ಭಾರತಕ್ಕೆ ಮೊದಲ ಸೋಲು

Update: 2018-10-12 18:58 GMT

ಜೊಹೋರ್ ಬಹ್ರು(ಮಲೇಶ್ಯ), ಅ.12: ಇಲ್ಲಿ ನಡೆಯುತ್ತಿರುವ ಸುಲ್ತಾನ್ ಆಫ್ ಜೊಹೋರ್ ಕಪ್ ಹಾಕಿ ಟೂರ್ನಮೆಂಟ್‌ನಲ್ಲಿ ಭಾರತ ಮೊದಲ ಸೋಲು ಅನುಭವಿಸಿದೆ.

ಭಾರತ ಈಗಾಗಲೇ ಫೈನಲ್ ಪ್ರವೇಶಿಸಿರುವ ಹಿನ್ನೆಲೆಯಲ್ಲಿ ಕೊನೆಯ ಪಂದ್ಯದಲ್ಲಿ ಸೋಲು ಪರಿಣಾಮ ಬೀರಿಲ್ಲ. ರೌಂಡ್ ರಾಬಿನ್ ಟೂರ್ನಿಯ ಕೊನೆಯ ಪಂದ್ಯದಲ್ಲಿ ಭಾರತದ ಪುರುಷರ ಜೂನಿಯರ್ ತಂಡ 2-3 ಅಂತರದಲ್ಲಿ ಗ್ರೇಟ್ ಬ್ರಿಟನ್ ವಿರುದ್ಧ ಸೋಲು ಅನುಭವಿಸಿತು.

ಭಾರತ ಸತತ 4 ಗೆಲುವಿನೊಂದಿಗೆ 12 ಪಾಯಿಂಟ್ಸ್ ಸಂಪಾದಿಸಿದೆ. ಗ್ರೇಟ್ ಬ್ರಿಟನ್ 5 ಪಂದ್ಯಗಳಲ್ಲಿ 3 ಗೆಲುವಿನೊಂದಿಗೆ 10 ಪಾಯಿಂಟ್ಸ್ ದಾಖಲಿಸಿ ಫೈನಲ್ ತಲುಪಿದೆ.

 ಶುಕ್ರವಾರ ನಡೆದ ಪಂದ್ಯದಲ್ಲಿ ಮನ್‌ದೀಪ್ ಮೊರ್ ನೇತೃತ್ವದ ಭಾರತದ ತಂಡ ಉತ್ತಮ ಆರಂಭ ನೀಡಿತ್ತು.ಭಾರತಕ್ಕೆ ಸತತ ಪೆನಾಲ್ಟಿ ಕಾರ್ನರ್ ಅವಕಾಶ ಲಭಿಸಿತ್ತು.

  5ನೇ ನಿಮಿಷದಲ್ಲಿ ಭಾರತದ ವಿಷ್ಣುಕಾಂತ್ ಸಿಂಗ್ ಎರಡನೇ ಯತ್ನದಲ್ಲಿ ಪೆನಾಲ್ಟಿ ಅವಕಾಶದಲ್ಲಿ ಗೋಲು ಕಬಳಿಸಿದರು. ಇದರ ಬೆನ್ನಲ್ಲೇ ಗ್ರೇಟ್ ಬ್ರಿಟನ್ ಗೋಲು ಜಮೆ ಮಾಡಿತು.ಕ್ಯಾಮರೊನ್ ಗೋಲ್ಡನ್ ಗೋಲು ಬಾರಿಸಿ ಸಮಬಲ ಸಾಧಿಸಿದರು.

ಎರಡನೇ ಕ್ವಾರ್ಟರ್‌ನಲ್ಲಿ ಭಾರತ ಮೇಲುಗೈ ಸಾಧಿಸಿತ್ತು. ಶೀಲಾನಂದ ಲಕ್ರಾ 20ನೇ ನಿಮಿಷದಲ್ಲಿ ಗೋಲು ಬಾರಿಸಿ ಭಾರತಕ್ಕೆ 2-1 ಮುನ್ನಡೆಗೆ ನೆರವಾದರು.

 ಮೂರನೇ ಕ್ವಾರ್ಟರ್‌ನಲ್ಲಿ ಭಾರತದ ರಕ್ಷಣಾ ಕೋಟೆಯನ್ನು ಗ್ರೇಟ್ ಬ್ರಿಟನ್ ಪರೀಕ್ಷಿಸಲು ಮುಂದಾಯಿತು. 2-2 ಸಮಬಲ ಸಾಧಿಸಿದ್ದ ಗ್ರೇಟ್ ಬ್ರಿಟನ್ ಪರ 39ನೇ ನಿಮಿಷದಲ್ಲಿ ಸ್ಟುವರ್ಟ್ ರಶ್ಮೇರೆ ಗೋಲು ಬಾರಿಸಿದರು. ಕೊನೆಯ ಕ್ವಾರ್ಟರ್‌ನ 51ನೇ ನಿಮಿಷದಲ್ಲಿ ಗ್ರೇಟ್ ಬ್ರಿಟನ್‌ನ ನಾಯಕ ಎಡ್ವರ್ಡ್ ವೇ ಪೆನಾಲ್ಟಿ ಅವಕಾಶದಲ್ಲಿ ಗೋಲು ಜಮೆ ಮಾಡಿದರು. ಇದರೊಂದಿಗೆ ಗ್ರೇಟ್ ಬ್ರಿಟನ್ 3-2 ಅಂತರದಲ್ಲಿ ಜಯ ದಾಖಲಿಸಿತು.

ರವಿವಾರ ನಡೆಯಲಿರುವ ಫೈನಲ್‌ನಲ್ಲಿ ಭಾರತ ಮತ್ತು ಗ್ರೇಟ್ ಬ್ರಿಟನ್ ಮತ್ತೆ ಮುಖಾಮುಖಿಯಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News