ಭಾರತ ಸೆಮಿಫೈನಲ್‌ಗೆ ಪ್ರವೇಶ

Update: 2018-10-10 19:00 GMT

ಜೋಹರ್ ಭಾರು (ಮಲೇಶ್ಯ), ಅ.10: ಸುಲ್ತಾನ್ ಆಫ್ ಜೋಹರ್ ಕಪ್ ಹಾಕಿ ಟೂರ್ನಮೆಂಟ್‌ನಲ್ಲಿ ಸತತ ನಾಲ್ಕನೇ ಜಯ ಗಳಿಸಿರುವ ಭಾರತದ ಪುರುಷರ ಜೂನಿಯರ್ ತಂಡ ಸೆಮಿಫೈನಲ್‌ನಲ್ಲಿ ಬುಧವಾರ ಅವಕಾಶ ದೃಢಪಡಿಸಿದೆ.

ಹಾಲಿ ಚಾಂಪಿಯನ್ ಆಸ್ಟ್ರೇಲಿಯ ವಿರುದ್ಧ ನಡೆದ ಪಂದ್ಯದಲ್ಲಿ ಭಾರತದ ತಂಡ 5-4 ಅಂತರದಲ್ಲಿ ಜಯ ಗಳಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ.

ಈ ಗೆಲುವಿನೊಂದಿಗೆ ಭಾರತ ಅಗ್ರ ಸ್ಥಾನದೊಂದಿಗೆ ಸೆಮಿ ಫೈನಲ್ ಪ್ರವೇಶಿಸಿದೆ. ಪಂದ್ಯದ ಆರಂಭದಿಂದಲೂ ಮೇಲುಗೈ ಸಾಧಿಸಿದ್ದ ಭಾರತದ ಹಾಕಿ ತಂಡ 5ನೇ ನಿಮಿಷದಲ್ಲಿ ಮೊದಲ ಗೋಲು ಜಮೆ ಮಾಡಿತ್ತು.

   ಗುರ್‌ಸಾಹಿಬಿಜಿತ್ ಸಿಂಗ್ ಸೊಗಸಾದ ಫೀಲ್ಡ್ ಗೋಲು ದಾಖಲಿಸಿ ಭಾರತಕ್ಕೆ 1-0 ಮುನ್ನಡೆ ದೊರಕಿಸಿಕೊಟ್ಟರು. 11ನೇ ನಿಮಿಷ, 14ನೇ ಮತ್ತು 15ನೇ ನಿಮಿಷದಲ್ಲಿ ಕ್ರಮವಾಗಿ ಹಸ್ಪ್ರೀತ್ ಸಿಂಗ್, ಮನ್‌ದೀಪ್ ಮೋರ್ ಮತ್ತು ವಿಷ್ಣುಕಾಂತ್ ಸಿಂಗ್ ಗೋಲು ಜಮೆ ಮಾಡಿ ತಂಡಕ್ಕೆ 4-0 ಮುನ್ನಡೆಗೆ ನೆರವಾದರು.

18ನೇ ನಿಮಿಷದಲ್ಲಿ ಆಸ್ಟ್ರೇಲಿಯ ತಂಡದ ಡಾಮೊನ್ ಸ್ಟೆಫೆನ್ಸ್ ಆಸ್ಟ್ರೇಲಿಯ ಪರ ಮೊದಲ ಗೋಲು ಜಮೆ ಮಾಡಿದರು. 35ನೇ ನಿಮಿಷದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯದ ಖಾತೆಗೆ ಇನ್ನೊಂದು ಗೋಲು ಸೇರ್ಪಡೆಗೊಂಡಿತು.

   43ನೇ ನಿಮಿಷದಲ್ಲಿ ಶೀಲಾನಂದ ಲಕ್ರಾ ಗೋಲು ಬಾರಿ ಭಾರತಕ್ಕೆ 5-2 ಮುನ್ನಡೆಗೆ ಸಹಾಯ ಮಾಡಿದರು. ಇದರೊಂದಿಗೆ ಭಾರತ 5-2 ಅಂತರದಲ್ಲಿ ಗೆಲುವಿನ ನಗೆ ಬೀರಿತು.

ಅಕ್ಟೋಬರ್ 12ರಂದು ನಡೆಯಲಿರುವ 5ನೇ ಪಂದ್ಯದಲ್ಲಿ ಬ್ರಿಟನ್ ತಂಡವನ್ನು ಭಾರತ ಎದುರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News