ಚೇತರಿಸಿಕೊಂಡು ಮತ್ತೆ ಕುಸಿದ ರೂಪಾಯಿ ಮೌಲ್ಯ

Update: 2018-10-09 13:29 GMT

ಮುಂಬೈ, ಅ.9: ರೂಪಾಯಿ ಮೌಲ್ಯ ಮಂಗಳವಾರ ಆರಂಭದಲ್ಲಿ ಚೇತರಿಸಿಕೊಂಡರೂ ಬಳಿಕ ಮತ್ತೆ ಕುಸಿದು ಸಾರ್ವಕಾಲಿಕ ಕನಿಷ್ಟ ಮೌಲ್ಯವಾದ 74.27 ರೂಪಾಯಿಗೆ ಕುಸಿತ ಕಂಡಿದೆ. ಮಂಗಳವಾರ ಬೆಳಿಗ್ಗೆ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ 74.06 ರೂ. ಮೌಲ್ಯದೊಂದಿಗೆ ವಹಿವಾಟು ಆರಂಭಿಸಿದ ರೂಪಾಯಿ ಮೌಲ್ಯದಲ್ಲಿ 18 ಪೈಸೆಯಷ್ಟು ಹೆಚ್ಚಳವಾಗಿ 73.88 ರೂಪಾಯಿಗೆ ಏರಿಕೆಯಾಯಿತು. ಆದರೆ ಬಳಿಕ ಕಚ್ಛಾತೈಲದ ದರದಲ್ಲಿ ಏರಿಕೆಯಾಗಿ ಬ್ಯಾರೆಲ್ ದರ 84 ಡಾಲರ್‌ಗೆ ಹೆಚ್ಚಿದ್ದು ರೂಪಾಯಿ ಮೌಲ್ಯದ ಕುಸಿತಕ್ಕೆ ಕಾರಣವಾಗಿದೆ.

ವಿದೇಶಿ ಬಂಡವಾಳದ ಹೊರಹರಿವು ಮತ್ತು ಕಚ್ಛಾ ತೈಲದ ದರ ಏರಿಕೆಯ ಹಿನ್ನೆಲೆಯಲ್ಲಿ ಸೋಮವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು 1,805 ಕೋಟಿ ರೂ. ಮೊತ್ತದ ಶೇರುಗಳನ್ನು ಮಾರಾಟ ಮಾಡಿದ್ದಾರೆ. ಅಮೆರಿಕದ ಡಾಲರ್‌ಗೆ ಆಮದುದಾರರಿಂದ ಹೆಚ್ಚಿನ ಬೇಡಿಕೆ, ವಿತ್ತೀಯ ಕೊರತೆ ಹಾಗೂ ಬಂಡವಾಳ ಹೊರಹರಿವಿನ ಆತಂಕ ರೂಪಾಯಿ ಮೌಲ್ಯದ ಕುಸಿತಕ್ಕೆ ಕಾರಣವಾಗಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ. ಈ ಮಧ್ಯೆ ಮುಂಬೈ ಶೇರುಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಮಂಗಳವಾರ 175 ಅಂಕ ಕುಸಿದು 34,299.47ರಲ್ಲಿ ದಿನದ ವಹಿವಾಟು ಮುಗಿಸಿದೆ. ರಾಷ್ಟ್ರೀಯ ಶೇರುಪೇಟೆಯ ಸೂಚ್ಯಂಕ 47 ಅಂಕ ಕುಸಿದು 10,301.05ರಲ್ಲಿ ವಹಿವಾಟು ಮುಗಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News