ನಿಮ್ಮ ಫೇಸ್ ಬುಕ್ ಖಾತೆಯೂ ಹ್ಯಾಕ್ ಆಗಿದೆಯೇ: ನಿಮಗೇನು ಗೊತ್ತಿರಬೇಕು?, ನೀವೇನು ಮಾಡಬೇಕು?

Update: 2018-10-13 09:51 GMT

ತನ್ನ 30 ಮಿಲಿಯನ್ ಬಳಕೆದಾರರ ಖಾತೆಗಳಿಗೆ ಹ್ಯಾಕರ್‌ಗಳು ಕನ್ನ ಹಾಕಿರುವುದನ್ನು ಫೇಸ್‌ಬುಕ್ ಒಪ್ಪಿಕೊಂಡಿದೆ. ಜುಲೈ 2017 ಮತ್ತು ಸೆಪ್ಟೆಂಬರ್ 2018ರ ನಡುವೆ ಫೇಸ್‌ಬುಕ್ ಕೋಡ್‌ನ್ನು ಭೇದಿಸಿ ನಡೆಸಲಾಗಿರುವ ಈ ಮಾಹಿತಿ ಕಳ್ಳತನದ ಹೆಚ್ಚಿನ ವಿವರಗಳು ಈಗ ಹೊರಬಂದಿವೆ. ತಮ್ಮ ಪ್ರೊಫೈಲ್ ಇತರರಿಗೆ ಹೇಗೆ ಕಾಣಿಸುತ್ತದೆ ಎನ್ನುವುದನ್ನು ಬಳಕೆದಾರರು ವೀಕ್ಷಿಸಲು ಅನುಕೂಲವಾಗುವಂತೆ ಫೇಸ್‌ಬುಕ್ ಒದಗಿಸಿರುವ ‘ವ್ಯೆ ಆ್ಯಜ್’ ಫೀಚರ್‌ನ ಮೂಲಕ ಹ್ಯಾಕರ್‌ಗಳು ಈ ಕೃತ್ಯವೆಸಗಿದ್ದಾರೆ. ನಾಲ್ಕು ಲಕ್ಷ ಖಾತೆಗಳನ್ನು ಮೊದಲು ಭೇದಿಸಿದ ಹ್ಯಾಕರ್‌ಗಳು ಬಳಿಕ 30 ಮಿಲಿಯ ಜನರ ಖಾತೆಗಳನ್ನು ಪ್ರವೇಶಿಸಿದ್ದಾರೆ. ಈ ಮೊದಲು 50 ಮಿ.ಜನರ ಖಾತೆಗಳಿಗೆ ಕನ್ನ ಹಾಕಲಾಗಿದೆ ಎಂದು ಶಂಕಿಸಲಾಗಿತ್ತು.

ದಾಳಿಕೋರರು 30 ಮಿ. ಬಳಕೆದಾರರ ಪೈಕಿ 15 ಮಿ. ಜನರ ಹೆಸರುಗಳು ಮತ್ತು ಸಂಪರ್ಕ ವಿವರಗಳನ್ನು ಎಗರಿಸಿದ್ದಾರೆ. 14 ಮಿ. ಜನರ ಲಿಂಗದಿಂದ ಹಿಡಿದು ರಿಲೇಷನ್‌ಶಿಪ್ ಸ್ಟೇಟಸ್‌ವರೆಗಿನ ಪ್ರತಿಯೊಂದು ಮಾಹಿತಿಯನ್ನೂ ಪಡೆದುಕೊಂಡಿದ್ದಾರೆ. ಕೇವಲ ಒಂದು ಮಿಲಿಯ ಬಳಕೆದಾರರು ಮಾತ್ರ ಸುದೈವಿಗಳಾಗಿದ್ದು,ಅವರ ಯಾವುದೇ ಮಾಹಿತಿ ಹ್ಯಾಕರ್‌ಗಳ ಪಾಲಾಗಿಲ್ಲ.

ಫೇಸ್‌ಬುಕ್ ಆಗಿದ್ದೇನು ಎಂಬ ವಿವರಣೆಯೊಂದಿಗೆ ಈ 30 ಮಿ.ಬಳಕೆದಾರರಿಗೆ ಸಂದೇಶಗಳ ರವಾನೆಯನ್ನು ಈಗಾಗಲೇ ಆರಂಭಿಸಿದೆ. ಬಳಕೆದಾರರು ತಮ್ಮನ್ನು ರಕ್ಷಿಸಿಕೊಳ್ಳಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಅದು ಮಾಹಿತಿ ನೀಡುತ್ತಿದೆ.

ಮೆಸೆಂಜರ್,ಮೆಸೆಂಜರ್ ಕಿಡ್ಸ್,ಇನ್‌ಸ್ಟಾಗ್ರಾಂ,ವಾಟ್ಸ್ ಆ್ಯಪ್, ಒಕುಲಸ್, ವರ್ಕ್‌ಪ್ಲೇಸ್,ಪೇಜಸ್,ಪೇಮೆಂಟ್ಸ್,ಥರ್ಡ್-ಪಾರ್ಟಿ ಆ್ಯಪ್ಸ್ ಅಥವಾ ಜಾಹೀರಾತು ಅಥವಾ ಡೆವಲಪರ್ ಖಾತೆಗಳು ಈ ದಾಳಿಗಳಿಗೆ ಗುರಿಯಾಗಿಲ್ಲ ಎನ್ನುವುದು ಇದ್ದುದರಲ್ಲೇ ಸಮಾಧಾನ ಪಟುಕೊಳ್ಳಬಹುದಾದ ಅಂಶವಾಗಿದೆ.

ದಾಳಿಕೋರರು ಆಟೋಮೇಟೆಡ್ ಸ್ಕ್ರಿಪ್ಟ್ ಬಳಸುವ ಮೂಲಕ ಟೋಕನ್‌ಗಳನ್ನು ಸಂಗ್ರಹಿಸುತ್ತ ಒಂದು ಖಾತೆಯಿಂದ ಇನ್ನೊಂದು ಖಾತೆಯನ್ನು ಪ್ರವೇಶಿಸುತ್ತ ಸಾಗಿದ್ದು,ಸುಮಾರು ನಾಲ್ಕು ಲಕ್ಷ ಖಾತೆಗಳನ್ನು ಭೇದಿಸಿದ್ದಾರೆ. ದಾಳಿಕೋರರು ಬಳಿಕ ತಾವು ಸಂಗ್ರಹಿಸಿದ್ದ ಫ್ರೆಂಡ್ಸ್ ಪಟ್ಟಿಯನ್ನು ಬಳಸಿ ಸುಮಾರು 30 ಮಿ. ಖಾತೆಗಳನ್ನು ಪ್ರವೇಶಿಸಿದ್ದಾರೆ ಎಂದು ಫೇಸ್‌ಬುಕ್‌ನ ಉಪಾಧ್ಯಕ್ಷ(ಪ್ರಾಡಕ್ಟ್ ಮ್ಯಾನೇಜ್‌ಮೆಂಟ್) ಗಯ್ ರೋಸೆನ್ ಪತ್ರಿಕಾ ಹೇಳಿಕೆಯಲ್ಲಿ ವಿವರಿಸಿದ್ದಾರೆ.

ದಾಳಿಕೋರರು ನಾಲ್ಕು ಲಕ್ಷ ಖಾತೆಗಳನ್ನು ಭೇದಿಸಲು ವ್ಯೆ ಆ್ಯಜ್ ಫೀಚರ್‌ನಲ್ಲಿಯ ದೌರ್ಬಲ್ಯವನ್ನು ದುರುಪಯೋಗಿಸಿಕೊಂಡಿದ್ದಾರೆ. ಈ ನಾಲ್ಕು ಲಕ್ಷ ಖಾತೆಗಳ ಸ್ಕ್ರಿಪ್ಟ್‌ಗಳು ವ್ಯೆ ಅ್ಯಜ್‌ನ್ನು ಲೋಡ್ ಮಾಡಿಕೊಂಡ ಖಾತೆಗಳಾಗಿದ್ದು, ಅದು ವಾಸ್ತವದಲ್ಲಿ ಆ ವ್ಯಕ್ತಿಗಾಗಿ ಫೇಸ್‌ಬುಕ್ ಪ್ರೊಫೈಲ್‌ನ್ನು ಲೋಡ್ ಮಾಡಿದ್ದಾಗಿರುತ್ತದೆ ಎಂದು ರೋಸೆನ್ ವಿವರಿಸಿದ್ದಾರೆ.

ದಾಳಿಕೋರರು ವ್ಯೆ ಆ್ಯಜ್‌ನ ದೌರ್ಬಲ್ಯವನ್ನು ಬಳಸಿಕೊಂಡು ನಾಲ್ಕು ಲಕ್ಷ ಬಳಕೆದಾರರ ಟೈಮ್‌ಲೈನ್‌ಗಳು,ಫ್ರೆಂಡ್ಸ್ ಲಿಸ್ಟ್, ಅವರು ಸದಸ್ಯರಾಗಿರುವ ಗ್ರುಪ್‌ಗಳು ಮತ್ತು ಅವರ ಇತ್ತೀಚಿನ ಕೆಲವು ಮೆಸೆಂಜರ್ ಕನ್‌ವರ್ಸೇಷನ್‌ಗಳ ಹೆಸರುಗಳನ್ನು ನೋಡಲು ಸಾಧ್ಯವಾಗಿದೆ. ಆದರೆ ಮೆಸೇಜ್ ಕಂಟೆಂಟ್ ದಾಳಿಕೋರರ ಕೈ ಸೇರಿಲ್ಲ ಎಂದು ಫೇಸ್‌ಬುಕ್ ಹೇಳಿದೆ. 15 ಮಿ. ಬಳಕೆದಾರರ ಇನ್ನೊಂದು ಗುಂಪಿನಲ್ಲಿ ಅವರು ತಮ್ಮ ಪ್ರೊಫೈಲ್‌ಗಳಲ್ಲಿ ಏನನ್ನು ಹೊಂದಿದ್ದರು ಎನ್ನುವುದನ್ನು ಅವಲಂಬಿಸಿ ಅವರ ಹೆಸರುಗಳು,ಸಂಪರ್ಕ ವಿವರಗಳು,ದೂರವಾಣಿ ಸಂಖ್ಯೆ ಅಥವಾ ಇ-ಮೇಲ್‌ಗಳ ಕಳ್ಳತನ ಮಾಡಲಾಗಿದೆ.

14 ಮಿ. ಬಳಕೆದಾರರ ಮೂರನೇ ಗುಂಪಿನಲ್ಲಿ ಹೆಸರು ಮತ್ತು ಸಂಪರ್ಕ ವಿವರಗಳ ಜೊತೆಗೆ ಲಿಂಗ,ರಿಲೇಷನ್‌ಶಿಪ್ ಸ್ಟೇಟಸ್,ಜನ್ಮದಿನಾಂಕ,ಇತ್ತೀಚಿನ ಹುಡುಕಾಟಗಳು ಮತ್ತು ವ್ಯಕ್ತಿ ಕೊನೆಯ ಬಾರಿಗೆ ಚೆಕ್ ಇನ್ ಆಗಿದ್ದ ಅಥವಾ ಟ್ಯಾಗ ಮಾಡಲಾಗಿದ್ದ 10 ತಾಣಗಳು ಇತ್ಯಾದಿ ವಿವರಗಳನನ್ನು ಕಳ್ಳತನ ಮಾಡಲಾಗಿದೆ.

ಪೀಡಿತ ಬಳಕೆದಾರರು ಏನು ಮಾಡಬೇಕು?

ಎರಡು ವಾರಗಳ ಹಿಂದೆ ತಮ್ಮ ಅಸೆಸ್ ಟೋಕನ್‌ಗಳನ್ನು ರಿಸೆಟ್ ಮಾಡುವಂತೆ ಲಕ್ಷಾಂತರ ಬಳಕೆದಾರರಿಗೆ ಸೂಚಿಸುವ ಮೂಲಕ ಫೇಸ್‌ಬುಕ್ ಈಗಾಗಲೇ ಖಾತೆಗಳನ್ನು ಸುರಕ್ಷಿತಗೊಳಿಸಿದೆ. ಹೀಗಾಗಿ ಬಳಕೆದಾರರು ಒನ್ನೊಮ್ಮೆ ಲಾಗ್‌ಔಟ್ ಆಗುವ ಮತ್ತು ತಮ್ಮ ಪಾಸ್‌ವರ್ಡ್ ಬದಲಿಸುವ ಅಗತ್ಯವಿಲ್ಲ. ತಮ್ಮ ಮಾಹಿತಿಗಳು ಕಳ್ಳತನವಾಗಿಯೇ ಎನ್ನುವುದನ್ನು ಬಳಕೆದಾರರು ಫೆಸ್‌ಬುಕ್ ಹೆಲ್ಪ್ ಸೆಂಟರ್‌ನಲ್ಲಿ ಪರಿಶೀಲಿಸಿಕೊಳ್ಳಬಹುದು. ಹೇಗಿದ್ದರೂ ಅವರಿಗೆ ಕಸ್ಟಮೈಸ್ಡ್ ಮೆಸೇಜ್ ಕಳುಹಿಸಲಾಗುತ್ತದೆ. ಜೊತೆಗೆ ಹ್ಯಾಕರ್‌ಗಳ ದಾಳಿಗೆ ಗುರಿಯಾಗಿರಬಹುದಾದ ತಮ್ಮ ಆ್ಯಪ್‌ಗಳ ಬಳಕೆದಾರರನ್ನು ಡೆವಲಪರ್‌ಗಳು ಸ್ವಂತ ತನಿಖೆಯ ಮೂಲಕ ಗುರುತಿಸಲು ಸಾಧ್ಯವಾಗುವಂತೆ ಅಗತ್ಯ ಟೂಲ್‌ವೊಂದನ್ನು ಸಹ ಫೇಸಬುಕ್ ರೂಪಿಸಿದೆ ಎಂದು ರೋಸೆನ್ ತಿಳಿಸಿದ್ದಾರೆ.

ಆತಂಕವೇಕೆ?

ಕಳ್ಳತನವಾಗಿರುವ ಮಾಹಿತಿಗಳನ್ನು ನಿಮ್ಮ ಆದ್ಯತೆಗಳನ್ನು ತಿಳಿದುಕೊಂಡು ನಿಮ್ಮನ್ನು ಫಿಶಿಂಗ್ ಮೇಲ್ ಇತ್ಯಾದಿಗಳಿಗೆ ಗುರಿಯಾಗಿಸಲು ಬಳಸಬಹುದಾಗಿದೆ. ಈ ಮಾಹಿತಿಗಳನ್ನು ಬಳಸಿಕೊಂಡಿರಬಹುದಾದ ಶಂಕಾತ್ಮಕ ಇ-ಮೇಲ್‌ಗಳು ಅಥವಾ ಟೆಕ್ಸ್ಟ್ ಮೆಸೇಜ್‌ಗಳು ಅಥವಾ ಕರೆಗಳ ಬಗ್ಗೆ ಬಳಕೆದಾರರು ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News