ರಶ್ಯ ಕ್ಷಿಪಣಿ ಒಪ್ಪಂದ, ಇರಾನ್ ತೈಲ ಆಮದಿನಿಂದ ಬಾರತಕ್ಕೆ ಲಾಭವಿಲ್ಲ: ಅಮೆರಿಕ

Update: 2018-10-12 15:56 GMT

ವಾಶಿಂಗ್ಟನ್, ಅ. 12: ಇರಾನ್‌ನಿಂದ ತೈಲ ಆಮದನ್ನು ಮುಂದುವರಿಸಲು ಹಾಗೂ ರಶ್ಯದಿಂದ ಎಸ್-400 ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯನ್ನು ಖರೀದಿಸಲು ಮಾಡಿಕೊಂಡಿರುವ ಒಪ್ಪಂದವನ್ನು ಉಳಿಸಿಕೊಳ್ಳಲು ಭಾರತ ತೆಗೆದುಕೊಂಡಿರುವ ನಿರ್ಧಾರದಿಂದ ‘ಒಳ್ಳೆಯದಾಗುವುದಿಲ್ಲ’ ಎಂದು ಅಮೆರಿಕ ವಿದೇಶಾಂಗ ಇಲಾಖೆಯ ವಕ್ತಾರೆ ಹೆದರ್ ನೋವರ್ಟ್ ಹೇಳಿದ್ದಾರೆ.

ಈ ಎರಡೂ ನಿರ್ಧಾರಗಳು ಎರಡನೇ ಹಂತದ ದಿಗ್ಬಂಧನೆಗಳಿಗೆ ಅರ್ಹವಾಗಿವೆ ಎಂದು ಅವರು ಹೇಳಿದ್ದಾರೆ.

 ಅದೇ ವೇಳೆ, ಇದೇ ವಿಷಯದಲ್ಲಿ ಇರಾನ್ ಕುರಿತ ವಿಶೇಷ ಪ್ರತಿನಿಧಿ ಬ್ರಯಾನ್ ಹುಕ್ ಮತ್ತು ಇಂಧನಕ್ಕಾಗಿನ ಸಹಾಯಕ ವಿದೇಶಾಂಗ ಕಾರ್ಯದರ್ಶಿ ಫ್ರಾನ್ಸಿಸ್ ಫ್ಯಾನನ್ ಭಾರತ ಸರಕಾರದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ ಎಂದು ವಿದೇಶಾಂಗ ಇಲಾಖೆ ಗುರುವಾರ ಪ್ರಕಟಿಸಿದೆ.

ಹುಕ್ ಹೊಸದಿಲ್ಲಿಯಿಂದ ಲಕ್ಸಮ್‌ಬರ್ಗ್, ಫ್ರಾನ್ಸ್ ಮತ್ತು ಬೆಲ್ಜಿಯಂಗೆ ಪ್ರಯಾಣಿಸಲಿದ್ದಾರೆ.

ರಶ್ಯದಿಂದ ಎಸ್-400 ವಾಯುರಕ್ಷಣಾ ಕ್ಷಿಪಣಿಗಳನ್ನು ಖರೀದಿಸಲು ಭಾರತ ಆ ದೇಶದೊಂದಿಗೆ ಒಪ್ಪಂದ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ, ಭಾರತದ ವಿರುದ್ಧ ಆರ್ಥಿಕ ದಿಗ್ಬಂಧನೆಗಳನ್ನು ವಿಧಿಸುತ್ತೀರಾ ಎಂಬ ಪ್ರಶ್ನೆಗೆ, ‘‘ಅದು ಭಾರತಕ್ಕೆ ಶೀಘ್ರದಲ್ಲೇ ಗೊತ್ತಾಗುತ್ತದೆ’’ ಎಂಬುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ ಒಂದು ದಿನದ ಬಳಿಕ ನೋವರ್ಟ್ ಈ ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News