ಕಸಾಯಿಖಾನೆ ರಾಜಕಾರಣ!

Update: 2018-10-10 18:56 GMT

ಮಾನ್ಯರೇ,

ಜಿಲ್ಲಾ ಉಸ್ತುವಾರಿ ಸಚಿವರಾದ ಖಾದರ್‌ರವರು ಮಂಗಳೂರಿನ ಕಸಾಯಿಖಾನೆಯ ಆಧುನೀಕರಣಕ್ಕೆ ರೂ. 15 ಕೋಟಿ ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ಸಲಹೆ ಮಾಡಿರುವುದನ್ನು ಸಂಘಪರಿವಾರಿಗರು ತೀವ್ರವಾಗಿ ವಿರೋಧಿಸುತ್ತಿರುವುದು ದುಂದು ವೆಚ್ಚಕ್ಕಾಗಿ ಎಂದು ಯಾರಾದರೂ ಭಾವಿಸಿದರೆ ಅದು ಖಂಡಿತ ತಪ್ಪುತಿಳುವಳಿಕೆ. ಅಸಲಿಗೆ ಈಗಿನ ಹಳೆ ಕಸಾಯಿಖಾನೆಯಿಂದ ಹೊರಡುವ ದುರ್ನಾತ ಮತ್ತು ತ್ಯಾಜ್ಯದಿಂದಾಗಿ ಪರಿಸರ ಮಾಲಿನ್ಯ ಉಂಟಾಗುತ್ತಿರುವ ಬಗ್ಗೆ ಆಗಾಗ ಪ್ರತಿಭಟಿಸುವವರೂ ಇದೇ ಸಂಘಪರಿವಾರಿಗರು! ಇವರು ಆಧುನೀಕರಣವನ್ನು ವಿರೋಧಿಸುವುದನ್ನು ನೋಡುವಾಗ ಇವರಿಗೆಲ್ಲೋ ತಮ್ಮ ಕಾಲಾಳು ಪಡೆಗಳ ಸುಲಿಗೆ ದಂಧೆಗೆ ಕಡಿವಾಣ ಬೀಳುವ ಬಗ್ಗೆ ಆತಂಕ ಉಂಟಾಗುತ್ತಿರುವಂತೆ ತೋರುತ್ತದೆ. ಇವರೀಗ ಕಸಾಯಿಖಾನೆಯಲ್ಲಿ ಕೇವಲ ದನಗಳನ್ನು ಕಡಿಯಲಾಗುತ್ತದೆ ಎಂಬ ಸುಳ್ಳು ಸುದ್ದಿಯನ್ನು ಹಬ್ಬಿಸುವ ಮೂಲಕ ಜನರಲ್ಲಿ ತಪ್ಪುಕಲ್ಪನೆ ಮೂಡಿಸಲು ಯತ್ನಿಸುತ್ತಿದ್ದಾರೆ. ವಾಸ್ತವದಲ್ಲಿ ಕಸಾಯಿಖಾನೆ ಇರುವುದು ಕುರಿ, ಆಡು, ಕೋಳಿ, ದನ, ಕೋಣ, ಎಮ್ಮೆ ಮುಂತಾದ ಪ್ರಾಣಿಗಳನ್ನು ಅಧಿಕೃತವಾಗಿ ವಧೆ ಮಾಡಿ ಕೇವಲ ಮಾಂಸವನ್ನಷ್ಟೇ ಅಲ್ಲ, ಇನ್ನೂ ಅನೇಕ ಲಾಭದಾಯಕ ಉಪಉತ್ಪನ್ನಗಳನ್ನು ತಯಾರಿಸಲು. ಗ್ರಾಹಕರಿಗೆ ಸ್ವಚ್ಛ, ಶುದ್ಧ ಮಾಂಸವನ್ನು ಒದಗಿಸುವುದಕ್ಕೋಸ್ಕರ ಎಲ್ಲಾ ಮುಂದುವರಿದ ರಾಷ್ಟ್ರಗಳಲ್ಲಿ ಇರುವಂತೆ ಭಾರತದಲ್ಲೂ ಅತ್ಯಾಧುನಿಕ ಕಸಾಯಿಖಾನೆಗಳು ಅತ್ಯವಶ್ಯಕವಾಗಿವೆ. ನಿಜವಾಗಿ ಜನಸಂಖ್ಯೆಯ ಆಧಾರದಲ್ಲಿ ನೋಡಿದರೆ ಪ್ರತಿಯೊಂದು ತಾಲೂಕು ಕೇಂದ್ರದಲ್ಲೂ ಆಧುನಿಕ ಕಸಾಯಿಖಾನೆಯೊಂದನ್ನು ನಿರ್ಮಿಸುವ ಅವಶ್ಯಕತೆ ಇದೆ. ಆದರೆ ಸಂಘಪರಿವಾರಿಗರು ಇದನ್ನು ವಿರೋಧಿಸುತ್ತಾರೆ. ಏಕೆ ಗೊತ್ತೇ? ಅವರಿಗೆ ಕಸಾಯಿಖಾನೆಯ ವಿವಾದ ಜೀವಂತವಾಗಿ ಉಳಿಯಬೇಕಾಗಿದೆ! ವಾಸ್ತವದಲ್ಲಿ ಅವರಿಗೆ ಕಸಾಯಿಖಾನೆಯ ವಿಷಯವೊಂದೇ ಅಲ್ಲ, ಗೋಹತ್ಯೆ ನಿಷೇಧ, ಮತಾಂತರ, ಲವ್ ಜಿಹಾದ್, ಕಾಶ್ಮೀರ, ಗಡಿ ಸಂಘರ್ಷ, ರಾಮ ಮಂದಿರಗಳಂತಹ ಲಾಭದಾಯಕ ಸಮಸ್ಯೆಗಳೆಲ್ಲವೂ ಸದಾ ಜೀವಂತವಾಗಿ ಉಳಿಯಬೇಕಾಗಿವೆ. ಯಾಕೆಂದರೆ ಈ ಸಮಸ್ಯೆಗಳು ಬಗೆಹರಿದವೆಂದಾದರೆ ನಷ್ಟ ಒಂದು ಕಡೆಯಾದರೆ ಇನ್ನೊಂದು ಕಡೆ ರಾಜಕಾರಣ ಮಾಡಲು, ತಮ್ಮ ತಪ್ಪುಗಳು ಮತ್ತು ದುಷ್ಕೃತ್ಯಗಳಿಂದ ಜನಸಾಮಾನ್ಯರ ಗಮನವನ್ನು ಆಚೆ ಸೆಳೆಯಲು ಅವರಿಗೆ ವಿಷಯಗಳೇ ಉಳಿಯುವುದಿಲ್ಲ!!

Writer - -ಸುರೇಶ್ ಭಟ್, ಬಾಕ್ರಬೈಲ್

contributor

Editor - -ಸುರೇಶ್ ಭಟ್, ಬಾಕ್ರಬೈಲ್

contributor

Similar News