒಡಿಶಾ ಸರಕಾರ ಸೂಚನೆ ನೀಡಿದೆ. 879 ಚಂಡಮಾರುತ ಆಶ್ರಯತಾಣಗಳನ್ನು ತೆರೆಯಲಾಗಿದ್ದು, 300 ದೋಣಿಗಳನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಂಭಾವ್ಯ ಪರಿಸ್ಥಿತಿಯನ್ನು ಎದುರಿಸಲು ಎಲ್ಲಾ ಸಿದ್ಧತೆಗಳನ್ನೂ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ರಜೆ ಪಡೆದುಕೊಳ್ಳದಂತೆ ಎಲ್ಲಾ ಸರಕಾರಿ ಸಿಬ್ಬಂದಿಗಳಿಗೆ ಸೂಚಿಸಲಾಗಿದೆ. ಅಗತ್ಯಬಿದ್ದರೆ ತೀರಪ್ರದೇಶದ ಜನರ ಸ್ಥಳಾಂತರಕ್ಕೆ ಸಿದ್ಧತೆ ಮಾಡಿಕೊಳ್ಳುವಂತೆ ತಿಳಿಸಲಾಗಿದೆ ಎಂದು ಹೆಚ್ಚುವರಿ ಹಿರಿಯ ಪರಿಹಾರ ಆಯುಕ್ತ ಪಿ.ಕೆ.ಮೊಹಾಪಾತ್ರ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News