ಬಾಲಿವುಡ್‌ನಲ್ಲೂ ನಿರ್ಮಾಣವಾಗಲಿದೆ ಅಂಗಮಾಲಿ ಡೈರೀಸ್

Update: 2018-10-13 12:59 GMT

ದಕ್ಷಿಣದ ಸಿನೆಮಾಗಳೆಂದರೆ ಬಾಲಿವುಡ್ ಮಂದಿಗೆ ಎಲ್ಲಿಲ್ಲದ ಸೆಳೆತ. ಬಾಲಿವುಡ್‌ನಲ್ಲಿ ಯಶಸ್ವಿಯಾಗುವ ಸಿನೆಮಾಗಳಲ್ಲಿ ಬಹಳಷ್ಟು ಚಿತ್ರಗಳು ದಕ್ಷಿಣದ ಚಿತ್ರಗಳ ರಿಮೇಕ್‌ಗಳಾಗಿರುತ್ತವೆ. ಈ ಪಟ್ಟಿಯಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚೆಚ್ಚು ಸಿನೆಮಾಗಳು ಸೇರುತ್ತಲೇ ಹೋಗುತ್ತಿವೆ.

ಮಲಯಾಳಂ ಪ್ರೇಕ್ಷಕರನ್ನು ಕುರ್ಚಿಯ ತುದಿಯಲ್ಲಿ ಕೂರುವಂತೆ ಮಾಡಿದ್ದ ಕ್ರೈಂ-ಡ್ರಾಮಾ ಅಂಗಮಾಲಿ ಡೈರೀಸ್ ಚಿತ್ರ ಸದ್ಯ ಬಾಲಿವುಡ್‌ನಲ್ಲಿ ರಿಮೇಕ್ ಆಗುತ್ತಿದೆ. ಏರ್‌ಲಿಫ್ಟ್ ಮತ್ತು ಟಾಯ್ಲೆಟ್-ಏಕ್ ಪ್ರೇಮ್ ಕಥಾ ಮುಂತಾದ ಚಿತ್ರಗಳನ್ನು ನಿರ್ಮಿಸಿರುವ ವಿಕ್ರಂ ಮಲ್ಹೋತ್ರಾ ಅಂಗಮಾಲಿ ಡೈರಿಯನ್ನು ಹಿಂದಿಯಲ್ಲಿ ತಯಾರಿಸುವ ಹಕ್ಕನ್ನು ಪಡೆದುಕೊಂಡಿದ್ದಾರೆ. ಚಿತ್ರವನ್ನು ಹಿಂದಿಯಲ್ಲಿ ನಿರ್ಮಿಸುತ್ತಿರುವ ಬಗ್ಗೆ ಹರ್ಷವನ್ನು ವ್ಯಕ್ತಪಡಿಸಿರುವ ವಿಕ್ರಂ, ಅಂಗಮಾಲಿ ಚಿತ್ರ ನಿಜವಾದ ಅರ್ಥದಲ್ಲಿ ಒಂದು ಮಾಸ್ಟರ್ ಕ್ಲಾಸ್ ಸಿನೆಮಾ ಆಗಿದೆ. ಈ ಚಿತ್ರದಲ್ಲಿ 86 ಮಂದಿ ಪಾದಾರ್ಪಣೆ ಮಾಡಿದ್ದಾರೆ, ಅಸಹಜ ನಿರೂಪಣೆಯನ್ನು ಹೊಂದಿದೆ ಮತ್ತು ಒಂದೇ ಶಾಟ್‌ನಲ್ಲಿ ತೆಗೆದ ಹನ್ನೊಂದು ನಿಮಿಷಗಳ ಕ್ಲೈಮ್ಯಾಕ್ಸ್ ಇದೆ. ಈ ಚಿತ್ರವು ಮಲಯಾಳಿಯೇತರ ಚಿತ್ರ ಪ್ರೇಕ್ಷಕನನ್ನೂ ಚಿತ್ರರಂಗದತ್ತ ಸೆಳೆದಿತ್ತು. ಇಂಥ ಒಂದು ಅಮೂಲ್ಯ ರತ್ನವನ್ನು ಬಾಲಿವುಡ್‌ನಲ್ಲಿ ತಯಾರಿಸಲು ನಾನು ಉತ್ಸುಕನಾಗಿದ್ದೇನೆ ಎಂದು ತಿಳಿಸಿದ್ದಾರೆ. ಅಂಗಮಾಲಿ ಡೈರಿಸ್ ಚಿತ್ರದ ನಿರ್ದೇಶಕ ಲಿಜೊ ಜೋಸ್ ಪೆಲ್ಲಿಸೆರಿ ಹಿಂದಿ ಅವತರಣಿಕೆಯಲ್ಲಿ ಕ್ರಿಯೇಟಿವ್ ಸಲಹೆಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ. ಉಳಿದಂತೆ ಇತರ ತಾಂತ್ರಿಕ ವರ್ಗ ಮತ್ತು ನಟ-ನಟಿಯರಿಗಾಗಿ ಶೋಧ ನಡೆಯುತ್ತಿದೆ. ಸಣ್ಣ ಪಟ್ಟಣವೊಂದರಲ್ಲಿ ನಡೆಯುವ ಗ್ಯಾಂಗ್ ವಾರ್‌ಗಳು ಮತ್ತು ಬದುಕುಳಿಯಲು ಗುಂಪಿನ ಜನರು ತಮಗೆ ಸಾಧ್ಯವಿರುವ ಎಲ್ಲ ರೀತಿಯ ವಿಧಾನಗಳನ್ನು ಮತ್ತು ಹುಚ್ಚುತನವನ್ನು ಅನುಸರಿಸುವ ಕತೆಯನ್ನು ಅಂಗಮಾಲಿ ಡೈರೀಸ್ ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News