ಏಕತೆಯ ಪ್ರತಿಮೆಗೆ ಅಂತಿಮ ಸ್ಪರ್ಶ: ಉದ್ಘಾಟನೆಗೆ ದಿನ ಸನ್ನಿಹಿತ

Update: 2018-10-13 15:13 GMT

ಕೆವಡಿಯ (ಗುಜರಾತ್),ಅ.13: ಜಗತ್ತಿನ ಅತ್ಯಂತ ಎತ್ತರದ ಪ್ರತಿಮೆ ಎಂದು ವ್ಯಾಖ್ಯಾನಿಸಲಾಗಿರುವ ಗುಜರಾತ್‌ನಲ್ಲಿ ನಿರ್ಮಾಣಗೊಳ್ಳುತ್ತಿರುವ ಸರ್ದಾರ್ ವಲ್ಲಭ ಬಾಯಿ ಪಟೇಲ್ ಅವರ ಪ್ರತಿಮೆ ಅಥವಾ ಏಕತೆಯ ಪ್ರತಿಮೆಯನ್ನು ಅನಾವರಣಗೊಳಿಸುವ ದಿನ ಸಮೀಪಿಸುತ್ತಿದ್ದು ಪ್ರತಿಮೆಗೆ ಅಂತಿಮ ಸ್ಪರ್ಶ ನೀಡಲಾಗುತ್ತಿದೆ. ನರೇಂದ್ರ ಮೋದಿ ಸರಕಾರದ ಅತ್ಯಂತ ಮಹಾತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾಗಿರುವ ಏಕತೆಯ ಪ್ರತಿಮೆಯ ಉದ್ಘಾಟನೆಯನ್ನು ಅಕ್ಟೋಬರ್ 31ರಂದು ಪ್ರಧಾನಿ ಮೋದಿ ಮಾಡಲಿದ್ದಾರೆ.

ನರ್ಮದಾ ನದಿ ತೀರದಲ್ಲಿ ಸಾಧು ಬೆಟ್‌ನಲ್ಲಿ ನಿರ್ಮಿಸಲಾಗುತ್ತಿರುವ ಈ ಪ್ರತಿಮೆಯ ನಿರ್ಮಾಣ ಕಾರ್ಯದಲ್ಲಿ ಸುಮಾರು 3,400 ಕಾರ್ಮಿಕರು ಮತ್ತು 250 ಇಂಜಿನಿಯರ್‌ಗಳು ಹಗಲುರಾತ್ರಿಯೆನ್ನದೆ ಶ್ರಮಿಸುತ್ತಿದ್ದಾರೆ. ದೇಶದ ಪ್ರಥಮ ಗೃಹ ಸಚಿವ ಪಟೇಲ್ ಅವರ 182 ಮೀಟರ್ ಎತ್ತರದ ಪ್ರತಿಮೆಯನ್ನು ಸರ್ದಾರ್ ವಲ್ಲಭ ಬಾಯಿ ಪಟೇಲ್ ಅವರ ಜನ್ಮ ದಿನದಂದು ಪ್ರಧಾನಿ ಮೋದಿ ಅನಾವರಣ ಮಾಡಲಿದ್ದಾರೆ. ಅಧಿಕಾರಿಗಳ ಪ್ರಕಾರ, 2,389 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಪ್ರತಿಮೆಯ ಆಂತರಿಕ ಭಾಗದ ಕೆಲಸಗಳು ವೇಗವಾಗಿ ಸಾಗುತ್ತಿದೆ. ಇವುಗಳಲ್ಲಿ ಪಟೇಲರಿಗೆ ಸಂಬಂಧಿಸಿದ ವಸ್ತುಗಳ ಮ್ಯೂಸಿಯಂ, ಮೆಟ್ಟಿಲುಗಳು ಮತ್ತು ಗ್ಯಾಲರಿ ಸೇರಿದೆ. ತಳಭಾಗದಲ್ಲಿ ನಿರ್ಮಿಸಲಾಗುತ್ತಿರುವ ಸ್ಮಾರಕ ಉದ್ಯಾನವನಕ್ಕೂ ಅಂತಿಮ ಸ್ಪರ್ಶ ನೀಡಲಾಗುತ್ತಿದೆ.

ಅಕ್ಟೋಬರ್ 31, 2013ರಂದು ಮೋದಿ ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಏಕತೆ ಪ್ರತಿಮೆಗೆ ಶಿಲಾನ್ಯಾಸ ನೆರವೇರಿಸಿದ್ದರು. ಈ ಪ್ರತಿಮೆಯ ನಿರ್ಮಾಣದ ಗುತ್ತಿಗೆಯನ್ನು ಡಿಸೆಂಬರ್ 3, 2014ರಲ್ಲಿ ಎಲ್‌ಆ್ಯಂಡ್‌ಟಿ ಸಂಸ್ಥೆಗೆ ನೀಡಲಾಗಿತ್ತು. ಸಂಪೂರ್ಣವಾದ ನಂತರ ಈ ಪ್ರತಿಮೆಯನ್ನು ವೀಕ್ಷಿಸಲು ಪ್ರತಿದಿನ 15,000 ಪ್ರವಾಸಿಗರು ಆಗಮಿಸುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News