ಅರವಿಂದ ಸಮೇತ ವೀರ ರಾಘವ: ಹೊಸತೇನನ್ನೂ ಹೇಳದ 'ಅರವಿಂದ ಸಮೇತ'

Update: 2018-10-14 11:11 GMT
Editor : ಶಶಿ

ಚಿತ್ರದ ಹೆಸರು ಮಾತ್ರವಲ್ಲ, ಹಲವಾರು ಕಾರಣಗಳಿಂದ ಭಾರೀ ನಿರೀಕ್ಷೆ ಮೂಡಿಸಿದಂಥ ಚಿತ್ರ ಅರವಿಂದ ಸಮೇತ ವೀರ ರಾಘವ. ಆದರೆ ಆ ನಿರೀಕ್ಷೆಗೆ ತಕ್ಕಂತೆ ಚಿತ್ರ ಮೂಡಿದೆಯಾ ಎಂದರೆ ಇಲ್ಲ ಎನ್ನುವುದೇ ಉತ್ತರವಾದೀತು.

ಅಂದ ಹಾಗೆ ಚಿತ್ರದಲ್ಲಿ ವೀರ ರಾಘವ ನಾಯಕನಾದರೆ ಅರವಿಂದ ಎನ್ನುವುದು ನಾಯಕಿಯ ಹೆಸರು! ಈ ಸಿನೆಮಾದ ಮೇಲಿನ ಸಹಜ ನಿರೀಕ್ಷೆಗೆ ಪ್ರಮುಖ ಕಾರಣ ಇದು ತೆಲುಗು ಚಿತ್ರರಂಗದ ಸ್ಟಾರ್ ನಟ ಜ್ಯೂನಿಯರ್ ಎನ್‌ಟಿಆರ್ ನಟಿಸಿರುವಂಥ ಸಿನೆಮಾ. ಅದರಲ್ಲಿಯೂ ಜ್ಯೂ. ಎನ್‌ಟಿಆರ್ ತಂದೆಯ ಸಾವಿನ ಬಳಿಕ ತೆರೆಕಾಣುತ್ತಿರುವ ಪ್ರಥಮ ಚಿತ್ರ. ಈ ಚಿತ್ರದಲ್ಲಿ ಹರಿಕೃಷ್ಣ ನಟಿಸಿಲ್ಲವಾದರೂ ಆರಂಭದಲ್ಲೇ ನಾಯಕನ ತಂದೆಯ ಸಾವಿನ ದೃಶ್ಯವಿದೆ. ಕಾಕತಾಳೀಯ ಎಂಬಂತೆ ಚಿತ್ರಿಸಲಾದ ಈ ದೃಶ್ಯವೊಂದೇ ಚಿತ್ರಕ್ಕೆ ದೊಡ್ಡ ಮಟ್ಟದ ಸೆಂಟಿಮೆಂಟ್ ಸೃಷ್ಟಿಯಾಗುವಂತೆ ಮಾಡಿದೆ. ‘ಅತ್ತಾರಿಂಟಿಕಿ ದಾರೇದಿ’ (ಕನ್ನಡದ ‘ರನ್ನ’) ಚಿತ್ರ ಖ್ಯಾತಿಯ ತ್ರಿವಿಕ್ರಮ್ ನಿರ್ದೇಶನದ ಚಿತ್ರವಾದರೂ ಕಥೆಯ ಮೂಲಾಂಶ ಎಲ್ಲವೂ ಮಾಣಿಕ್ಯ ಸಿನೆಮಾ ಮಾದರಿಯಲ್ಲಿದೆ. ಬಹುಶಃ ರಾಯಲ ಸೀಮೆಯ ಕಥೆ ಎಂದೊಡನೆ ಎರಡು ಗುಂಪುಗಳ ನಡುವಿನ ಹೊಡೆದಾಟ ಮತ್ತು ವಿದೇಶದಿಂದ ಮರಳುವ ನಾಯಕ ಇವೆರಡು ಅಂಶಗಳನ್ನು ಬಿಟ್ಟು ತೆಲುಗು ಚಿತ್ರರಂಗದ ಪ್ರಮುಖರ ತಲೆಯೇ ಓಡುತ್ತಿಲ್ಲವೇನೋ ಎಂಬಂತಾಗಿದೆ. ಇಲ್ಲಿಯೂ ಅದೇ ಕಥೆೆ. ನಾಯಕನ ತಂದೆಯಾಗಿ ನಾಗಬಾಬು ಕಾಣಿಸಿಕೊಂಡರೆ, ಖಳನಾಯಕನಾಗಿ ಜಗಪತಿ ಬಾಬು ನಟಿಸಿದ್ದಾರೆ. ಮೊದಲ ಒಂದೆರಡು ದೃಶ್ಯಗಳ ಬಳಿಕ ವಿದೇಶದಿಂದ ನಾಯಕನ ಆಗಮನ. ಅದೇ ದೃಶ್ಯದಲ್ಲೇ ನಾಗಬಾಬುವಿನ ಸಾವು. ನಾಯಕ ಶಾಂತಿಪ್ರಿಯ. ಹಾಗಾಗಿ ಇಂಟ್ರಡಕ್ಷನ್ ದೃಶ್ಯದಲ್ಲೇ ಪರಮ ಹಿಂಸೆಯ ಹೊಡೆದಾಟ ನಡೆಯುತ್ತದೆ. ಆ ಹೊಡೆದಾಟದೊಂದಿಗೆ ನಾಯಕ ಊರು ಬಿಡುತ್ತಾನೆ. ನಗರದಲ್ಲಿ ನಾಯಕಿ ಸಿಗುತ್ತಾಳೆ. ಅದನ್ನು ಬಿಟ್ಟು ಕತೆಯಲ್ಲಿ ಹೇಳಿಕೊಳ್ಳುವಂತಹ ವಿಚಾರಗಳೇನೂ ಇಲ್ಲ.

ನಾಯಕನಾಗಿ ಎನ್‌ಟಿಆರ್ ನಟನೆ ಸರಳ ವಿರಳ ಅಮೋಘ. ನಾಯಕಿಯಾಗಿ ಕರಾವಳಿಯ ಪೂಜಾ ಹೆಗ್ಡೆಗೆ ಒಂದಷ್ಟು ಕ್ಯೂಟ್ ಸನ್ನಿವೇಶಗಳಿವೆ. ಸುನೀಲ್ ತಮ್ಮ ಹಳೆಯ ನಗುವನ್ನು ಮರೆತು ರೀ ಎಂಟ್ರಿ ನೀಡಿದ್ದಾರೆ. ಲಕ್ಷ್ಮೀ ಗೋಪಾಲ ಸ್ವಾಮಿ, ಸಿತಾರ, ಮೇಘ ಶ್ರೀ ಸೇರಿದಂತೆ ಕನ್ನಡಿಗರಿಗೆ ಆತ್ಮೀಯವೆನಿಸುವ ಒಂದಷ್ಟು ನಟಿಯರಿದ್ದಾರೆ. ಜೊತೆಗೆ ರವಿಶಂಕರ್ ಸಹೋದರ ಅಯ್ಯಪ್ಪರೌಡಿ ಗೆಟಪ್‌ನಲ್ಲಿದ್ದರೂ ಸೆಂಟಿಮೆಂಟ್ ಹಾಡಿನ ಮೂಲಕ ವಿಶೇಷವಾಗಿ ಗಮನ ಸೆಳೆಯುತ್ತಾರೆ. ಆದರೆ ಎಲ್ಲಕ್ಕಿಂತ ಮುಖ್ಯವಾಗಿ ಇಲ್ಲಿ ಉಲ್ಲೇಖಿಸಲೇ ಬೇಕಾಗಿರುವುದು ಜಗಪತಿ ಬಾಬು ನಟನೆಯನ್ನು. ಒಂದು ಕಾಲದಲ್ಲಿ ಚಾಕಲೇಟ್ ಹೀರೋವಾಗಿ ಮನಗೆಲ್ಲುತ್ತಿದ್ದ ಅದೇ ಜಗಪತಿ ಬಾಬುವೇನಾ ಇಂಥ ಭಯ ಹುಟ್ಟಿಸುವ ರಕ್ತ ಪಿಪಾಸುವಾಗಿ ನಟಿಸಿರುವುದು ಎಂಬ ಸಂದೇಹ ಮೂಡುವುದು ಸಹಜ. ಜೊತೆಗೆ ರಾಮ್ ಲಕ್ಷ್ಮಣ್ ಸಾಹಸದ ದೃಶ್ಯಗಳ ಬಗ್ಗೆಯೂ ಪ್ರಸ್ತಾಪಿಸಲೇ ಬೇಕು. ಬಹುಶಃ ಇಷ್ಟೊಂದು ಪರ್ಫೆಕ್ಟ್ ಎನಿಸುವ ಫೈಟ್ ಕಂಪೋಸಿಂಗ್, ಎಡಿಟಿಂಗ್ ಮತ್ತು ಛಾಯಾಗ್ರಹಣದ ಕಾರಣದಿಂದಲೇ ಇರಬಹುದು ತೆಲುಗಿನ ಕ್ರೌರ್ಯ ತುಂಬಿದ ಹೊಡೆದಾಟಕ್ಕೂ ಅಭಿಮಾನಿಗಳಿರುವುದು. ಒಟ್ಟಿನಲ್ಲಿ ತೆಲುಗು ಚಿತ್ರ ಪ್ರಿಯರು ಮನರಂಜನೆ ಪಡೆಯಬಲ್ಲ ಸಿನೆಮಾ ಎಂದು ಒಪ್ಪಿಕೊಳ್ಳಲೇಬೇಕು.

ತಾರಾಗಣ: ಜ್ಯೂ. ಎನ್‌ಟಿಆರ್, ಪೂಜಾ ಹೆಗ್ಡೆ

ನಿರ್ದೇಶಕ: ತ್ರಿವಿಕ್ರಮ್

ನಿರ್ಮಾಣ: ಎಸ್. ರಾಧಾಕೃಷ್ಣ

Writer - ಶಶಿ

contributor

Editor - ಶಶಿ

contributor

Similar News